ಬೆಳ್ತಂಗಡಿ: ಇದೊಂದು ಫೇಸ್‌ಬುಕ್ ಲವ್ ಕಥಾನಕ. ಬೆಳ್ತಂಗಡಿಯ ಯುವತಿ ಕೇರಳದ ಯುವಕ
ನನ್ನು ಫೇಸ್‌ಬುಕ್ ಮೂಲಕ ಇಷ್ಟಪಟ್ಟು ಪತಿ, ಮಕ್ಕಳನ್ನು ತೊರೆದು ಮದುವೆಯಾದ ಘಟನೆ ಇದು.
ಆಕೆಗೆ 34ರ ಹರೆಯ. 9ನೇ ತರಗತಿ ಓದುವ ಮಗಳು ಹಾಗೂ 4ನೆ ತರಗತಿಯ ಇನ್ನೊಬ್ಬ ಮಗಳಿದ್ದಾರೆ. ಪತಿ ರಬ್ಬರ್ ಟ್ಯಾಪಿಂಗ್ ಉದ್ಯೋಗಿ. ಆಕೆಗೂ ಶಿಕ್ಷಣ ಸಂಸ್ಥೆಯಲ್ಲಿ ಒಳ್ಳೆಯ ಹುದ್ದೆಯಿದೆ. ಉನ್ನತ ವ್ಯಾಸಂಗ ಮಾಡಿದ್ದಾರೆ. ಯಾಕೋ ಫೇಸ್‌ಬುಕ್ ಗೀಳು ಆರಂಭವಾಯಿತು.
ಅಲ್ಲಿ ಆಕೆ ನಿಜ ಹೆಸರನ್ನು ನೀಡದೇ ಗೀತಾ (ಹೆಸರು ಬದಲಿಸಲಾಗಿದೆ), 24 ವರ್ಷ ಎಂದು ಖಾತೆ ತೆರೆದಿದ್ದಳು. ಅಲ್ಲಿ ಕೇರಳದ ಕಣ್ಣೂರಿನ ಕೂತುಪರಂಬು ಕೈತೇರಿಯ 27ರ ಹರೆಯದ ಯುವಕನೊಬ್ಬನ ಪರಿಚಯವಾಯಿತು. ಗೆಳೆತನ ಪ್ರೇಮಕ್ಕೆ ತಿರುಗಿತು. ದಿನಕಳೆದಂತೆ ಆಕೆಗೆ ಆ ಯುವಕನನ್ನೇ ಮದುವೆ ಯಾಗಬೇಕೆಂದು ಬಯಕೆ ಕಾಡಿತು. ಕೇರಳದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಲು ಬೇಕಾದ ಸಿದ್ಧತೆಯನ್ನೂ ಮಾಡಿದರು. ಆದರೆ ಆಕೆ ಕ್ರೈಸ್ತ ಧರ್ಮದವಳಾಗಿದ್ದು ಫೇಸ್‌ಬುಕ್‌ನಲ್ಲಿ ಬೇರೆ ಹೆಸರು ಕೊಟ್ಟ ಕಾರಣ ಅದೇ ಹೆಸರಿನ, ಅಷ್ಟೇ ವಯಸ್ಸಿನ ಜನನ ಪ್ರಮಾಣಪತ್ರ ಬೇಕು. ಇಲ್ಲದಿದ್ದರೆ ವಿವಾಹ ನೋಂದಣಿ ಆಗುವುದಿಲ್ಲ. ಅದಕ್ಕಾಗಿ ಗೀತಾ ಎಂಬ ಹೆಸರಿನ ಶಿಕ್ಷಕಿಯ 10ನೇ ತರಗತಿಯ ಮಾರ್ಕ್ಸ್ ಕಾರ್ಡ್‌ಗೆ ಆಕೆಯ ಭಾವಚಿತ್ರ ಅಂಟಿಸಿ ನಕಲಿ ಪ್ರಮಾಣ ಪತ್ರ ಸಿದ್ಧಪಡಿಸಲಾಯಿತು.
ಎ. 7ರಂದು ಬೆಳ್ತಂಗಡಿ ತಾಲೂಕಿನಿಂದ ನಾಪತ್ತೆ ಯಾಗಿದ್ದ ಮಹಿಳೆಯ ಮದುವೆಯೂ ಆಯಿತು. ಪತ್ನಿ ಕಾಣೆಯಾದಾಗ ಪತಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಪೊಲೀಸರು ಹುಡುಕಾಟ ನಡೆಸಿದಾಗ ಯುವತಿ ಕೇರಳದಲ್ಲಿ ಇರುವುದು ಗೊತ್ತಾಗಿ ಇಲ್ಲಿನ ಪೊಲೀಸರ ತಂಡ ಭೇಟಿ ನೀಡಿ ಪತ್ತೆ ಮಾಡಿತು. ಪತಿಗೆ ಪತ್ನಿ ಬೇಕು, ಯುವತಿಗೆ ಪ್ರಿಯಕರ ಬೇಕು ಎಂಬ ಸ್ಥಿತಿ ಅಲ್ಲಿತ್ತು. ಯುವತಿಯನ್ನು ಮರಳಿ ಊರಿಗೆ ತರುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಷ್ಟರಲ್ಲಿಯೇ ಆಕೆಯ ವಂಚನೆ ಮದುವೆಯಾದ ಯುವಕನಿಗೂ ಗೊತ್ತಾಯಿತು.
ಪಾರ್ಟಿ ಗ್ರಾಮ
ಕೇರಳದ ಕಣ್ಣೂರಿನಲ್ಲಿ ಪಾರ್ಟಿ ಗ್ರಾಮ ಎಂಬ ಪ್ರದೇಶವಿದೆ. ಇದು ಸಿಪಿಐಎಂ ಹಿಡಿತ ಇರುವ ಪ್ರದೇಶ. ಇಲ್ಲಿ ಪಕ್ಷದ ಕಾರ್ಯಕರ್ತರೇ ಎಲ್ಲ. ಪೊಲೀಸರು ಕೂಡ ಮಧ್ಯಪ್ರವೇಶಿಸಬೇಕಾದರೆ ಪಕ್ಷದವರ ಅನುಮತಿ ಪಡೆಯಬೇಕು. ಇಲ್ಲಿನ ಆಡಳಿತಾತ್ಮಕ ವ್ಯವಹಾರಗಳೂ ಪಕ್ಷದ ಅಧೀನದವರ ಮೂಲಕವೇ ನಡೆಯುತ್ತವೆ.(ಅಂತರ್ಜಾಲದಲ್ಲಿ ಪಾರ್ಟಿ ಗ್ರಾಮದ ಕುರಿತು ವಿಸ್ತೃತ ಮಾಹಿತಿ ಇದೆ.) ಪ್ರಸ್ತುತ ಈ ಮಹಿಳೆಯನ್ನು ವಿವಾಹವಾದ ಯುವಕ ಕೂಡ ಇಂತಹ ಪಾರ್ಟಿ ಗ್ರಾಮದಲ್ಲಿದ್ದ. ಆದ್ದರಿಂದ ಬೆಳ್ತಂಗಡಿ ಪೊಲೀಸರ ಜತೆಗೆ ಬರಲು ಕೇರಳ ಪೊಲೀಸರು ಪಕ್ಷದವರ ಅನುಮತಿ ಪಡೆದಿದ್ದರು. ಪಾರ್ಟಿ ಗ್ರಾಮವಾದ ಕಾರಣ ಬೆಳ್ತಂಗಡಿ ಪೊಲೀಸರಿಗೆ ಅಲ್ಲಿನ ಪೊಲೀಸರು ತನಿಖೆಗೆ ಅಸಹಕಾರ ನೀಡಿದ್ದರು ಎನ್ನುತ್ತವೆ ಮೂಲಗಳು.