Advertisement

ಬೂಕನ ಬೆಟ್ಟ ದನಗಳ ಜಾತ್ರೆಯಲ್ಲಿ ರೈತರಿಗೆ ಸೌಲಭ್ಯ ಕಲ್ಪಿಸಿ

08:19 PM Dec 10, 2019 | Lakshmi GovindaRaj |

ಚನ್ನರಾಯಪಟ್ಟಣ/ಹಿರೀಸಾವೆ: ಬೂಕನ ಬೆಟ್ಟದ ರಂಗನಾಥಸ್ವಾಮಿಯ 89ನೇ ಜಾತ್ರಾ ಮಹೋತ್ಸವದಲ್ಲಿ ಕೃಷಿ ಮೇಳಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ರೈತರಿಗೆ ಸಮಗ್ರ ಮಾಹಿತಿ ನೀಡಲು ಇಲಾಖೆಗಳು ಮುಂದಾಗಬೇಕು ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಆದೇಶಿಸಿದರು. ತಾಲೂಕಿನ ಹಿರೀಸಾವೆ ಹೋಬಳಿ ಬೆಟ್ಟದ ತಪ್ಪಲಿನಲ್ಲಿ ಇರುವ ಸಮುದಾಯ ಭವನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ನಡೆದ ತಾಲೂಕು ಮಟ್ಟದ ಅಧಿಕಾರಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಜ.10ರಿಂದ 23ರ ವರೆಗೆ ಅದ್ದೂರಿಯಾಗಿ ದನಗಳ ಜಾತ್ರೆ ನಡೆಯಲಿದ್ದು, ರಾಸುಗಳ ಜಾತ್ರೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್‌. ಪೇಟೆ, ತುಮಕೂರು ಜಿಲ್ಲೆಯ ಕುಣಿಗಲ್‌, ತುರುವೇಕೆರೆ, ತಿಪಟೂರು ತಾಲೂಕಿನಿಂದ ರೈತರಿಗೆ ಅನುಕೂಲವಾಗುವ ಮಟ್ಟದಲ್ಲಿ ದನಗಳ ಜಾತ್ರೆ ಆಯೋಜನೆ ಮಾಡಬೇಕು ಎಂದು ಹೇಳಿದರು.

ತೋಟಗಾರಿಕೆ, ಕೃಷಿ ಇಲಾಖೆ, ಪಶು ಸಂಗೋಪಾ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೀನುಗಾರಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯಿಂದ ಉತ್ತಮ ಪ್ರದರ್ಶನ ಮಾಡುವುದಲ್ಲದೆ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಾಲೂಕಿನಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಛಾಯಾ ಚಿತ್ರವನ್ನು ಪ್ರದರ್ಶನ ಮಾಡಬೇಕು. ತಾಲೂಕಿನ 41 ಗ್ರಾಮ ಪಂಚಾಯಿತಿಗಳು ಇದಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.

24 ರಂದು ಸುಂಕ ಹರಾಜು: ಡಿ.24 ರಂದು ವಿವಿಧ ಸುಂಕಗಳ ಹರಾಜು ಪ್ರಕ್ರಿಯೆಯನ್ನು ತಾಲೂಕು ಆಡಳಿತ ಮಾಡಬೇಕು. ಕಳೆದ ಸಾಲಿನಲ್ಲಿ 1.86 ಲಕ್ಷ ರೂ. ಸುಂಕದಲ್ಲಿ ಬಂದಿದೆ ಈ ಭಾರಿಯೂ ಹೆಚ್ಚು ಹಣ ಸಂಗ್ರಹಕ್ಕೆ ಮುಂದಾಬೇಕು. ಬೆಳಗೀಹಳ್ಳಿ, ಮತಿಘಟ್ಟ, ಹಿರೀಸಾವೆ, ಕೃಷಿ ಉತ್ಪನ್ನ ಮಾರುಕಟ್ಟೆ ಯಿಂದ ಆರ್ಥಿಕವಾಗಿ ಜಾತ್ರಾ ಮಹೋತ್ಸವಕ್ಕೆ ಸಹಾಯ ನೀಡಬೇಕು. ಪ್ರತಿ ನಿತ್ಯವೂ ಪೊಲೀಸ್‌ ಭದ್ರತೆ ಅಗತ್ಯವಿದೆ ಎಂದು ಹೇಳಿದರು.

ಪೊಲೀಸರನ್ನು ನಿಯೋಜಿಸಿ: ಈ ವೇಳೆ ಪಶು ವೈದ್ಯ ಸುಬ್ರಹ್ಮಣ್ಯ ಮಾತನಾಡಿ, ಕಳೆದ ಸಾರಿ ರಾಸುಗಳ ಬಹುಮಾನ ಆಯ್ಕೆ ವೇಳೆ ಗೊಂದಲ ಉಂಟಾಗಿ ರೈತರು ಪಶು ಇಲಾಖೆ ಅಧಿಕಾರಿಗಳ ಮೇಲೆ ಕೈ ಮಾಡಲು ಮುಂದಾಗಿದ್ದರು ಹಾಗಾಗಿ ಪೊಲೀಸರನ್ನು ಹೆಚ್ಚು ಮಂದಿ ನಿಯೋಜನೆ ಮಾಡುವುದು ಸೂಕ್ತ ಎಂದು ಸಭೆ ಗಮನಕ್ಕೆ ತಂದರು. ಕೆಲ ರೈತರು ಬಹುಮಾನದ ಹಿಂದಿನ ದಿವಸ ಮಾತ್ರ ಜಾತ್ರೆಗೆ ರಾಸುಗಳೊಂದಿಗೆ ಆಗಮಿಸುತ್ತಾರೆ. ಇದಕ್ಕೆ ಏನು ಮಾಡುವುದು ಎಂದು ಪ್ರಶ್ನಿಸಿದರು.ಶಾಸಕ ಬಾಲಕೃಷ್ಣ ಮಾತನಾಡಿ, ಬಹುಮಾನಕ್ಕಾಗಿ ಒಂದು ದಿನ ಜಾತ್ರೆಗೆ ಆಗಮಿಸುವ ರಾಸುಗಳನ್ನು ಪರಿಗಣಿಸುವುದು ಬೇಡ ಎಂದರು.

Advertisement

ಟ್ಯಾಂಕರ್‌ ಮೂಲಕ ನೀರು ಸರಬರಾಜು: ರಾಸುಗಳಿಗೆ ನೀರಿನ ಸಮಸ್ಯೆ ಆಗದಂತೆ ಹೈಟೆಕ್‌ ಹಾಲು ಉತ್ಪನ್ನ ಘಟಕದಿಂದ ನಿತ್ಯವೂ ಎರಡು ಟ್ಯಾಂಕರ್‌ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು. ಸೆಸ್ಕ್ ಇಲಾಖೆಯವರು ಈಗಾಗಲೇ 30 ಕಂಬಗಳನ್ನು ಅಳವಡಿಸಿದ್ದಾರೆ. ಅವುಗಳಿಗೆ ವಿದ್ಯುತ್‌ ದೀಪ ಹಾಕುವ ಮೂಲಕ ವಿದ್ಯುತ್‌ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕುಡಿಯುವ ನೀರಿಗೆ ಪೈಪ್‌ಲೈನ್‌ ಮಾಡುವ ಮೂಲಕ ಸಾರ್ವಜನಿಕರಿಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ರಾಸುಗಳ ಜಾತ್ರೆ ನಡೆಯುವ ಸ್ಥಳಗಳಲ್ಲಿ ಜಂಗಲ್‌ ಹೆಚ್ಚಾಗಿ ಬೆಳೆದಿರುವುದರಿಂದ ಲೋಕೋಪಯೋಗಿ ಇಲಾಖೆಯಿಂದ ಸ್ವಚ್ಛತೆ ಮಾಡಬೇಕು. ಜ.8ರಿಂದ19ರ ವರೆಗೆ ಬೂಕನ ಬೆಟ್ಟದ ತಪ್ಪಲಿಗೆ ರಾಜ್ಯ ರಸ್ತೆ ಸಾರಿಗೆ ನಿಮಗದಿಂದ ಬಸ್‌ ಸೌಲಭ್ಯ ಕಲ್ಪಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗೆ ತಿಳಿಸಿದರು. ಜಿಲ್ಲಾಧಿಕಾರಿ ಆರ್‌.ಗಿರೀಶ್‌ ರಾಸುಗಳ ಜಾತ್ರೆಗೆ ಆಗಮಿಸುವುದಾಗಿ ಹೇಳಿದ್ದಾರೆ.

ಇವರೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಪಂ ಸಿಇಒ ಅವರನ್ನು ಆಹ್ವಾನಿಸಲಾಗುವುದು ಎಂದು ತಹಶೀಲ್ದಾರ್‌ ಜೆ.ಬಿ.ಮಾರುತಿ ಸಭೆಗೆ ತಿಳಿಸಿದರು. ಮತಿಘಟ್ಟ ಗ್ರಾಮ ಪಂಚಾಯಿತಿ ಕಮಲಮ್ಮ, ಬೆಳಗೀಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಎಪಿಎಂಸಿ ನಿರ್ದೇಶಕ ಆಮಾಸೇಗೌಡ, ಎಚ್‌ಎಸ್‌ಎಸ್‌ಕೆ ನಿರ್ದೇಶಕ ಜಯರಾಂ, ನೌಕರ ಸಂಘದ ಅಧ್ಯಕ್ಷ ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.

ರಾಸುಗಳಿಗೆ ಬಹುಮಾನ ವಿತರಿಸಲು ಕ್ರಮ: ರಾಸುಗಳ ಜಾತ್ರೆ ಪ್ರಾರಂಭವಾದ ದಿವಸದಿಂದ ಕೊನೆ ದಿವಸದ ವರೆಗೆ ಇರುವ ರಾಸುಗಳನ್ನು ಆಯ್ಕೆ ಮಾಡಿ, ಮೊದಲ ಬಹುಮಾನ 10 ಸಾವಿರ, ಎರಡನೇ ಬಹುಮಾನ 7,500 ರೂ., ಮೂರನೇ ಬಹುಮಾನ 5 ಸಾವಿರ ರೂ. ನೀಡೋಣ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು. ಗ್ರಾಮೀಣ ಕ್ರೀಡಾ ಕೂಡದಲ್ಲಿ ಪಾಲ್ಗೊಂಡವರಿಗೂ ಬಹುಮಾನ ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next