ಸ್ಯಾನ್ಫ್ರಾನ್ಸಿಸ್ಕೋ: ಜನಪ್ರಿಯ ಸಾಮಾಜಿಕ ಜಾಲಾತಾಣ ಫೇಸ್ ಬುಕ್ ತನ್ನ ಬಳಕೆದಾರರರನ್ನು ಮತ್ತಷ್ಟು ಆಕರ್ಷಿಸಲು ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ. ಈ ಲೋಗೋಗಳು ಫೇಸ್ ಬುಕ್ ನ ಎಲ್ಲಾ ಅಂಗಸಂಸ್ಥೆಗಳನ್ನು ಪ್ರತಿನಿಧಿಸುತ್ತದೆ. ಇದು ಜೆಐಎಫ್ ರೂಪದಲ್ಲಿದ್ದು, ಫೇಸ್ ಬುಕ್ ಗಾಗಿ ನೀಲಿ, ಇನ್ ಸ್ಟಾ ಗ್ರಾಂಗಾಗಿ ಗುಲಾಬಿ ಮತ್ತು ವಾಟ್ಸಾಪ್ ಗಾಗಿ ಹಸಿರು ಮುಂತಾದ ಹಲವು ಬಣ್ಣವನ್ನು ತೋರಿಸುತ್ತದೆ.
ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಸೋಮವಾರ ಫೇಸ್‌ಬುಕ್ ಕಂಪನಿ ತನ್ನ ಹೊಸ ಲೋಗೋ ಅನಾವರಣಗೊಳಿಸಿದೆ. ಈ ಲಾಂಛನ ಫೇಸ್‌ಬುಕ್ ಸಾಮಾಜಿಕ ಜಾಲತಾಣದ ಲೋಗೊಕ್ಕಿಂತ ಭಿನ್ನವಾಗಿದ್ದು, ಫೇಸ್‌ಬುಕ್ ಒಡೆತನದಲ್ಲಿರುವ ವಾಟ್ಸಾಪ್, ಇನ್‌ಸ್ಟಾಗ್ರಾಮ್, ಮೆಸೆಂಜರ್, ಒಕುಲಸ್, ವರ್ಕ್ಪ್ಲೇಸ್, ಪೋರ್ಟಲ್ ,ಕ್ಯಾಲಿಬ್ರಾ ಮುಂತಾದ ಎಲ್ಲಾ ಅಂಗಸಂಸ್ಥೆಗಳನ್ನು ಪ್ರತಿನಿಧಿಸುತ್ತದೆ.
ಹೊಸ ಲೋಗೊ ಮತ್ತು ಬ್ರ್ಯಾಂಡಿಂಗ್ ಅನ್ನು ಸ್ಪಷ್ಟತೆಗಾಗಿ ವಿನ್ಯಾಸಗೊಳಿಸಲಾಗಿದೆ . ಆ ಮೂಲಕ ಫೇಸ್‌ಬುಕ್ ಕಂಪನಿಯ ಉತ್ಪನ್ನಗಳನ್ನು ಗ್ರಾಹಕಲೋಕಕ್ಕೆ ಪರಿಚಯಿಸಲು ಮುಂದಾಗಿದ್ದೇವೆ ಎಂದು ಫೇಸ್‌ಬುಕ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಆಂಟೋನಿಯೊ ಲೂಸಿಯೊ ಹೇಳಿದ್ದಾರೆ.
ಫೇಸ್‌ಬುಕ್ ಹದಿನೈದು ವರ್ಷ ಹಳೆಯ ಕಂಪನಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಬಳಕೆದಾರರ ಜಾಲ ಹೊಂದಿರುವ ಕಂಪನಿಯಾಗಿ ಗಮನಸೆಳೆದಿದೆ.