ನನ್ನ ಬೆಳಗಿನ ಹಾಗೂ ಸಂಜೆಯ ವ್ಯಾಯಾಮ ಕೆಎಸ್‌ಆರ್‌ಟಿಸಿ ಬಸ್ಸಿನ ಹಲವು ಆಯಾಮಗಳಲ್ಲಿ, ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ, ಕ್ಷಮಿಸಿ ಬಿಡಲೇ ನಾನೇ ಸೋತು, ಕೈ ಚಾಚಲೇ ಎಲ್ಲಾ ಮರೆತು, ಕಿರಿಕ್ ಪಾರ್ಟಿ . ಇವೆಲ್ಲ ಏನು ಅಂತಾ ಅಂದೊRಂಡ್ರಾ? ಇದು ಯಾವುದೇ ಸಿನೆಮಾ ಪ್ರಚಾರವಲ್ಲ, ಯಾವುದೇ ಕಥೆ, ಕವನಗಳು ಅಲ್ಲ, ಸಾಮಾನ್ಯವಾಗಿ ಕಾಲೇಜುಗಳ ಕ್ಲಾಸ್‌ರೂಮ್‌ಗಳಲ್ಲಿ ಕಂಡುಬರುವ ಕಲಾತ್ಮಕ ಡೆಸ್ಕ್ ಬರಹಗಳು.
ಕ್ಲಾಸ್ ರೂಮ್‌ನ ಡೆಸ್ಕ್ಗಳು ಕೆಲವು ವಿದ್ಯಾರ್ಥಿಗಳಿಗೆ ಫೇಸ್‌ಬುಕ್ ಅಕೌಂಟ್‌ನ ರೀತಿ. ಫೇಸ್‌ಬುಕ್‌ನಲ್ಲಿ ಒಂದು ಸ್ಟೇಟಸ್ ಹಾಕಿದರೆ ಉಳಿದವರು ಹೇಗೆ ಕಮೆಂಟ್ ಹಾಕುತ್ತಾರೋ ಹಾಗೆ ಡೆಸ್ಕ್ಗಳಲ್ಲಿ ಏನಾದ್ರೂ ಬರೆದಿದ್ರೆ ಉಳಿದ ಕೆಲ ವಿದ್ಯಾರ್ಥಿಗಳು ತಮಗೆ ಬೇಕಾದ ಹಾಗೆ ಕಮೆಂಟ್ ಹಾಕುತ್ತಾರೆ.
ಉದಾಹರಣೆಗೆ, ಮೈ ಹಾರ್ಟ್ ಈಸ್ ಸೋ ಸ್ವಾಫ್ಟ್, ಎಂದು ಯಾರಾದ್ರೂ ಬರೆದಿದ್ರೆ, ತುಂಬಾ ಸ್ವಾಫ್ಟ್ ಆದ್ರೆ ಮುಳ್ಳು ಚುಚ್ಚಿ ಬಿಡು ಎಂದು ಇನ್ನೊಬ್ಬ ವಿದ್ಯಾರ್ಥಿ ಕಮೆಂಟ್ ಬರೀತಾರೆ. ಹಾಗೆ ಫೀಲಿಂಗ್ ಹಾರ್ಟ್… ದೇವರೇ ನೀನೇ ಬಾ ಕಾರಣ ತಿಳಿಸು ಬಾ ಇದಕ್ಕೆ ಕಮೆಂಟ್ ಯಾಕೆ ಪಾಪು ಬ್ರೇಕಪ್ ಆಯ್ತಾ ಅಯ್ಯೋ ಪಾಪ. ಹೀಗೆ ಬೇರೆ ಬೇರೆ ವಿದ್ಯಾರ್ಥಿಗಳು ತಮ್ಮ ತಮ್ಮ ಮನೋಭಿಲಾಷೆಗಳನ್ನು ಮನೋವೈಫಲ್ಯತೆಗಳನ್ನು ಇಲ್ಲಿ ಬರೀತಾರೆ.
ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಡೆಸ್ಕ್ ಬರಹಗಳು ವಾಟ್ಸಾಪ್ ಗ್ರೂಪ್ ತರಹ ಯಾರಾದರು ಒಬ್ಬರಂತೂ ವಾಟ್ಸಾಪ್ ಗ್ರೂಪಿನಲ್ಲಿ ಯಾವುದಾದರೂ ಮೆಸೇಜ್, ಇಮೇಜ್, ವಿಡಿಯೋಗಳನ್ನು ಹಾಕಿದ್ರೆ ಆ ಗ್ರೂಪಿನ ಸದಸ್ಯರು ಅದಕ್ಕೆ ಕಮೆಂಟ್ ಮಾಡುವ ಹಾಗೆ ಇಲ್ಲಿ ಕೂಡ. ಆ ಬೆಂಚ್‌ನ ಮೂರು, ನಾಲ್ಕು ವಿದ್ಯಾರ್ಥಿಗಳು ಸದಸ್ಯರಾಗಿರುತ್ತಾರೆ. ಕೆಲವು ವಿದ್ಯಾರ್ಥಿಗಳು ತುಂಬಾ ಸೈಲೆಂಟ್ ಆಗಿರುತ್ತಾರೆ. ಆ ಗ್ರೂಪಿನಲ್ಲಿ ಇದ್ದರೂ, ಒಂದೂ ಕಮೆಂಟ್ ಮಾಡಲ್ಲ. ಅವರು ಆ ಗ್ರೂಪಿನ ಸದಸ್ಯರಿಂದ “ಗಾಂಧಿ ಪೀಸ್’ ಎಂದು ಪುರಸ್ಕಾರ ಪಡೆದಿರುತ್ತಾರೆ. ಇನ್ನೂ ಕೆಲವರಂತೂ ತುಂಬಾ ವೈಲೆಂಟ್ ಯಾವಾಗ್ಲೂ ಮೆಸೇಜ್ ಪೋಸ್ಟ್ ಇರುತ್ತಾರೆ. ಇವರಿಗೆ ಮಳೆಗಾಲದಲ್ಲಿ ವಟಗುಟ್ಟುವ ಕಪ್ಪೆ ಎಂಬ ಪುರಸ್ಕಾರ ಪಡೆದಿರುತ್ತಾರೆ.
ಇನ್ನೂ ಕೆಲವು ವಿದ್ಯಾರ್ಥಿಗಳು ಕವಿಗಳೂ ಆಗಿರುತ್ತಾರೆ. ತಮ್ಮ ಪ್ರೇಮ-ನಿವೇದನೆಗಳನ್ನು ಅಧ್ಯಾಪಕರ ಮೇಲೆ ತಮಾಷೆಯಿಂದ ಅಡ್ಡ ಹೆಸರು ಇಟ್ಟು ಹನಿಗವನಗಳನ್ನು ಬರೆಯುತ್ತಾರೆ. ಡೆಸ್ಕ್ ಬರಹಗಳನ್ನು ಹಾಗೆ ಬಿಡುವುದಿಲ್ಲ. ಡಿಸಿಪ್ಲಿನ್ ಕಮಿಟಿಯವರು ನೋಡಿ, ಕೆಮಿಸ್ಟ್ರೀ ವಿದ್ಯಾರ್ಥಿಗಳು ತಯಾರಿಸಿದ ಕೆಮಿಕಲ್‌ನ್ನು ತಂದು ಕ್ಲಾಸ್ ವಿದ್ಯಾರ್ಥಿಗಳಿಗೆ ನೀಡುತ್ತಾರೆ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಅನ್ನುವ ಹಾಗೆ, ತಾವು ಬರೆದ ಬರಹಗಳನ್ನು ತಾವೇ ಉಜ್ಜಿ ಡೆಸ್ಕ್ಗಳನ್ನು ಶುಚಿಗೊಳಿಸುತ್ತಾರೆ.
ಕಾಲೇಜಿನ ಡೆಸ್ಕ್ಗಳಲ್ಲಿ ಬರೆದು ಹಾಳು ಮಾಡುವ ಬದಲು, ತಮ್ಮ ಬರಹಗಳನ್ನು ವಾಲ್ ಮ್ಯಾಗಜಿನ್, ಪತ್ರಿಕೆಗಳಲ್ಲಿ ಬರೆದರೆ ಅದಕ್ಕೊಂದು ಗೌರವ ದೊರೆಯುತ್ತದೆ. ಈ ರೀತಿ ಡೆಸ್ಕ್ಗಳಲ್ಲಿ ಬರೆದು ಹಾಳು ಮಾಡುವುದಕ್ಕಿಂತ ಅದನ್ನು ಸದುಪಯೋಗ ಪಡಿಸಿಕೊಳ್ಳುವುದು ಒಳ್ಳೆಯದು.
– ಶ್ವೇತಾ ಎಂ.
ಪತ್ರಿಕೋದ್ಯಮ ವಿದ್ಯಾರ್ಥಿನಿ ,
ಎಸ್.ಡಿ. ಎಂ ಕಾಲೇಜು, ಉಜಿರೆ.