Advertisement

ಉದ್ಯೋಗ ಮೇಳದಿಂದ ಯುವಕರಿಗೆ ಅನುಕೂಲ

04:22 PM Mar 22, 2022 | Team Udayavani |

ಕೊಪ್ಪಳ: ನಮ್ಮ ಭಾಗದಲ್ಲಿ ಹೆಚ್ಚಿನ ನಿರುದ್ಯೋಗ ಕಂಡು ಬರುತ್ತದೆ. ಈ ಭಾಗದಲ್ಲಿ ಶಿಕ್ಷಣದ ಪ್ರಮಾಣವು ಕಡಿಮೆ ಇರುವುದರಿಂದ ಇಂತಹ ಉದ್ಯೋಗ ಮೇಳ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ. ಈ ಭಾಗದ ಅಭ್ಯರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

Advertisement

ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಜಿಪಂ, ಸಂಜೀವಿನಿ ಎನ್‌ಆರ್‌ ಎಲ್‌ಎಂ, ಡಿಡಿಯು-ಜಿಯುವೈ, ಜಿಲ್ಲಾ ಕೌಶಲ್ಯ ಮಿಷನ್‌ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಆಶ್ರಯದಲ್ಲಿ ನಡೆದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಲವಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದ ನಂತರ ಉದ್ಯೋಗಕ್ಕಾಗಿ ಅಲೆದಾಡುತ್ತಾರೆ ಮತ್ತು 371 ಜೆ ಇಂದಲೂ ನಮ್ಮ ಭಾಗದ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ. ಇದರಿಂದ ಇನ್ನೂ ಹೆಚ್ಚಿನ ಅನುಕೂಲವಾಗಲು ಈ ಭಾಗದ ನಾವುಗಳು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 30 ಸಾವಿರಕ್ಕೂ ಹೆಚ್ಚಿನ ಹುದ್ದೆಗಳು ಖಾಲಿಯಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ಭಾಗದ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಮುಂದೆ ಬರಬೇಕು ಎಂದರು.

ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಮಾತನಾಡಿ, ನಮ್ಮ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ದಿಮೆಗಳಿವೆ. ಅವುಗಳಲ್ಲಿ ಈಗಾಗಲೇ ಶೇ. 95 ಪ್ರತಿಶತ ಭರ್ತಿಯಾಗಿವೆ. ಮುಂದಿನ ದಿನಮಾನಗಳಲ್ಲಿ ಖಾಲಿಯಾಗುವ ಹುದ್ದೆಗಳಿಗೆ ಈ ಭಾಗದ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಬೇಕು ಮತ್ತು ಇಂದಿನ ದಿನಮಾನಗಳಲ್ಲಿ ನಾವು ಕೆಲಸ ಮಾಡಬೇಕಾದರೆ ನಮ್ಮಲ್ಲಿ ಎಲ್ಲ ರೀತಿಯ ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ನಾವು ಕೆಲಸ ಮಾಡಲು ಯಾವ ಭಾಗಕ್ಕಾದರು ಹೋಗಲು ಸಿದ್ಧರಿರಬೇಕು. ಅದರ ಜೊತೆಗೆ ನಮಗೆ ಮಾತೃಭಾಷೆಯ ಜೊತೆಗೆ ಹಿಂದಿ, ಇಂಗ್ಲೀಷ್‌ ಭಾಷೆ ಬರಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ ಎಂದರು.

ಬೆಳಗಾವಿಯ ಮೇಜರ್‌ ವಿಶ್ವನಾಥ ಮಾತನಾಡಿ, ಈ ಭಾಗದ ಅಭ್ಯರ್ಥಿಗಳು ಸೇನೆಯಲ್ಲಿ ಬಹಳ ಕಡಿಮೆ ಇದ್ದು, ಭಾರತೀಯ ಸೇನೆಯಲ್ಲಿ ಯುವಕರಿಗೆ ವಿಫುಲ ಅವಕಾಶಗಳಿವೆ. ಅದರ ಸದುಪಯೋಗ ಪಡೆದು ಮುಂದೆ ಬರಬೇಕು. ಅಭ್ಯರ್ಥಿಗಳು ಒಳ್ಳೆಯ ಕೌಶಲ್ಯ ಅಳವಡಿಸಿಕೊಳ್ಳಬೇಕು. ಜಿಲ್ಲಾಡಳಿತ ಉದ್ಯೋಗ ಮೇಳ ಹಮ್ಮಿಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದರಿಂದ ಈ ಭಾಗದ ಯುವಕರಿಗೆ ಹೆಚ್ಚಿನ ಉದ್ಯೋಗಗಳು ದೊರೆಯುವಂತಾಗುತ್ತವೆ ಎಂದರು.

Advertisement

ಈ ವೇಳೆ ಸಾಂಕೇತಿಕವಾಗಿ ವಿವಿಧ ಕಂಪನಿಗಳಲ್ಲಿ ಉದ್ಯೋಗ ಅವಕಾಶ ಪಡೆದ ಅಭ್ಯರ್ಥಿಗಳಿಗೆ ಗಣ್ಯರು ಪ್ರಮಾಣ ಪತ್ರ ವಿತರಿಸಿದರು.

ಉದ್ಯೋಗ ಮೇಳದಲ್ಲಿ 56 ವಿವಿಧ ಕಂಪನಿಗಳು ಭಾಗವಹಿಸಿದ್ದವು. ಒಟ್ಟು 2583 ಅಭ್ಯರ್ಥಿಗಳು ಮೇಳದಲ್ಲಿ ನೋಂದಣಿ ಮಾಡಿಕೊಂಡಿದ್ದರು. ಅವರಲ್ಲಿ 696 ಅಭ್ಯರ್ಥಿಗಳು ವಿವಿಧ ಕಂಪನಿಗಳ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದು, 56 ಅಭ್ಯರ್ಥಿಗಳನ್ನು ಕಾಯ್ದಿರಿಸಲಾಗಿದೆ.

ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ನಗರಸಭೆ ಅಧ್ಯಕ್ಷ ಲತಾ ಗವಿಸಿದ್ದಪ್ಪ ಚಿನ್ನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್‌, ಜಿಪಂ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಾಣೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next