ನರೇಗಲ್ಲ: ರೋಣ ತಾಲೂಕಿನ ಸುಕ್ಷೇತ್ರ ಇಟಗಿ ಭೀಮಾಂಭಿಕಾ ಗಂಡನ ಊರು ನಿಡಗುಂದಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ನಿಡಗುಂದಿಕೊಪ್ಪ ಮೂಲ ಸೌಲಭ್ಯದಿಂದ ವಂಚಿತವಾಗಿದೆ. ಇಲ್ಲಿ ಸುಮಾರು 1500ಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ನರೇಗಲ್ಲ, ನಿಡಗುಂದಿಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಸುಮಾರು 25 ವರ್ಷಗಳಿಂದ ಈ ರಸ್ತೆ ಸುಧಾರಣೆ ಕಂಡಿಲ್ಲ. ದೊಡ್ಡ ದೊಡ್ಡ ಹೊಂಡ ಬಿದ್ದಿದ್ದರಿಂದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವಂತಾಗಿದೆ.
ಸೊಳ್ಳೆಗಳ ತವರು: ನೆಪ ಮಾತ್ರ ಎಂಬಂತೆ ಮಳೆ ಬಂದಾಗೊಮ್ಮೆ ಅಲ್ಲೊಂದು ಇಲ್ಲೊಂದು ಚರಂಡಿಯನ್ನು ಅರೆಬರೆಯಾಗಿ ಸ್ವಚ್ಛಗೊಳಿಸುತ್ತಿದ್ದಾರೆ. ಹೀಗಾಗಿ ಚರಂಡಿಗಳೆಲ್ಲ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ತವರು ಮನೆಯಂತಾಗಿದೆ. ನಿವಾಸಿಗಳು ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಅವೈಜ್ಞಾನಿಕ ಕಾಮಗಾರಿ: ಗ್ರಾಮೀಣ ಪ್ರದೇಶದ ಒಳಭಾಗದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಆದರೆ, ಬಹುತೇಕ ಕಡೆಗಳಲ್ಲಿ ರಸ್ತೆ ಪಕ್ಕ ಚರಂಡಿ ನಿರ್ಮಿಸಿಲ್ಲ. ಅವೈಜ್ಞಾನಿಕವಾಗಿ ಕೈಗೊಂಡ ಕಾಮಗಾರಿ ಪರಿಣಾಮ ಮಳೆ ನೀರು ಹೋಗಲು ಎಲ್ಲಿಯೂ ಸ್ಥಳಾವಕಾಶ ಇಲ್ಲದಂತಾಗಿದೆ. ಕೆಲ ರಸ್ತೆಗೆ ಹೊಂದಿಕೊಂಡತೆ ಚರಂಡಿ ನಿರ್ಮಿಸಲಾಗಿದೆ. ಆದರೆ, ಅವು ಸ್ವಚ್ಛತೆ ಕಾಣದೇ ಬಾಯಿಕಟ್ಟಿಕೊಂಡಿವೆ.
ಒಂದೇ ಶುದ್ಧ ಕುಡಿಯುವ ನೀರಿನ ಘಟಕ: ಗ್ರಾಮಕ್ಕೆ ಒಂದೇ ಶುದ್ಧ ಕುಡಿಯುವ ನೀರಿನ ಘಟಕ ಇರುವುದರಿಂದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿಗೆ ಪರದಾಡುವಂತಹ ಸ್ಥಿತಿ ಕೇಲವೊಮ್ಮೆ ಒದಗಿ ಬರುತ್ತದೆ. ವರ್ಷದಲ್ಲಿ ಎರಡು ಬಾರಿಯಾದರೂ ಶುದ್ಧ ಕುಡಿಯುವ ನೀರಿನ ಘಟಕ ಕೈಕೊಡುತ್ತದೆ. ಇದರಿಂದ ಸಾರ್ವಜನಿಕರಿಗೆ ಮತ್ತೆ ನಳದ ನೀರು ಕುಡಿಯುವುದು ತಪ್ಪುತ್ತಿಲ್ಲ. ಇದಕ್ಕಾಗಿ ಗ್ರಾಪಂ ವತಿಯಿಂದ ಇನ್ನೊಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Advertisement
ಮುಂಗಾರು ಮಳೆ ಆರಂಭವಾಗಿ ಹಲವು ದಿನ ಕಳೆಯುತ್ತಾ ಬಂದರು ಗ್ರಾಪಂ ಇಲ್ಲಿನ ಚರಂಡಿ ಸ್ವಚ್ಛಗೊಳಿಸುವ ಕೆಲಸಕ್ಕೆ ಮುಂದಾಗಿಲ್ಲ. ಈ ಭಾಗದಲ್ಲಿ ಇತ್ತೀಚೆಗೆ ಸುರಿದ ಸಾಧಾರಣ ಮಳೆಗೆ ಗ್ರಾಮಗಳಲ್ಲಿರುವ ಚರಂಡಿಗಳೆಲ್ಲ ಬಾಯಿಕಟ್ಟಿಕೊಂಡು ಮಲೀನ ನೀರು ರಸ್ತೆ ಮೇಲೆಲ್ಲ ಹರಿದರೂ ಗ್ರಾಪಂ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ.
Related Articles
Advertisement
ಕುಡಿಯುವ ನೀರಿನ ಕೆರೆ ಅವಸಾನದತ್ತ: ಗ್ರಾಮದ ಐತಿಹಾಸಿಕ ಕುಡಿಯುವ ನೀರಿನ ಕೆರೆಗೆ ನಿರ್ವಹಣೆ ಕೊರತೆಯಿಂದ ಕೆರೆಯಲ್ಲಿ ಹೂಳು ತುಂಬಿದೆ. ಹೀಗಾಗಿ ಕೆರೆಯ ನೀರಿನ ಸಾಮರ್ಥ್ಯ ಕುಸಿದಿದೆ. ಅಪಾರ ಪ್ರಮಾಣದ ಹೂಳು ಕೆರೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಕೆರೆಗೆ ನೀರು ಹರಿದು ಬರುವ ಹಳ್ಳಗಳು, ಕೆರೆಯ ಅಂಗಳ ಹಾಗೂ ಏರಿ ಮೆಲೆ ಜಾಲಿಗಿಡಗಳು ದೊಡ್ಡ ಪ್ರಮಾಣದಲ್ಲಿ ಬೆಳೆದಿವೆ. ಕೆರೆಯಲ್ಲಿ ಒಂದೆಡೆ ಹೂಳು ಹೆಚ್ಚಾಗುತ್ತಿದೆ. ಮತ್ತೂಂದೆಡೆ ಗ್ರಾಮದ ಕಸ, ಕಟ್ಟಡ ಅವಶೇಷಗಳು ಸೇರಿದಂತೆ ನಾನಾ ತ್ಯಾಜ್ಯಗಳನ್ನು ಕೆರೆಗೆ ಸುರಿಯಲಾಗುತ್ತಿದೆ. ಹೀಗಾಗಿ ಕೆರೆಯ ಅಸ್ತಿತ್ವಕ್ಕೆ ಧಕ್ಕೆಯಂಟಾಗುತ್ತಿದೆ. ಸುತ್ತಲಿನ ಜನರು ಕೆರೆಗೆ ಕಸ ತಂದು ಸುರಿಯುತ್ತಿದ್ದಾರೆ. ಹೀಗಾಗಿ ಕೆರೆಯ ಒಡಲು ಕಸದಿಂದ ತುಂಬುತ್ತಿದೆ. ಕೆರೆಗಳ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾಕಷ್ಟು ಶ್ರಮಿಸುತ್ತಿವೆ. ಆದರೆ, ನಿಡಗುಂದಿಕೊಪ್ಪ ಗ್ರಾಮದ ಕೆರೆ ಮಾತ್ರ ಅವಸಾನದತ್ತ ತೆರಳುತ್ತಿರುವುದು ವಿಷಾದನೀಯವಾಗಿದೆ.
ಬಾವಿಗೆ ತಡೆಗೋಡೆ ನಿರ್ಮಿಸಿ: ನೂರಾರು ವರ್ಷಗಳ ಇತಿಹಾಸವಿರುವ ಬಾವಿಗೆ ತಡೆಗೋಡೆ ಇಲ್ಲದೆ ಜಾನುವಾರುಗಳು ಕಾಲ ಜಾರಿ ಬಾವಿಗೆ ಬಿದ್ದು ಗಾಯಗೊಂಡಿವೆ. ತಡೆಗೋಡೆ ಇಲ್ಲದಿರುವುದರಿಂದ ರಾತ್ರಿಯ ವೇಳೆ ಬಾವಿಯ ಪಕ್ಕದಲ್ಲಿರುವ ರಸ್ತೆಯಲ್ಲಿ ಸಂಚರಿಸುವ ಮುನ್ನ ಯೋಚಿಸಬೇಕಾಗಿದೆ. ಮಳೆ ಬಂದಾಗ ಜಾರಿ ಬಾವಿಯೊಳಗೆ ಬೀಳುವ ಅಪಾಯವಿದೆ. ಇದರಿಂದ ಗ್ರಾ.ಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತುಕೊಂಡು ಕೂಡಲೇ ಬಾವಿಗೆ ತಡೆಗೋಡೆ ನಿರ್ಮಿಸಿಬೇಕೆಂದು ಗ್ರಾಮದ ಯುವಕರು ಒತ್ತಾಯಿಸುತ್ತಿದ್ದಾರೆ.
ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಜನಪ್ರತಿನಿಧಿಗಳು, ಗ್ರಾಪಂ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಬೇಕು.•ಶರಣಪ್ಪ ಮಾಸ್ತಿ, ಗ್ರಾಮದ ಯುವಕ
ನಿಡಗುಂದಿಕೊಪ್ಪ ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಅಲ್ಲಿನ ಜನಪ್ರತಿನಿಧಿಗಳು ಹಾಗೂ ಪಿಡಿಒದೊಂದಿಗೆ ಚರ್ಚಿಸಿ ಮುಂದಿನ ದಿನಮಾನಗಳಲ್ಲಿ ಈ ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು.•ಎಂ.ವಿ. ಚಳಗೇರಿ, ತಾ.ಪಂ ಇಒ
•ಸಿಕಂದರ ಎಂ. ಆರಿ