ವಾಷಿಂಗ್ಟನ್/ನವದೆಹಲಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ಭಾರತದಲ್ಲಿ ತನ್ನ ಕಾರ್ಯವೈಖರಿಯಲ್ಲಿ ಪಕ್ಷಪಾತ ತೋರಿಸುತ್ತಿದೆ ಎಂಬ ವಾಲ್ ಸ್ಟ್ರೀಟ್ ಜರ್ನಲ್ ಪ್ರಕಟಿಸಿದ ಸುದ್ದಿ ಮತ್ತು ವಿವಾದಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ಸ್ಪಷ್ಟನೆ ನೀಡಿದೆ. ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಆರೋಪವನ್ನು ಫೇಸ್ ಬುಕ್ ತಳ್ಳಿಹಾಕಿದೆ ಎಂದು ವರದಿ ತಿಳಿಸಿದೆ.
ಸೋಶಿಯಲ್ ಮೀಡಿಯಾ (ಫೇಸ್ ಬುಕ್) ಕಂಪನಿ ವಕ್ತಾರ ನೀಡಿರುವ ಸ್ಪಷ್ಟನೆ ಪ್ರಕಾರ, ಹಿಂಸಾಚಾರ ಪ್ರಚೋದಿಸುವ ಕಂಟೆಂಟ್ ಅನ್ನು ಕಂಪನಿ ನಿಷೇಧಿಸಿದೆ ಮತ್ತು ಈ ನೀತಿಯನ್ನು ಜಾಗತಿಕವಾಗಿ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
“ನಾವು ದ್ವೇಷದ ಭಾಷಣ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಕಂಟೆಂಟ್ ಅನ್ನು ನಿಷೇಧಿಸಿದ್ದೇವೆ. ಅಲ್ಲದೇ ನಾವು ಯಾವುದೇ ರಾಜಕೀಯ ಪಕ್ಷ ಯಾವುದೇ ಸ್ಥಾನದಲ್ಲಿದ್ದರೂ ಹಿಂಸಾಚಾರ ಪ್ರಚೋದಿಸುವ ಪೋಸ್ಟ್ ಹಾಕಿದರೆ ಅದನ್ನು ನಿಷೇಧಿಸುವ ನಿಯಮವನ್ನು ಜಾಗತಿಕವಾಗಿ ಕಾರ್ಯಗತಗೊಳಿಸಿದ್ದೇವೆ” ಎಂದು ವಕ್ತಾರ ನೀಡಿರುವ ಪ್ರಕಟಣೆಯಲ್ಲಿ ವಿವರಿಸಿದೆ.
Related Articles
ಏನಿದು ಆರೋಪ, ವಿವಾದ?
ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ನ ಲೇಖನವನ್ನು ಉಲ್ಲೇಖಿಸಿ “ಬಿಜೆಪಿ ಮತ್ತು ಆರ್‌ಎಸ್‌ಎಸ್ ಭಾರತದಲ್ಲಿ ಫೇಸ್‌ಬುಕ್ ಮತ್ತು ವಾಟ್ಸಪ್ ಅನ್ನು ನಿಯಂತ್ರಿಸುತ್ತಿದೆ. ಮಾತ್ರವಲ್ಲದೆ ಅದರ ಮೂಲಕ ನಕಲಿ ಸುದ್ದಿ ಮತ್ತು ದ್ವೇಷವನ್ನು ಹರಡಿ, ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ. ಕೊನೆಗೂ ಅಮೆರಿಕಾದ ಮಾಧ್ಯಮವೊಂದು ಫೇಸ್‌ಬುಕ್ ನ ಕುರಿತಾದ ಸತ್ಯವೊಂದನ್ನು ಹೊರತಂದಿದೆ ಎಂದು ಆರೋಪ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರವಿಶಂಕರ್ ಪ್ರಸಾದ್, “ತಮ್ಮ ಪಕ್ಷದಲ್ಲಿಯೂ ಪ್ರಭಾವ ಬೀರಲು ಸಾಧ್ಯವಾಗದವರು ಮಾತ್ರವಲ್ಲದೆ ಸೋತವರು ಇಡೀ ಜಗತ್ತನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿಯಂತ್ರಿಸುತ್ತಿದೆ ಎಂದು ಹೇಳುತ್ತಲೇ ಇರುತ್ತಾರೆ. ಚುನಾವಣೆಗೂ ಮುನ್ನ ಕೇಂಬ್ರಿಡ್ಜ್ ಅನಾಲಿಟಿಕಾ ಹಾಗೂ ಫೇಸ್ ಬುಕ್ ನ ಮಾಹಿತಿ ಸಂಗ್ರಹಿಸಿ ಸಿಕ್ಕಿ ಬಿದ್ದಿದ್ದೀರಿ. ಈಗ ನಮ್ಮನ್ನು ಪ್ರಶ್ನಿಸುತ್ತಿದ್ದೀರಿ ಎಂದು ತಿರುಗೇಟು ನೀಡಿದ್ದರು.
ಭಾರತದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆಗಳು ಫೇಸ್‌ಬುಕ್ ನಿಯಂತ್ರಿಸುತ್ತಿವೆ ಎಂಬ ವಾದವೀಗ ಭಾರಿ ಚರ್ಚೆಯಲ್ಲಿದ್ದು, ಬಿಜೆಪಿ- ಕಾಂಗ್ರೆಸ್ ನಾಯಕರ ನಡುವೆ ಕೆಸರೆರಚಾಟಕ್ಕೂ ಕಾರಣವಾಗಿದೆ.