ನ್ಯೂಯಾರ್ಕ್: ಭೀಕರ ಹತ್ಯೆಗಳು ಮತ್ತು ಆತ್ಮಹತ್ಯೆಗಳಂತಹ ಹಿಂಸಾತ್ಮಕ ವಿಷಯಗಳ ವಿಡಿಯೋಗಳನ್ನು ಅಳಿಸಿ ಹಾಕುವ ಸಲುವಾಗಿ 3000 ಮಂದಿ ಹೆಚ್ಚುವರಿ ಉದ್ಯೋಗಿಗಳನ್ನು ಹುಡುಕುತ್ತಿರುವುದಾಗಿ ಫೇಸ್‌ಬುಕ್ ಬುಧವಾರ ಹೇಳಿಕೊಂಡಿದೆ.
ಸಾಮಾಜಿಕ ಮಾಧ್ಯಮದ ದೈತ್ಯ ಎನಿಸಿಕೊಂಡಿರುವ ಫೇಸ್‌ಬುಕ್ ವೇದಿಕೆಯನ್ನು ಹಿಂಸಾಚಾರ ಮತ್ತು ದ್ವೇಷದ ಚಟುವಟಿಕೆಯನ್ನು ಉತ್ತೇಜಿಸಲು ಅನುವು ಮಾಡಿಕೊಡುವ ಕುರಿತಾಗಿ ವ್ಯಾಪಕ ಟೀಕೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಫೇಸ್‌ಬುಕ್ ಈ ಕ್ರಮಕ್ಕೆ ಮುಂದಾಗಿದೆ.
ನಾವು ಸುರಕ್ಷಿತ ಸಮುದಾಯವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ, ನಾವು ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿದೆ ಎಂದು ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಝುಕರ್‌ಬರ್ಗ್ ಅವರು ಟ್ವಿಟ್ ಮಾಡಿದ್ದಾರೆ.
ಥಾಯ್‌ಲ್ಯಾಂಡ್‌ನ 20 ರ ಹರೆಯದ ಯುವಕ ತನ್ನ ಪುತ್ರಿಯನ್ನು ಬರ್ಬರವಾಗಿ ಕೊಲ್ಲುವ ದೃಶ್ಯವನ್ನು ಫೇಸ್‌ಬುಕ್ ಲೈವ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ಝುಕರ್‌ಬರ್ಗ್ ಈ ಟ್ವಿಟ್ ಮಾಡಿದ್ದಾರೆ.
ಬರ್ಬರ ಹತ್ಯೆಗಳು,ಭಯಾನಕ ದೃಶ್ಯಗಳು, ಲೈಂಗಿಕ ವಿಡಿಯೋಗಳು , ಅಶ್ಲೀಲ ದೃಶ್ಯಾವಳಿಗಳು , ಪ್ರಾಣಿ ಹಿಂಸೆಯಂತಹ ಸಾವಿರಾರು ವಿಡಿಯೋಗಳು ಈಗಾಗಲೇ ಫೇಸ್‌ಬುಕ್‌ನಲ್ಲಿ ಪ್ರಕಟಗೊಂಡಿವೆ.
ಈಗಾಗಲೇ 4,500 ಮಂದಿ ಫೇಸ್‌ಬುಕ್‌ನಲ್ಲಿ ದುಡಿಯುತ್ತಿದ್ದು ಮುಂದಿನ ವರ್ಷ 3000 ಮಂದಿಯನ್ನು ಹೆಚ್ಚುವರಿಯಾಗಿ ಸೇರಿಸಿ ಇಂತಹ ವಿಡಿಯೋಗಳ ವಿರುದ್ಧ ಕಣ್ಣಿಡುತ್ತೇವೆ ಎಂದು ಝುಕರ್‌ಬರ್ಗ್ ತಿಳಿಸಿದ್ದಾರೆ.
ಜಗತ್ತಿನಾಧ್ಯಂತ 200 ಕೋಟಿ ಜನರು ಫೇಸ್‌ಬುಕ್ ಖಾತೆಗಳನ್ನು ಹೊಂದಿದ್ದಾರೆ.