ನವದೆಹಲಿ : ತಂತ್ರಜ್ಞಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಪ್ರಸಿದ್ದ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ 13 ವರ್ಷ ಹಾಗೂ ಅದಕ್ಕಿಂತಲೂ ಕಡಿಮೆ ವಯೋಮಿತಿಯ ಮಕ್ಕಳಿಗಾಗಿ ಪ್ರತ್ಯೇಕ ಇನ್ ಸ್ಟಾ ಗ್ರಾಂ ಆವೃತ್ತಿಯನ್ನು ಪರಿಚಯಿಸಲು ಮುಂದಾಗಿದೆ.
ಈ ನೂತನ ಆವೃತ್ತಿಯಲ್ಲಿ ಮಕ್ಕಳು ಪೋಟೋಗಳನ್ನು ಶೇರ್ ಮಾಡಬಹುದಾಗಿದ್ದು, ಇದು ಸಂಪೂರ್ಣವಾಗಿ ಪೋಷಕರ ನಿಯಂತ್ರಣದಲ್ಲಿ ಇರಲಿದೆ .
ಈ ಕುರಿತಾದ ಯೋಜನೆಯ ಬಗ್ಗೆ ಫೇಸ್ ಬುಕ್ ಸಂಸ್ಥೆ ಮಾಹಿತಿಯನ್ನು ನೀಡಿದೆ. ಆದರೆ ಈವರೆಗೂ ಸಾರ್ವಜನಿಕರ ಉಪಯೋಗಕ್ಕೆ ಯಾವುದೇ ವಿಧವಾದ ಅವಕಾಶವನ್ನು ನೀಡಿಲ್ಲ ಎಂದು ವರದಿ ತಿಳಿಸಿದೆ.
ಹೊಸ ಆವೃತ್ತಿಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಫೇಸ್ ಬುಕ್, ಮಕ್ಕಳು ಸಾಮಾಜಿಕವಾಗಿ ಸಂಪರ್ಕವನ್ನು ಹೊಂದಿಕೊಳ್ಳುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ ಬಳಕೆಗೆ ತಮ್ಮ ಪೋಷಕರಲ್ಲಿ ಅನುಮತಿ ಕೇಳುತ್ತಾರೆ. ಅಂತಹ ಸಮಯದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಈ ನೂತನ ಆವೃತ್ತಿಯ ಇನ್ ಸ್ಟಾಗ್ರಾಂ ಅನ್ನು ನೀಡಬಹುದಾಗಿದ್ದು, ಇದು ಸಂಪೂರ್ಣವಾಗಿ ಪೋಷಕರ ನಿಯಂತ್ರಣದಲ್ಲಿ ಇರಲಿದೆ. ಈಗ ರೂಪಿಸಲಾಗಿರುವ ಹೊಸ ಫೀಚರ್ ಜೊತೆ ಜೊತೆಯಲ್ಲಿಯೇ ಇನ್ನೂ ಹಲವಾರು ನೂತನ ಸೌಲಭ್ಯಗಳನ್ನು ನೀಡಲು ಸಂಸ್ಥೆ ಪ್ರಯತ್ನಿಸುತ್ತಿದ್ದು, ಆ ಮೂಲಕ ಪೋಷಕರು ಮತ್ತು ಮಕ್ಕಳು ಇನ್ನೂ ಹೆಚ್ಚು ಅತ್ಯುತ್ತಮ ಇನ್ ಸ್ಟಾ ಗ್ರಾಂ ಬಳಕೆಯ ಅನುಭವನ್ನು ಪಡೆದುಕೊಳ್ಳಬಹುದಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಹುಚ್ಚು ಸಾಹಸ…ಸಿಂಹದ ಬೋನಿನೊಳಗೆ ನುಗ್ಗಿ ದಾಳಿಗೊಳಗಾದ ವ್ಯಕ್ತಿ!
ಈ ಹೊಸ ವಿನ್ಯಾಸದ ಇನ್ ಸ್ಟಾ ಗ್ರಾಂ ನಲ್ಲಿ ಮಕ್ಕಳು ಅತ್ಯಂತ ಸುರಕ್ಷಿತವಾಗಿ ಸಮಾಜದೊಂದಿಗೆ ಉತ್ತಮ ಸಂಬಂಧವನ್ನು ಹೊಂದಬಹುದಾಗಿದ್ದು, ಪೋಷಕರು ಯಾವ ವ್ಯಕ್ತಿಗಳೊಂದಿಗೆ ತಮ್ಮ ಮಕ್ಕಳು ಸಂಪರ್ಕ ಸಾಧಿಸಬಹುದು ಎಂಬುದನ್ನು ನಿರ್ಧರಿಸಬಹುದಾಗಿದೆ.