ಬಾಗೇಪಲ್ಲಿ: ಆಂಧ್ರದ ಗಡಿಯಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ರಾತ್ರಿ ವೇಳೆಯಲ್ಲಿ ಕೃಷಿ ಉತ್ಪನ್ನಗಳನ್ನು ತರುವ ರೈತರು ರೈತ ಭವನದಲ್ಲಿ ತಂಗುತ್ತಾರೆ. ಆದರೆ ಈ ಭವನದಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ರಸ್ತೆ, ಚರಂಡಿ ಮುಂತಾದ ಮೂಲಭೂತ ಸಮಸ್ಯೆಗಳಿಂದ ವಂಚಿತವಾಗಿದ್ದು, ರೈತರು ಪರದಾಡುವಂತಾಗಿದೆ.
ಸುಮಾರು 10 ಎಕರೆ ಪ್ರದೇಶದಲ್ಲಿ ಇರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಸರಿಯಾದ ರಸ್ತೆಯಿಲ್ಲದೇ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಿರುವುದರಿಂದ ಕಿಷ್ಕಿಂಧೆಯಾಗಿ ಪರಿವರ್ತನೆಯಾಗಿದೆ. ಟೊಮೆಟೋ ಮಾರಾಟ ಜೋರಾಗಿ ಸಾಗಿದ್ದು ಕಳಪೆ ಟೊಮೆಟೋವನ್ನು ರಸ್ತೆಗೆ ಎಸೆಯುತ್ತಿರುವುದರಿಂದ ಕೊಳೆತು ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.
ಶುಚಿ ಮಾಡುವ ಕಾರ್ಮಿಕರು ಇಲ್ಲದಿರುವುದು, ಗುತ್ತಿಗೆ ಪಡೆದಿರುವವರು ಇತ್ತ ಸುಳಿವೇ ಇರುವುದಿಲ್ಲ. ಮಾರುಕಟ್ಟೆಗೆ ಕೃಷಿ ಉತ್ಪನ್ನಗಳನ್ನು ತರುವ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇಲ್ಲದಿರುವುದರಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಸಂಚಾರಕ್ಕೆ ತೊಂದರೆ: ಬೆಳಗ್ಗೆ 4 ಗಂಟೆಗೆ ಪ್ರಾರಂಭವಾಗುವ ಮಾರುಕಟ್ಟೆ 8 ಗಂಟೆವರೆಗೂ ವಾಹನ, ವ್ಯಾಪಾರಿಗಳ ಹಾಗೂ ರೈತರಿಂದ ತುಂಬಿರುತ್ತದೆ. ಆವರಣದಲ್ಲಿ ರಸ್ತೆಗಳಿಗೆ ಟಾರ್ ಅಥವಾ ಸಿಮೆಂಟ್ ಹಾಕಿಸದಿರುವುದರಿಂದ ವಾಹನ ಮತ್ತು ಜನ ಸಂಚಾರಕ್ಕೆ ಕಿರಿಕಿರಿಯಾಗಿದೆ.
ನೋಟಿಸ್ ಜಾರಿ: ಬೆಂಗಳೂರಿನ ಗುತ್ತಿಗೆದಾರರೊಬ್ಬರು ಆವರಣದಲ್ಲಿ ಶುಚಿ ಕಾಪಾಡಲು ಟೆಂಡರ್ ಮೂಲಕ ಗುತ್ತಿಗೆ ಪಡೆದಿದ್ದು, ಆವರಣವನ್ನು ಸಮರ್ಪಕವಾಗಿ ಶುಚಿ ಮಾಡದಿರುವುದರಿಂದ ಎಪಿಎಂಸಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ಬಂದರೆ ಮಳೆ ನೀರು ಆವರಣದಲ್ಲಿಯೇ ಸಂಗ್ರಹವಾಗುವುದರಿಂದ ಚಿಕ್ಕ ಕೆರೆಯಂತೆ ಪರಿವರ್ತನೆಯಾಗುತ್ತದೆ.
ಎಪಿಎಂಸಿ ಆವರಣದಲ್ಲಿ ಒಂದು ರಸ್ತೆಗೆ ಸಿಮೆಂಟೆ ರಸ್ತೆ ಹಾಕಲಾಗಿದ್ದು, ಉಳಿದ ಕಡೆಗಳಲ್ಲಿ ಸಿಮೆಂಟ್ ರಸ್ತೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ರೈತ ಭವನ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿ ಪಡೆದ ನಂತರ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಶೌಚಾಲಯ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
-ಉಮಾ, ಕಾರ್ಯದರ್ಶಿ ಎಪಿಎಂಸಿ ಮಾರುಕಟ್ಟೆ ಬಾಗೇಪಲ್ಲಿ