ಉಡುಪಿ: ವಿವಿಧ ಮಾಧ್ಯಮಗಳ ಕಾಲ ಉರುಳಿ ಈಗ ಫೇಸ್‌ಬುಕ್ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಲಿರ್ನೆ ಏಷ್ಯಾ ಸ್ಥಾಪಕಾಧ್ಯಕ್ಷ, ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ) ನೀತಿಯ ಚಿಂತನ ಚಿಲುಮೆ, ಕಮ್ಯುನಿಕೇಶನ್ ಪಾಲಿಸಿ ರಿಸರ್ಚ್ ಸೌತ್ ಅಧ್ಯಕ್ಷ ರೋಹನ್ ಸಮರಾಜೀವ ಹೇಳಿದರು.
ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಶನ್‌ನ (ಎಸ್‌ಒಸಿ)ಮಾಧ್ಯಮ ಸಂಶೋಧನ ಕೇಂದ್ರ(ಎಂಆರ್‌ಸಿ) ಎಸ್‌ಒಸಿ ಸಭಾಂಗಣ ದಲ್ಲಿ ಆಯೋಜಿಸಿದ “ಅಭಿವೃದ್ಧಿಗಾಗಿ ಭಾರತದ ಸಂಪರ್ಕ ನೀತಿ ಮತ್ತು ಕಾರ್ಯತಂತ್ರ’ ವಿಷಯದ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು, “ಫೇಸ್‌ಬುಕ್ ಕಾಲದಲ್ಲಿ ಸಂಪರ್ಕ ನೀತಿ’ ವಿಷಯ ಕುರಿತು ದಿಕ್ಸೂಚಿ ಭಾಷಣ ಮಾಡಿದರು.
ಮ್ಯಾನ್ಮರ್‌ನಂತಹ ದೇಶಗಳಲ್ಲಿಯೂ ಫೇಸ್‌ಬುಕ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕೇನ್ಯಾದಲ್ಲಿ ಹಣಕಾಸು ಸೇವೆಗಳಿಗೂ ಅಂತರ್‌ಸಂಪರ್ಕ ಸಾಧಿಸಲು ಚಿಂತನೆ ನಡೆದಿದೆ. ಇಂಟರ್‌ನೆಟ್, ಮೊಬೈಲ್ ನಿರ್ವಹಣೆ ಜಗತ್ತನ್ನು ವೇಗದಲ್ಲಿ ಮುನ್ನುಗ್ಗುವಂತೆ ಮಾಡುತ್ತಿದೆ. ಸಂವಹನ ನೀತಿ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ ಎಂದರು.
ಸಂವಹನ ನೀತಿಯ ನಿರ್ವಹಣೆ ಸರಕಾರಗಳಿಗೆ ಸವಾಲಾಗಿದೆ. ಥಿಯರಿಗೂ ಪ್ರಯೋಗಕ್ಕೂ ವ್ಯತ್ಯಾಸವಿದೆ. ಜನರ ನಡತೆಯಲ್ಲಿ ಸುಧಾರಣೆಯಾದರೆ ಮಾಧ್ಯಮ ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಬಹುದು. “ಹೊಸ ಮನುಷ್ಯ’ ಅಭಿವೃದ್ಧಿ ಆರ್ಥಿಕತೆ ತರಬಹುದು. ಬಹುತೇಕ ಅಭಿವೃದ್ಧಿಶೀಲ ಮಾರುಕಟ್ಟೆ ಆರ್ಥಿಕತೆಗಳು ಸಂವಹನ ನೀತಿ ಅಥವಾ ಕಾರ್ಯತಂತ್ರ ಅನುಸರಿಸುತ್ತಿವೆ. ಮಾಧ್ಯಮಗಳ ಆಯಾಮಗಳು ಈಗ ವಿಶಾಲವಾಗಿದೆ. ಸರಕಾರದ ಬಹು ಸಂಸ್ಥೆಗಳನ್ನು ಒಳಗೊಂಡು ನೀತಿ ಅನುಸರಿಸಬೇಕಾಗುತ್ತದೆ. ಆದರೆ ಮಾಧ್ಯಮಗಳು ಆರ್ಥಿಕತೆ ಭಾಗವಲ್ಲದ ಕಾರಣ ಅಸ್ಥಿರತೆ ಇದೆ. ಮಾಧ್ಯಮ ಆರ್ಥಿಕತೆ ಒಂದು ಭಾಗವಾಗಿದೆ. ಸಂವಹನ ನೀತಿಯ ಎಲ್ಲೆ ವಿಶ್ಲೇಷಿಸುವುದು ಕಷ್ಟಸಾಧ್ಯ ಎಂದರು.
ಭಾರತ, ಶ್ರೀಲಂಕಾ, ಪಾಕಿಸ್ಥಾನ, ಬಾಂಗ್ಲಾದೇಶ, ಅಫ್ಘಾನಿಸ್ಥಾನ ಮೊದಲಾದ ದೇಶಗಳಲ್ಲಿ ಆಗುತ್ತಿರುವ ಮಾಧ್ಯಮದ ಬದಲಾವಣೆ, ಪಾತ್ರಗಳನ್ನು ಸಮರಾಜೀವ ವಿಶ್ಲೇಷಿಸಿದರು.
ಎಂಆರ್‌ಸಿ ಸಮನ್ವಯಕಾರರಾದ ಡಾ| ಪದ್ಮಾ ರಾಣಿ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಶುಭಾ ಕಾರ್ಯಕ್ರಮ ನಿರ್ವಹಿಸಿ, ಡಾ| ಉಣ್ಣಿಕೃಷ್ಣನ್ ವಂದಿಸಿದರು. ಹಿರಿಯ ಸಂವಹನ ಸಂಶೋಧಕ ಡಾ| ವಿನೋದ ಅಗ್ರವಾಲ್ ಉಪಸ್ಥಿತರಿದ್ದರು.
ನ್ಯೂಸ್ ಪೇಮೆಂಟ್-
ಪೇಡ್ ನ್ಯೂಸ್!
ಮುದ್ರಣ ಮಾಧ್ಯಮ, ಬಳಿಕ ರೇಡಿಯೋ, ಟಿವಿ, ಈಗ ವಾಟ್ಸಪ್, ಫೇಸ್‌ಬುಕ್ ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಕೊಡುತ್ತಿವೆ. ಈ ಸುದ್ದಿಗಳಿಗೆ ಗ್ರಾಹಕರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಣ ತೆರು ತ್ತಾರೆ. ಇದು “ನ್ಯೂಸ್ ಪೇಮೆಂಟ್’. ಆದರೆ ಈಗ “ಪೇಡ್ ನ್ಯೂಸ್’ ಅಪಾಯ ತಲೆ ಎತ್ತಿದೆ ಎಂದು ಗೌರವ ಅತಿಥಿಯಾಗಿದ್ದ ಮಣಿಪಾಲ ವಿ.ವಿ. ಕುಲಸಚಿವ ಡಾ| ನಾರಾಯಣ ಸಭಾಹಿತ್ ಕಳವಳ ವ್ಯಕ್ತಪಡಿಸಿದರು.