Advertisement
ಸುಮ್ಮನೆ ಕುಳಿತು ಮೊಬೈಲ್‌ನಲ್ಲಿ ಫೇಸ್‌ಬುಕ್ ನೋಡುತ್ತಿದ್ದೆ. ಒಂದಿಷ್ಟು ಗ್ರೂಪ್‌ಗ್ಳು ತಮ್ಮ ಪುಟವನ್ನು ಲೈಕ್ ಮಾಡಲು ಸಾಲು ಸಾಲಾಗಿ ಕಾದಿದ್ದವು. “ಸೌಂದರ್ಯ ಲಹರಿ - ಮಹಿಳೆಯರಿಗೆ ಮಾತ್ರ’ ಎಂಬ ಟೈಟಲ್ ಕಣ್ಣಿಗೆ ಬಿತ್ತು. ಸಣ್ಣಗಾಗಲು ಟಿಪ್ಸ್ ಇದೆಯಾ? ನೋಡಿದೆ. ಹೊಸತೇನೂ ಕಾಣಿಸಲಿಲ್ಲ. “ನಮ್ಮ ಮನೆ ಕೈ ತೋಟ’ ಎಂಬ ಪುಟದಲ್ಲಿ ಸುಂದರ ಹೂಗಳು ಅರಳಿ ನಿಂತಿದ್ದವು. “ಅಡುಗೆ ಅರಮನೆ’ಯಲ್ಲಿ ಥರ ಥರದ ರೆಸಿಪಿಗಳ ದರ್ಬಾರ್ ಇತ್ತು. ಅವನ್ನೆಲ್ಲ ಪ್ರಯೋಗಿಸಿಬಿಟ್ಟಿದ್ದೆ. ಇವೆಲ್ಲದರ ನಡುವೆ ಅಲ್ಲೊಂದು ಗ್ರೂಪ್ ವಿಶಿಷ್ಟ ಅಂತನ್ನಿಸಿತು. ಅದು “I love cats’!ಹಿಂದೆಮುಂದೆ ನೋಡದೇ ಲೈಕ್ ಒತ್ತಿ, ಸದಸ್ಯಳಾಗಿಬಿಟ್ಟೆ.
Related Articles
Advertisement
“ನಿಮ್ಮ ಬೆಕ್ಕಿನ ಇಷ್ಟದ ಊಟವೇನು? ಆಟಿಕೆಗಳು ಯಾವುವು?’ ಎಂದು ಮರುದಿನ ಯಾರೋ ಕೇಳಿದ್ದರು. “ಕೌ ಮಿಲ್ಕ್’ ಎಂದೆ. ಅದಕ್ಕೆ ಬಿದ್ದಿದ್ದು ಒಂದೇ ಲೈಕು. ಅದರ ಮೇಲಿನ ಕಾಮೆಂಟ್‌ಗಳನ್ನು ಓದಿದೆ. ಫಿಶ್ ಫ್ರೈ, ಬರ್ಗರ್, ಪಿಜ್ಜಾ, ಇನ್ನೂ ಕಂಡು ಕೇಳರಿಯದ ವಿದೇಶಗಳ ವಿಧವಿಧ ತಿನಿಸುಗಳ ಹೆಸರಿದ್ದವು. ಬೆಕ್ಕಿನ ಅಭಿಮಾನಿಗಳೆಲ್ಲ ಅದಕ್ಕೆ ಮುಗಿಬಿದ್ದು ಲೈಕ್ ಮಾಡಿದ್ದರು. ಬೆಕ್ಕುಗಳು ನನ್ನಂತೆ ನಾರ್ಮಲ್ ಅಲ್ಲ, ಸಖತ್ ಪಾಶ್ ಅಂತ ಆಗಲೇ ನನಗೆ ಅನ್ನಿಸಿದ್ದು. ಮಕ್ಕಳಿಗೆ ನೆಟ್ಟಗೆ ಬೇಕಾದ ಅಡುಗೆ ಮಾಡಲು ಟೈಮ್ ಇಲ್ಲ. ಇನ್ನು ಬೆಕ್ಕಿಗೆ ಏನ್ ಸ್ಪೆಷಲ್ ಮಾಡೋದು ಅಂತಂದುಕೊಂಡೆ. “ಅವಕ್ಕೂ ಆಟಿಕೆ ಕೊಡಿಸಬೇಕಾ?’ ಅಂತ ಮತ್ತೆ ಮೂಗಿನ ಮೇಲೆ ಬೆರಳಿಟ್ಟೆ.
ಇನ್ನೊಂದು ಕಡೆ, “ನನ್ನ ಬೆಕ್ಕು ನಿಧನವಾಯಿತೆಂದು ತಿಳಿಸಲು ವಿಷಾದಿಸುತ್ತೇನೆ’ ಎಂಬ ಅಳುವ ಎಮೋಜಿ ಹಾಕಿದ್ದರು ಒಬ್ಬರು. “ಸೋ ಸ್ಯಾಡ್’, “Rip’ ಎಂದು ಎಲ್ಲಾ ಶೋಕಾಚಾರಣೆ ನಡೆಸಿದ್ದರು. “ನಿನ್ನ ದುಃಖದಲ್ಲಿ ನಾವೂ ಜೊತೆಗಿದ್ದೇವೆ’ ಎಂದು ಸಂತೈಸಿದರು. ಹಾಗೆ ಪೋಸ್ಟರ್ ಹಾಕಿದಾಕೆ, ಒಂದು ದಿನ ಊಟ ಬಿಟ್ಟು, ಶೋಕ ಆಚರಿಸಿದ್ದಳು.
“ನಾನು ನನ್ನ ಎರಡು ಕಿಟ್ಟನ್ ಪ್ರವಾಹದಲ್ಲಿ ಸಿಲುಕಿದ್ದೇವೆ. ದಯವಿಟ್ಟು ನಮಗಾಗಿ ದೇವರಲ್ಲಿ ಪ್ರಾರ್ಥಿಸಿ’ ಎಂದು ಇನ್ನಾರೋ ಹಾಕಿದ್ದರು. “ಗಾಡ್ ಬ್ಲೆಸ್ ಯು ಆಲ್’, “ಹುಷಾರು’ ಎಂದು ಸಮಾಧಾನದ ಕಾಮೆಂಟುಗಳ ಪ್ರವಾಹ ಆಕೆಯತ್ತ ಹರಿದಿದ್ದವು.
ಮತ್ತೂಬ್ಬಳಂತೂ, ಮೊಬೈಲ್ ಮೇಲೆ ಕಕ್ಕ ಮಾಡಿದ ಬೆಕ್ಕಿನ ಫೋಟೋ ಹಾಕಿ, “ಇಂಥ ಚೇಷ್ಟೆ ಮಾಡೋ ನನ್ನ ಪ್ರೀತಿಯ ಬೆಕ್ಕು’ ಎಂದು ಬರೆದಿದ್ದಳು. ಅದನ್ನು ನೋಡಿ ಹೇಸಿಗೆಯಿಂದ ನನಗೆ ಎರಡು ದಿನ ಊಟವೇ ಸೇರಲಿಲ್ಲ. ಆ ಚಿತ್ರ ಕಣ್ಣ ಮುಂದೆ ಸುಳಿದಾಗಲೆಲ್ಲ ಒಂಥರಾ ಅನ್ನಿಸುತ್ತಿತ್ತು. ನಮ್ಮನೆ ಬೆಕ್ಕು ಎಲ್ಲಿ ಇದನ್ನೆಲ್ಲಾ ನೋಡಿ ಕಲಿತುಬಿಟ್ಟರೆ ಅಂತ ಆತಂಕ ಹುಟ್ಟಿ, ಬೆಕ್ಕು ಬಂದಾಗಲೆಲ್ಲ ಮೊಬೈಲನ್ನು ಬಚ್ಚಿಟ್ಟುಕೊಳ್ಳುತ್ತಿದ್ದೆ.
“ಬೆಕ್ಕಿನಿಂದ ಬೆಕ್ಕಿಗಾಗಿ ಬೆಕ್ಕಿಗೋಸ್ಕರ ಇರುವ ಈ ಗ್ರೂಪ್‌ನಲ್ಲಿ ನಿಮ್ಮ ಬಳಿ ಇರುವ ಬೆಕ್ಕಿನ ಸಂಖ್ಯೆ ಎಷ್ಟು?’ ಎಂದು ಯಾರೋ ಪ್ರಶ್ನಿಸಿದ್ದರು. “ಎರಡು’ ಎಂದೆ. ಕೆಲವರು ಊಟದ ಸಮಯದಲ್ಲಿ ಮಾತ್ರ ಬರುವ ಬೆಕ್ಕುಗಳ ಲೆಕ್ಕವನ್ನು ಒಪ್ಪಿಸಿದ್ದರು. ಯಾವನೋ ಒಬ್ಬ “ನೋ ಒನ್’ ಅಂದ. ತಕ್ಷಣವೇ ಅವನನ್ನು ಬ್ಲಾಕ್ ಮಾಡಲಾಯಿತು.
“ನಮ್ಮನೆಯ ರೀಟಾ ಮರಿ ಹಾಕಿದ್ದಾಳೆ. ಆ ಮುದ್ದಿನ ಮರಿಗಳಿಗೆ ಚೆಂದದ ಹೆಸರಿಡಿ’ ಅಂತ ಒಬ್ಬ ಬೆಳಗ್ಗೆ ಮುಂಚೆಯೇ ಪೋಸ್ಟ್ ಹಾಕಿದ್ದ. ಕ್ಷಣಮಾತ್ರದಲ್ಲಿ ಬಹಳ ಆಕರ್ಷಕ, ಚಿತ್ರ- ವಿಚಿತ್ರ ಹೆಸರುಗಳೆಲ್ಲ ಪೋಸ್ಟ್ ಆದವು. ಸಂಜೆ ವೇಳೆಗೆ ಅದರ ನಾಮಕರಣವೇ ಮುಗಿದಿತ್ತು!
ಇದ್ದಕ್ಕಿದ್ದಂತೆ ಒಂದು ದಿನ, ಸದಸ್ಯರೆಲ್ಲ ದಂಗೆ ಎದ್ದಿದ್ದರು. ಏಕೆಂದು ನೋಡಿದರೆ, ಯಾರೋ ಒಬ್ಬ ಕಿಡಿಗೇಡಿ ಐ ಜಚಠಿಛಿ cಚಠಿs ಎಂದು ಪೋಸ್ಟ್ ಹಾಕಿದ್ದ. “ಅಡ್ಮಿನ್ ವೇರ್ ಆರ್ ಯು?’, “ದಯವಿಟ್ಟು ಇಂಥವರನ್ನು ಬ್ಲಾಕ್ ಮಾಡಿ’ ಎಂದು ಬೆಕ್ಕಿನ ಅಭಿಮಾನಿಗಳು ಅರಚುತ್ತಿದ್ದರು. ಎಲ್ಲಾ ಸದಸ್ಯರು ಚುರುಕಾಗಿ ಬೆಕ್ಕುಗಳ ದ್ವೇಷಿಗಳನ್ನು ಹುಡುಕಿ ಹುಡುಕಿ ಬ್ಲಾಕ್ ಮಾಡಿದರು.
“ಬೆಕ್ಕು ಅಡ್ಡ ಬಂದರೆ ಅಪಶಕುನ ಅಲ್ಲ. ಮನುಷ್ಯ ಅಡ್ಡ ಬಂದರೆ ಬೆಕ್ಕಿಗೆ ಅಪಶಕುನ. ಬೆಕ್ಕೊಂದು ಮುಗ್ಧ ಪ್ರಾಣಿ. ಬೆಕ್ಕಿನ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ನಮ್ಮ ಗುರಿ’ ಎಂಬ ಹೋರಾಟದ ಕೂಗು ಅಲ್ಲಿ ಕೇಳಿಬಂತು. 98 ಸಾವಿರ ಸದಸ್ಯರಿರುವ ಈ ಗುಂಪಿನ ಮುಖ್ಯ ಗುರಿ, ಮುಂದಿನ ದಿನಗಳಲ್ಲಿ ಬೆಕ್ಕನ್ನು “ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸುವುದಂತೆ.
ಮೊನ್ನೆಯೊಂದು ಇಲಿ ಬಂದು ಮಕ್ಕಳು ಓದುವ ಕೋಣೆಯನ್ನು ಸೇರಿತ್ತು. ಬೆಕ್ಕನ್ನು ಕರೆದು ಹೇಳಿದೆ. “ಹೋಗಿ, ಆ ಇಲಿ ಹಿಡಿ’ ಅಂತ. “ಈಗಾಗಲೇ ಹೊಟ್ಟೆ ತುಂಬಿದೆ. ಜಾಸ್ತಿ ಫೋರ್ಸ್ ಮಾಡಿದ್ರೆ, ಗ್ರೂಪ್‌ನಲ್ಲಿ ಕಂಪ್ಲೇಂಟ್ ಮಾಡ್ತೀನಿ’ ಅಂತ ಹೆದರಿಸಿತು. ಇದು ಬೆಕ್ಕಿನ ಕಾಲವೆಂದು ತಿಳಿದು ಸುಮ್ಮನಾದೆ.
ನೀವು ಬೆಕ್ಕು ಪ್ರಿಯರೇ?ಬೆಕ್ಕು ಪ್ರಿಯರು i love cats ಗ್ರೂಪ್‌ಗೆ ಒಂದು ಲೈಕ್ ಹಾಕಿ ಸೇರಬಹುದು. ನಿಮ್ಮ ನಿಮ್ಮ ಬೆಕ್ಕುಗಳ ಫೋಟೋ, ಆಹಾರ ಪದ್ಧತಿ, ಇಷ್ಟದ ಆಟಿಕೆ, ಹೆಸರುಗಳು ಹಾಗೂ ಇತರ ಸಾಹಸ ಯಶೋಗಾಥೆ ಹಂಚಿಕೊಳ್ಳಲು ಇದು ಒಂದು ಉತ್ತಮ ವೇದಿಕೆ. ಬೆಕ್ಕೂ ಒಂದು ಜೀವಿ. ಅದರ ರಕ್ಷಣೆಗೂ ಜನರ ದೊಡ್ಡ ಪಡೆಯಿದೆ ಎಂಬುದೆಲ್ಲ ಅಲ್ಲಿ ತಿಳಿಯುತ್ತಾ ಹೋಗುತ್ತೆ. ಅಂಜನಾ ಗಾಂವ್ಕರ್, ದಬ್ಬೆಸಾಲ್