Advertisement

ಫೇಸ್‌ಬುಕ್‌ ಬಳಕೆದಾರರೇ ಎಚ್ಚರ : ಖಾತೆ ಹ್ಯಾಕ್‌; ನಿಮ್ಮ ಹೆಸರಲ್ಲಿ ಸ್ನೇಹಿತರಿಂದ ಹಣ ಲೂಟಿ

12:31 AM Jan 27, 2021 | Team Udayavani |

ಕುಂದಾಪುರ: ಬ್ಯಾಂಕ್‌ ಖಾತೆ, ಫೋನ್‌ ಪೇ, ಗೂಗಲ್‌ ಪೇ ಮೂಲಕ ಒಟಿಪಿ ಪಡೆದು ಬ್ಯಾಂಕ್‌ ಖಾತೆಯಿಂದ ಹಣ ಎಗರಿಸುವ ಪ್ರಕರಣಗಳ ಜತೆಗೆ ಈಗ ಹೊಸ ಸೈಬರ್‌ ಅಪರಾಧ ಜನ್ಮತಾಳಿದೆ. ಕೆಲವು ದಿನಗಳಿಂದ ಕರಾವಳಿಯಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತಿವೆ.

Advertisement

ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಿ, “ಸಮಸ್ಯೆಯಲ್ಲಿದ್ದೇನೆ, ಹಣದ ಅಗತ್ಯವಿದೆ’ ಎಂದು ಸ್ನೇಹಿತರ ಬಳಿ ಸಹಾಯಕ್ಕಾಗಿ ಮೊರೆ ಯಿಡ ಲಾಗುತ್ತಿದೆ. ಇದನ್ನು ನಂಬಿದವರು ಅಲ್ಲಿ ನಮೂ ದಿಸ ಲಾದ ಗೂಗಲ್‌ ಪೇ ಅಥವಾ ಫೋನ್‌ಪೇ ನಂಬರ್‌ಗೆ

ಹಣ ಕಳುಹಿಸುತ್ತಾರೆ. ಇದು ವಂಚನೆಗೆ ಖದೀಮರು ಕಂಡುಕೊಂಡಿರುವ ಹೊಸ ಮಾರ್ಗ.

ಮೆಸೆಂಜರ್‌ನಲ್ಲಿ  ಸಂದೇಶ :

ಖದೀಮರು ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಿದ ಬಳಿಕ ಸ್ನೇಹಿತರ ಪಟ್ಟಿಯಲ್ಲಿ ಇರುವವರಿಗೆ ಮೆಸೆಂಜರ್‌ನಲ್ಲಿ ಸಂದೇಶ ಕಳುಹಿಸಿ, ಚ್ಯಾಟ್‌ ನಡೆಸುತ್ತಾರೆ. ಬಳಿಕ ಹಣದ ಅಗತ್ಯವಿದೆ, ಗೂಗಲ್‌ ಪೇ ಮಾಡಿ ಎನ್ನುತ್ತಾರೆ. ಪರಿಚಿತರ ಖಾತೆಯಿಂದ ಬಂದ ಸಂದೇಶ ನಂಬಿದವರು ಸುಲಭವಾಗಿ ಬಲಿಬೀಳುತ್ತಾರೆ.

Advertisement

ಪೊಲೀಸ್‌, ಪತ್ರಕರ್ತರೇ ಟಾರ್ಗೆಟ್‌ : ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರನ್ನೇ ಗುರಿಯಾಗಿಸಿಕೊಂಡು ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಲಾಗುತ್ತಿದೆ. ಇತ್ತೀಚೆಗೆ ಕೆಲವು ಪತ್ರಕರ್ತರ, ಸಾಮಾನ್ಯರ ಖಾತೆಗಳನ್ನೂ ಹ್ಯಾಕ್‌ ಮಾಡಲಾಗುತ್ತಿದೆ.

ಹ್ಯಾಕ್‌ ಆದರೆ ಏನು ಮಾಡಬೇಕು? :

ನಿಮ್ಮ ಖಾತೆಯನ್ನು ಯಾರೋ ಹ್ಯಾಕ್‌ ಮಾಡಿದ್ದಾರೆ ಎಂದರೆ ಖಾತೆಯ ಸ್ಕ್ರೀನ್‌ಶಾಟ್‌ ತೆಗೆದು ಇಟ್ಟುಕೊಳ್ಳಿ.  ಆ ಫೇಸ್‌ಬುಕ್‌ ಖಾತೆಯ ಪ್ರೊಫೈಲ್‌ಗೆ ಹೋದಾಗ ಅಲ್ಲಿ ಒಂದು ಯುಆರ್‌ಎಲ್‌ ಲಿಂಕ್‌ ಸಿಗುತ್ತದೆ. ಅದನ್ನು ನಕಲು (ಕಾಪಿ) ಮಾಡಿಟ್ಟುಕೊಳ್ಳಿ. ಇದು ಬಹಳ ಆವಶ್ಯಕ. ತನಿಖೆಗೆ ಇದು ಸಹಕಾರಿ. ಖಾತೆ ಹ್ಯಾಕ್‌ ಮಾಡಿದವರು ಡಿಲೀಟ್‌ ಮಾಡಿದ್ದರೆ ಈ ಲಿಂಕ್‌ ಸಿಗದೆ ತನಿಖೆ ನಡೆಸಲು ಸಾಧ್ಯವಿಲ್ಲ.  ಬಳಿಕ ಈ ಬಗ್ಗೆ ಸಮೀಪದ ಠಾಣೆ ಅಥವಾ ಸೈಬರ್‌ ಸೆನ್‌ ಅಪರಾಧ ಠಾಣೆಗೆ ದೂರು ಕೊಡಿ. ಅವರು ತನಿಖೆ ನಡೆಸಿ, ಹ್ಯಾಕ್‌ ಆಗಿದ್ದರೆ, ಪರಿಶೀಲಿಸಿ ಫೇಸ್‌ಬುಕ್‌ ಸಂಸ್ಥೆಗೆ ವರದಿ ಕಳುಹಿಸುತ್ತಾರೆ.ಫೇಸ್‌ಬುಕ್‌ಗೆ ನಾವೇ ವರದಿ ಮಾಡಬಹುದು. ಪ್ರೊಫೈಲ್‌ಗೆ ಹೋಗಿ, ಬಲಭಾಗದಲ್ಲಿ 3 ಚುಕ್ಕೆಗಳಿದ್ದು, ಅದನ್ನು ಒತ್ತಿದಾಗ ಫೈಂಡ್‌ ಸಪೋರ್ಟ್‌ ಅಥವಾ ರಿಪೋರ್ಟ್‌ ಪ್ರೊಫೈಲ್‌ ಅಂತ ಇದೆ. ಅಲ್ಲಿ ಫೇಕ್‌ ಅಕೌಂಟ್‌ ಅಥವಾ ಫೇಕ್‌ ನೇಮ್‌ ಎಂದು ಕ್ಲಿಕ್‌ ಮಾಡಿ ವರದಿ ಸಲ್ಲಿಸಬಹುದು.

ಸಾರ್ವಜನಿಕರು ಏನು ಮಾಡಬೇಕು? ;

  • ಯಾವುದೇ ಫೇಸ್‌ಬುಕ್‌ ಖಾತೆಯಲ್ಲಿ ಹಣಕ್ಕಾಗಿ ಬೇಡಿಕೆ ಬಂದರೆ ಎಚ್ಚರಿಕೆ ವಹಿಸಬೇಕು.
  • ಸಾಮಾಜಿಕ ಮಾಧ್ಯಮದ ಮೂಲಕ ನೀಡಲು ವಿನಂತಿಸಿದರೆ ಮೊಬೈಲ್‌ ಬ್ಯಾಂಕಿಂಗ್‌ನಿಂದ ಹಣ ವರ್ಗಾವಣೆ ಮಾಡಬಾರದು.
  • ನಿಮ್ಮ ಸ್ನೇಹಿತ ನಿಜವಾಗಿಯೂ ಸಂಕಷ್ಟದಲ್ಲಿ ಇದ್ದಾ ನೆಯೇ ಎನ್ನುವುದನ್ನು ಫೋನ್‌ ಕರೆ ಮಾಡಿ ಪರೀಕ್ಷಿಸಿಕೊಳ್ಳಿ.

ಎಷ್ಟು ಪ್ರಕರಣಗಳು ? :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಿರುವ 18 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 10 ಪ್ರಕರಣಗಳಲ್ಲಿ ಹಣ ಕೇಳಲಾಗಿತ್ತು. ಉಳಿದವು ಮಾನಹಾನಿ, ಅಶ್ಲೀಲ ಸಂದೇಶ ರವಾನೆಯದ್ದಾಗಿದೆ. ಈ ವರ್ಷ 3 ಪ್ರಕರಣಗಳು ದಾಖಲಾಗಿವೆ. ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ 4 ಮತ್ತು ಇತ್ತೀಚೆಗೆ 3 ಪ್ರಕರಣಗಳು ದಾಖಲಾಗಿವೆ.

ಎಚ್ಚರ ವಹಿಸಿ :

ಸೈಬರ್‌ ಅಪರಾಧಗಳು ನಡೆಯಲು ಜನರು ಎಚ್ಚರಿಕೆ ವಹಿಸದಿರುವುದು, ಅರಿವು ಇಲ್ಲದಿರುವುದೇ ಪ್ರಮುಖ ಕಾರಣ. ಮೊಬೈಲ್‌, ಜಾಲತಾಣಗಳಲ್ಲಿ ಬರುವ ಯಾವುದೋ ಲಿಂಕ್‌ಗೆ ಕ್ಲಿಕ್‌ ಮಾಡುವುದು ಸರಿಯಲ್ಲ. ಒಟಿಪಿ ಯಾರಿಗೂ ಕೊಡಬೇಡಿ. ಅಪರಿಚತರು ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದರೆ ಗಮನಹರಿಸಿ. ಒಮ್ಮೆ ಹಣ ಕಳೆದುಕೊಂಡರೆ ಪತ್ತೆ ಮಾಡುವುದು ಸುಲಭವಿಲ್ಲ. ಜನ ಈ ಬಗ್ಗೆ ಆದಷ್ಟು ಎಚ್ಚರ ವಹಿಸಬೇಕು. ಸುರೇಶ್‌ ನಾಯ್ಕ,   ಸೈಬರ್‌ ಠಾಣೆ, ದ.ಕ. – ರಾಮಚಂದ್ರ ನಾಯಕ್‌,   ಇನ್ಸ್‌ಪೆಕ್ಟರ್‌, ಸೈಬರ್‌ ಠಾಣೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next