Advertisement

ಸೌಲಭ್ಯ ವಂಚಿತ ಮಿನಿವಿಧಾನ ಸೌಧ

02:09 PM Apr 11, 2022 | Team Udayavani |

ಯಳಂದೂರು: ತಾಲೂಕು ಆಡಳಿತದ ಅನೇಕ ಕಚೇರಿಗಳ ಸಮುಚ್ಚವಾಗಿರುವ ಮಿನಿ ವಿಧಾನಸೌಧ ನಿರ್ವಹಣೆ ಕೊರತೆಯಿಂದ ಸೊರಗಿದೆ.

Advertisement

ಒಂದೆಡೆ ಕಟ್ಟಡ ಶಿಥಿಲಗೊಂಡು ಮೇಲಿನ ಗಾರೆ ಉದುರಿತ್ತಿದ್ದರೆ, ಮತ್ತೂಂದೆಡೆ ಸಾರ್ವಜನಿಕರ ಉಪಯೋಗಕ್ಕೆ ನಿರ್ಮಿಸಿರುವ ಶೌಚಗೃಹ ಮುಚ್ಚಿದೆ. ನಿತ್ಯ ಕೆಲಸ ಕಾರ್ಯಗಳಿಗೆ ಬರುವವರಿಗೆ ಕುಡಿಯುವ ನೀರಿನ ಸೌಲಭ್ಯವೂ ಇಲ್ಲಿ ಲಭ್ಯವಿಲ್ಲ!

ಪಟ್ಟಣ ಹೂರವಲಯದಲ್ಲಿರುವ ಮಿನಿವಿಧಾನ ಸೌಧವನ್ನು 1997ರಲ್ಲಿ ಒಂದೇ ಸೂರಿನಡಿ ಎಲ್ಲಾ ಕಚೇರಿಗಳು ಕಾರ್ಯನಿರ್ವಹಿಸ ಬೇಕೆಂದು ಅಂದು ಕೊಳ್ಳೇಗಾಲ ಶಾಸಕರಾಗಿದ್ದ ಎಸ್‌.ಜಯಣ್ಣ ರಾಜ್ಯ ಸರ್ಕಾರದಿಂದ 1 ಕೋಟಿ ರೂ. ಬಿಡುಗಡೆ ಮಾಡಿಸಿ ಮಿನಿವಿಧಾನ ಸೌಧ ಕಟ್ಟಡ ನಿರ್ಮಿಸಿ, ಅಂದು ಉಪಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಮಿನಿವಿಧಾನ ಸೌಧ ಕಟ್ಟಡ ಉದ್ಘಾಟನೆಯಾಗಿ ಈಗ 25 ವರ್ಷವಾಗಿದೆ.

ಇಲ್ಲಿಯ ತನಕ ಕಟ್ಟಡಕ್ಕೆ ಸುಣ್ಣ ಬಣ್ಣ, ಸಣ್ಣಪುಟ್ಟ ರಿಪೇರಿ ಮಾಡಿಸಿಕೊಳ್ಳುತ್ತಾರೆ. ಸಮರ್ಪಕ ಕೆಲಸ ಮಾಡುತ್ತಿಲ್ಲ. ಇದರಿಂದ ಕಟ್ಟಡ ನಿರ್ವಾಹಣೆ ಕೊರತೆಯಿಂದ ಶಿಥಿಲಗೊಂಡಿದ್ದು, ಚಾವಣಿ ಸಿಮೆಂಟ್‌ ಕಿತ್ತು ಬರುತ್ತಿದೆ. ಕಂಬಿಗಳು ಹೊರಗೆ ಕಾಣಿಸಿಕೊಳ್ಳುತ್ತಿವೆ. ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ, ವಿವಿಧ ಕೆಲಸ ಕಾರ್ಯ ಮಾಡಿಸಿಕೊಳ್ಳಲು ಬರುವ ರೈತರು, ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.

ಯಾವ ಇಲಾಖೆ ಆಡಳಿತ ನಡೆಸುತ್ತದೆ: ಮಿನಿ ವಿಧಾನಸೌಧದಲ್ಲಿ ಕಂದಾಯ, ಆಹಾರ, ಉಪನೋಂದಣಿ ಕಚೇರಿ, ಮೀನುಗಾರಿಕೆ, ರೇಷ್ಮೆ, ಸರ್ವೇ, ಅಲ್ಪಸಂಖ್ಯಾತ ಸೇರಿ ಹಲವು ಇಲಾಖೆಗಳು ಇಲ್ಲಿ ಕಾರ್ಯಚಟುವಟಿಕೆ ನಡೆಸುತ್ತ ಬಂದಿವೆ. ಆದರೂ, ಇಲ್ಲಿ ಕಾರ್ಯನಿರ್ವಹಿಸುವ ಇಲಾಖೆ ಅಧಿಕಾರಿಗಳು ತಮ್ಮ ಕಚೇರಿಗಳು ಅಳತೆಗಾದರೂ ದುರಸ್ತಿಪಡಿಸಿಕೊಂಡಿದ್ದರೆ ಇಂದು ಮಿನಿವಿಧಾನಸೌಧ ಇಷ್ಟೊಂದು ದುಸ್ಥಿತಿಗೆ ಬರುತ್ತಿರಲ್ಲಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

Advertisement

ಪ್ರತಿಯೊಂದು ಇಲಾಖೆಗೆ ಪ್ರತಿವರ್ಷ ಕಚೇರಿ ನಿರ್ವಹಣೆಗೆ ಎಂದು ಸರ್ಕಾರ ಒಂದಿಷ್ಟು ಹಣ ಮಂಜೂರಾತಿ ಮಾಡುತ್ತದೆ. ಆ ಹಣದಲ್ಲೂ ಕಚೇರಿ ರಿಪೇರಿ ಮಾಡಿಸಿಲ್ಲ.  ಈ ಹಣ ಬಳಕೆ ಮಾಡದೆ ಇರುವುದು ಕಚೇರಿ ಇಂದಿನ ಸ್ಥಿತಿಗೆ ಕಾರಣವಾಗಿದೆ ಎಂದು ಸ್ಥಳೀಯ ರಾದ ಕುಮಾರ, ಪ್ರಕಾಶ್‌ ದೂರಿದ್ದಾರೆ.

ಮೂಲಭೂತ ಸೌಲಭ್ಯ ವಂಚಿತ: ತಾಲೂಕಿನ ಮಿನಿ ವಿಧಾನಸೌಧದಲ್ಲಿ ಹಲವು ಇಲಾಖೆ ಕಚೇರಿಗಳಿದ್ದರೂ ನಿತ್ಯ ಆಗಮಿಸುವ ಜನರಿಗೆ ಕುಡಿಯುವ ನೀರು ಸೌಲಭ್ಯ ನೀಡಿಲ್ಲ. ಪ್ರಸುತ್ತ ಬೇಸಿಗೆ ಕಾಲವಾಗಿದೆ. ನೀರಡಿಕೆಯಾದರೆ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಇಲ್ಲಿದೆ. ಇಲ್ಲಿದ್ದ ಶುದ್ಧ ಕುಡಿಯುವ ನೀರಿನ ಟ್ಯಾಂಕ್‌ ಕೆಟ್ಟು ಹೋಗಿ ಹಲವು ತಿಂಗಳು ಕಳೆದರೂ ದುರಸ್ತಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಅಲ್ಲದೆ, ಇದರ ಬದಿಯಲ್ಲೇ ಶೌಚಗೃಹ ನಿರ್ಮಾಣ ಮಾಡಿದ್ದರೂ ಸದಾ ಕಾಲ ಬಾಗಿಲು ಮುಚ್ಚಿದ್ದು, ನೀರಿನ ಸೌಲಭ್ಯವೂ ಇಲ್ಲದೆ ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿಲ್ಲ.

ಕಟ್ಟಡ ಶಿಥಿಲವಾಗಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ಪತ್ರ ಬರೆಯಲಾಗಿದೆ. ಶೌಚಗೃಹ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಅದನ್ನು ಸಾರ್ವಜನಿಕ ಬಳಕೆಗೆ ಅನುಕೂಲವಾಗುವಲ್ಲಿ ಕ್ರಮ ವಹಿಸಲಾಗುವುದು. ಶಿವರಾಜ್‌, ಗ್ರೇಡ್‌ 2 ತಹಶೀಲ್ದಾರ್‌, ಯಳಂದೂರು.

ಫೈರೋಜ್‌ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next