Advertisement

ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಕ್ಷಣಿಕ

12:16 PM Sep 03, 2018 | Team Udayavani |

ಕಲಬುರಗಿ: ಕಾಲಮಾನ ಬದಲಾದಂತೆ ಎಲ್ಲವೂ ಬದಲಾಗುತ್ತಿದ್ದು, ಯಾವುದು ನಿಂತ ನೀರಲ್ಲ. ಟಿವಿಗಳ ನಂತರ ಇದೀಗ ಫೇಸ್‌ಬುಕ್‌, ವಾಟ್ಸಆ್ಯಪ್‌ ಗಳಿಗೆ ಜನ ಜೋತು ಬಿದ್ದಿದ್ದಾರೆ. ಆದರೆ, ಇವೆಲ್ಲವೂ ಕ್ಷಣಿಕವಾಗಿದ್ದು, ಮುಂದೊಂದು ದಿನ ಇವು ಸಹ ಜನರಲ್ಲಿ ಬೇಸರ ಮೂಡಿಸಲಿವೆಯಲ್ಲದೇ ಗಟ್ಟಿ ನೆಲದ ನಾಟಕ ಕಲೆ ಜನಮಾಸದೊಂದಿಗೆ ಮುನ್ನಡೆಯಲಿದೆ.

Advertisement

ಹೀಗೆ ಗಟ್ಟಿಯಾದ ಧ್ವನಿಯಲ್ಲಿ ಹೇಳಿದವರು ವಿಶ್ವಜ್ಯೋತಿ ಪಂಚಾಕ್ಷರಿ ನಾಟಕ ಸಂಘ ಕಂಪನಿಯ ಮಾಲೀಕ, ನಟ, ನಿರ್ದೇಶಕ ಹಾಗೂ ಕವಿ ರಾಜಣ್ಣ ಜೇವರ್ಗಿ. ರವಿವಾರ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ
ಆಯೋಜಿಸಲಾಗಿದ್ದ ಮನದಾಳದ ಮಾತಿನಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. 

ಟಿವಿ, ಚಲನಚಿತ್ರಗಳಿಂದ ರಂಗಭೂಮಿ ಮೇಲೆ ಹೊಡೆತ ಬಿದ್ದ ಪರಿಣಾಮ ನಾಟಕಗಳನ್ನು ದ್ವಂದ್ವಾರ್ಥ ಸಂಭಾಷಣೆ ಮತ್ತು ಡ್ಯಾನ್ಸ್‌ ಗಳು ಆವರಿಸಿಕೊಂಡವು. ಆದರೂ ಗಟ್ಟಿ ವಿಷಯಾಧಾರಿತ ನಾಟಕಗಳನ್ನು ಪ್ರದರ್ಶಿಸಿದರೆ ಇಂದು ಕೂಡಾ ಯಶಸ್ವಿ ಕಾಣಬಹುದು.

ಗುಣಮಟ್ಟದ ನಾಟಕಗಳನ್ನು ಕೊಡುವಲ್ಲಿ ಕಲಾವಿದರೇ ವಿಫಲವಾಗಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ. ಕಲಾವಿದರಿಗೆ ಹಿಂದೆ ಇದ್ದ ಆರ್ಥಿಕ ಸಂಕಷ್ಟದ ದಿನಗಳು ಇಂದಿನ ಕಲಾವಿದರಿಗೆ ಇಲ್ಲ. ಗಟ್ಟಿ ಮತ್ತು ಉತ್ತಮ ನಾಟಕಗಳನ್ನು ಕೊಟ್ಟರೆ ಅವುಗಳನ್ನು ನೋಡುವ ಜನ ಇನ್ನೂ ಇದ್ದಾರೆ. ರಾಜ್ಯದಲ್ಲಿ 25 ನಾಟಕ ಕಂಪನಿಗಳಿದ್ದು, ಇದರಲ್ಲಿ ಕಲಬುರಗಿಯದ್ದೇ ಮೂರು ನಾಟಕ ಕಂಪನಿಗಳಿವೆ. ನಮ್ಮ ಬಂಧು-ಬಳಗದವರು ಸೇರಿ 20ಕ್ಕೂ ಹೆಚ್ಚು ಜನ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ತಮ್ಮ ವೃತ್ತಿ ರಂಗಭೂಮಿಯ ಪ್ರಯಾಣದ ಬುತ್ತಿ ಬಿಚ್ಚಿಟ್ಟರು.
 
ಟೈಲರ್‌ ನಾಟಕಕಾರನಾದ ಕಥೆ: ಜೇವರ್ಗಿ ತಾಲೂಕಿನ ಚಿಕ್ಕಜೇವರ್ಗಿಯ ರಾಜಣ್ಣ ಬಾಲಯ್ಯ, ತಾಯಿ ಚಂದ್ರಮ್ಮ ದಂಪತಿಯ ಮಗ ನಾನು. ಅಪ್ಪನದು ಸೇಂದಿ ತೆಗೆಯುವ ಕಾಯಕವಾದರೆ, ತಾಯಿಯದು ಹೊಲದಲ್ಲಿ ಕೂಲಿ ಕಾರ್ಮಿಕಳ
ಕೆಲಸ. ತಾಯಿ ಚಂದ್ರಮ್ಮಳ ಹಾಡುಗಾರಿಕೆಯಿಂದ ಪ್ರಭಾವಿತರಾಗಿದ್ದ ರಾಜಣ್ಣ ಭಜನೆ, ಕೋಲಾಟ ಮುಂತಾದ ಹಾಡುಗಳನ್ನು ಹಾಡುವುದನ್ನು ಎರವಲು ಪಡೆದುಕೊಂಡೆ.

ಐದನೇ ತರಗತಿ ಓದಿದ್ದ ನಾನು ಟೈಲರಿಂಗ್‌ನ್ನು ವೃತ್ತಿಯಾಗಿ ಆರಂಭಿಸಿದೆ. ಆದರೆ, ಹಾಡುಗಾರಿಕೆಯು ದೊಡ್ಡಾಟ
ಬಳಿಕ ರಂಗಭೂಮಿಗೆ ತಂದು ನಿಲ್ಲಿಸಿತು. 1971-72ರಲ್ಲಿನ ತೀವ್ರ ಬರಗಾಲ ಅನ್ನ ಸಿಗದ ಪರಿಸ್ಥಿತಿ ತಂದೊದಗಿಸಿತು. ನನ್ನ ಕಣ್ಣೆದುರೇ ನಡೆದ ಹಸುಗೂಸಿನ ತಾಯಿಯ ಘಟನೆಯೊಂದು ನನ್ನಿಂದ ನಾಟಕ ಬರೆಸಿತು. ನಂತರ ನಾಟಕಗಳಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಅಭಿನಯವೇ ಜೀವನವಾಯಿತು ಎಂದು ತಮ್ಮ ಹಳೆಯ ದಿನಗಳನ್ನು ಸ್ಮರಿಸಿಕೊಂಡರು. 

Advertisement

1984ರಲ್ಲಿ ಹವ್ಯಾಸಿ ಕಲಾವಿದರಾಗಿ ರಂಗ ಪ್ರವೇಶಿಸಿದ ನಾನು 1989ರಲ್ಲಿ ವಿಶ್ವಜ್ಯೋತಿ ಪಂಚಾಕ್ಷರಿ ನಾಟಕ ಸಂಘ ಕಟ್ಟಿಕೊಂಡು ರಾಜ್ಯದ ಹಲವು ಭಾಗಗಳು, ನೆರೆಯ ಮಹಾರಾಷ್ಟ್ರ ಸುತ್ತಿ ಅನೇಕ ಪ್ರದರ್ಶನಗಳನ್ನು ನೀಡಿದ್ದೇನೆ. 2008ರಲ್ಲಿ ರಚಿಸಿ ನಿದೇರ್ಶಿಸಿದ “ಕುಂಟಕೋಣ ಮೂಕ ಜಾಣ’ ನಾಟಕ ಅತಿದೊಡ್ಡ ಯಶಸ್ಸು ಕಂಡಿದೆ. 

ಅಲ್ಲದೇ ಇದರ ಮಧ್ಯೆ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿದ್ದೇನೆ ಎಂದು ತಮ್ಮ ಹಾದಿಯನ್ನು ವಿವರಿಸಿದರು. ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಅಧ್ಯಕ್ಷತೆ ವಹಿಸಿದ್ದರು. ಸಿ.ಎಸ್‌. ಮಾಲಿಪಾಟೀಲ ಪ್ರಾರ್ಥನಾ ಗೀತೆ ಹಾಡಿದರು. ಗೌರವಾಧ್ಯಕ್ಷ ಡಾ| ವಿಜಯಕುಮಾರ ಪರುತೆ ಸ್ವಾಗತಿಸಿದರು, ಮಡಿವಾಳಪ್ಪ ನಾಗರಹಳ್ಳಿ ನಿರೂಪಿಸಿದರು. ಹಿರಿಯ ಕಲಾವಿದ ಎಲ್‌.ಬಿ.ಕೆ. ಅಲ್ದಾಳ, ಶೇಖ್‌ ಮಾಸ್ಟರ್‌, ಶ್ರೀಧರ ಹೆಗಡೆ, ಕೆ.ಎಂ. ಮಠ, ಬಂಡೇಶ ರೆಡ್ಡಿ, ಸುಜಾತಾ ಬಂಡೇಶ ರೆಡ್ಡಿ ಮತ್ತು ಕಲಾಭಿಮಾನಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next