ವಿದ್ಯಾರ್ಥಿ ಜೀವನದ ಎರಡನೇ ಪ್ರಮುಖ ಘಟ್ಟವಾದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಗುರುವಾರ ರಾಜ್ಯಾದ್ಯಂತ 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪರೀಕ್ಷೆ ವೇಳೆ ಯಾವುದೇ ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸಿರುವ ಮಂಡಳಿ ಇಂತಹ ಚಟುವಟಿಕೆಗಳ ಮೇಲೆ ನಿಗಾ ಇಡಲು ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬಂದಿಯನ್ನು ನಿಯೋಜಿಸಿದೆ.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ರಾಜ್ಯ ಸರಕಾರ ವಿಲೀನಗೊಳಿಸಿದ್ದು, ಇತೀ¤ಚೆಗಷ್ಟೇ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಂದು ಮರುನಾಮಕರಣ ಮಾಡಿದೆ. ಈ ಮಂಡ ಳಿಯು ಇದೇ ಮೊದಲ ಬಾರಿಗೆ ಪದವಿ ಪೂರ್ವ ಶಿಕ್ಷಣ ಪರೀಕ್ಷೆ ನಡೆಸುತ್ತಿದ್ದು ಪರೀಕ್ಷೆ ನಡೆಸುವಲ್ಲಿ ಯಾವುದೇ ನ್ಯೂನತೆ ಆಗದಂತೆ ವಿಶೇಷ ಗಮನ ಹರಿಸಿದೆ.
ಕಳೆದ ಕೆಲವು ವರ್ಷಗಳಿಂದೀಚೆಗೆ ಪರೀಕ್ಷೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಮುಂದೂಡಿಕೆಯ ಕುರಿತಂತೆ ವದಂತಿ ಹಬ್ಬಿಸಿ, ವಿದ್ಯಾರ್ಥಿಗಳು ಮತ್ತವರ ಹೆತ್ತವರು ವಿನಾಕಾರಣ ಗೊಂದಲಕ್ಕೀಡಾಗುವಂತೆ ಮಾಡುವ ಕುಕೃತ್ಯಗಳಲ್ಲಿ ಕೆಲವೊಂದು ಕಿಡಿಗೇಡಿಗಳು ತೊಡಗಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಇಂಥ ಕಿಡಿಗೇಡಿಗಳ ಮೇಲೆ ನಿಗಾ ಇರಿಸಲು ಸೈಬರ್ ಕ್ರೈಮ್ ಅಧಿಕಾರಿಗಳು, ಸ್ಥಳೀಯ ಪೊಲೀಸರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡವನ್ನು ಮಂಡಳಿ ರಚಿಸಿದೆ. ಒಟ್ಟಾರೆಯಾಗಿ ಇಡೀ ಪರೀಕ್ಷಾ ಪ್ರಕ್ರಿಯೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆಯುವಂತಾಗಲು ಮಂಡಳಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಕಳೆದ ಮೂರು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತ ಬಂದಿದ್ದ ಶಿಕ್ಷಣ ರಂಗದಲ್ಲಿ ಪ್ರಸಕ್ತ ಸಾಲಿನಲ್ಲಿ ಈ ಎಲ್ಲ ಗೊಂದಲ, ಗೋಜಲುಮಯ ಸನ್ನಿವೇಶಗಳಿಂದ ಮುಕ್ತವಾಗಿ ಅತ್ಯಂತ ವ್ಯವಸ್ಥಿತವಾಗಿ ಶೈಕ್ಷಣಿಕ ಪ್ರಕ್ರಿಯೆಗಳು ನಡೆದಿವೆ. ಕಾಲೇಜು ಪ್ರವೇಶದಿಂದ ಹಿಡಿದು ಪಾಠಪ್ರವಚನ, ಪಠ್ಯೇತರ ಚಟುವಟಿಕೆಗಳು, ಪೂರ್ವಸಿದ್ಧತ ಪರೀಕ್ಷೆ ಸಹಿತ ಪ್ರತಿಯೊಂದೂ ಪ್ರಕ್ರಿಯೆಯೂ ಸುಗಮವಾಗಿ ನಡೆದು ಇದೀಗ ವಾರ್ಷಿಕ ಪರೀಕ್ಷೆಯ ಹಂತಕ್ಕೆ ಬಂದು ತಲುಪಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಮಂಡಳಿ ಕೂಡ ಈ ಬಾರಿ ವಿಶೇಷ ಆಸ್ಥೆಯಿಂದ ಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ಅಕ್ರಮ, ಗೊಂದಲಗಳು ನಡೆಯದಂತೆ ಅತ್ಯಂತ ಎಚ್ಚರಿಕೆಯಿಂದ ಸಿದ್ಧತೆಗಳನ್ನು ಮಾಡಿಕೊಂಡಿದ್ದು ವಿದ್ಯಾರ್ಥಿಗಳು ಪರೀಕ್ಷೆಯನ್ನು ಅತ್ಯಂತ ಶಾಂತಚಿತ್ತದಿಂದ ಮುಕ್ತವಾಗಿ ಎದುರಿಸಲು ಅವಕಾಶವನ್ನು ಮಾಡಿಕೊಟ್ಟಿದೆ.
ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವೆಂದೇ ಪರಿಗಣಿಸಲ್ಪಡುವ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ವಿದ್ಯಾರ್ಥಿಗಳ ಭಾವೀ ಶೈಕ್ಷಣಿಕ ಜೀವನಕ್ಕೆ ಮುನ್ನುಡಿಯನ್ನು ಬರೆಯುವಂಥದ್ದಾಗಿದೆ. ಪಿಯು ಬಳಿಕ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ದುಕೊಂಡು ಅದಕ್ಕೆ ಪೂರಕವಾದ ಶಿಕ್ಷಣವನ್ನು ಪಡೆಯಬಹುದಾಗಿದೆ. ಈ ಕಾರಣದಿಂದಾಗಿಯೇ ದ್ವಿತೀಯ ಪಿಯು ಪರೀಕ್ಷೆ ಎಂದಾಕ್ಷಣ ಹೆತ್ತವರು ತಮ್ಮ ಮಕ್ಕಳ ಮೇಲೆ ಒಂದಿಷ್ಟು ಹೆಚ್ಚಿನ ಒತ್ತಡ ಹೇರುತ್ತಾರೆ. ಹಾಗೆಂದ ಮಾತ್ರಕ್ಕೆ ದ್ವಿತೀಯ ಪಿಯು ಫಲಿತಾಂಶವೇ ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ಕೊನೆಯಲ್ಲ ಎಂಬುದನ್ನು ವಿದ್ಯಾರ್ಥಿಗಳು ಮತ್ತು ಹೆತ್ತವರು ಮರೆಯಬಾರದು.
ಪರೀಕ್ಷಾ ಮಂಡಳಿ ಪ್ರಕಟಿಸಿರುವ ನಿಯಮಾವಳಿಗಳು ಮತ್ತು ಪರೀಕ್ಷಾ ಕೊಠ ಡಿಯ ಸಿಬಂದಿ ಮತ್ತು ಮೇಲ್ವಿಚಾರಕರು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿದಲ್ಲಿ ಈ ಪರೀಕ್ಷೆಯಲ್ಲಿ ತಮ್ಮ ನಿರೀ ಕ್ಷೆಯ ಅಂಕಗಳನ್ನು ಪಡೆಯುವುದು ವಿದ್ಯಾರ್ಥಿಗಳಿಗೆ ಕಷ್ಟಸಾಧ್ಯವೇನಲ್ಲ. ಇದನ್ನು ಬಿಟ್ಟು ಯಾರಾದೋ ಮಾತು ಕೇಳಿಯೋ ಅಥವಾ ಅನವಶ್ಯಕ ಒತ್ತಡಕ್ಕೊಳಗಾಗಿ ಪರೀಕ್ಷಾ ಅಕ್ರಮದಂಥ ಅಡ್ಡದಾರಿ ಹಿಡಿದಲ್ಲಿ ತಮ್ಮ ಶೈಕ್ಷಣಿಕ ಜೀವನವನ್ನೇ ಹಾಳುಮಾಡಿಕೊಂಡಂತೆ ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಆಯಾಯ ದಿನದ ಪರೀಕ್ಷಾ ವಿಷಯವನ್ನು ಸಮರ್ಪಕವಾಗಿ ಅಧ್ಯಯನ ಮಾಡಿ ಪರೀಕ್ಷೆಯನ್ನು ಶಾಂತಚಿತ್ತರಾಗಿ ಎದುರಿಸಿದ್ದೇ ಆದಲ್ಲಿ ತಮ್ಮ ಶ್ರಮಕ್ಕೆ ತಕ್ಕ ಫಲಿತಾಂಶ ಪಡೆದೇ ಪಡೆಯುತ್ತಾರೆ. ದಾರ್ಶನಿಕರ ಮಾತಿನಂತೆ “ಆತ್ಮವಿಶ್ವಾಸ ಮತ್ತು ಕಠಿನ ಪರಿಶ್ರಮ ಯಾರಲ್ಲಿರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ’.