Advertisement

ಕೌಶಲ್ಯಗಳಿಸಿ ತಾಂತ್ರಿಕತೆಯ ಸವಾಲು ಎದುರಿಸಿ

11:36 AM May 12, 2019 | Suhan S |

ಕೋಲಾರ: ಗುಣಮಟ್ಟದ ಶಿಕ್ಷಣದ ಜತೆ ಮೌಲ್ಯಗಳನ್ನು ರೂಢಿಸಿಕೊಂಡು ಕೌಶಲ್ಯ ಅಭಿವೃದ್ಧಿಯ ಮೂಲಕ ಆಧುನಿಕತೆ ಮತ್ತು ತಾಂತ್ರಿಕ ಸವಾಲುಗಳನ್ನು ಎದುರಿಸಲು ಸಿದ್ಧರಾಗಿ ಎಂದು ವಿದ್ಯಾರ್ಥಿನಿಯರಿಗೆ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜ್‌ ಸಲಹೆ ನೀಡಿದರು.

Advertisement

ನಗರದ ಮಹಿಳಾ ಕಾಲೇಜು ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ, ಕ್ರೀಡಾ, ಸಾಂಸ್ಕೃತಿಕ, ಶೈಕ್ಷಣಿಕ ಸಾಧಕರನ್ನು ಪುರಸ್ಕರಿಸಿ ಮಾತನಾಡಿ, ಶಿಕ್ಷಣದಲ್ಲಿ ಆಧುನಿಕತೆ, ತಾಂತ್ರಿಕತೆ ಅಳವಡಿಕೆಯಾಗುತ್ತಿದ್ದು, ಬದಲಾದ ಕಾಲಕ್ಕೆ ತಕ್ಕಂತೆ ಮನೆಯಲ್ಲೇ ಕುಳಿತು ಪರೀಕ್ಷೆ ಬರೆಯುವ ಕಾಲವೂ ಬರಬಹುದು. ಅದಕ್ಕೂ ನೀವು ಸಿದ್ಧರಾಗಬೇಕು ಎಂದರು.

ವಿಶ್ವ ಭಾರತದ ಕಡೆ ನೋಡುತ್ತಿದೆ. 2025ರ ವೇಳೆಗೆ 18ರಿಂದ 28 ವರ್ಷ ವಯೋಮಿತಿಯುಳ್ಳ ಯುವ ಜನತೆ ಶೇ.56 ಆಗಲಿದೆ. ವಿಶ್ವದ ಯಾವ ರಾಷ್ಟ್ರದಲ್ಲೂ ಯುವ ಸಂಪತ್ತು ಈ ಪ್ರಮಾಣದಲ್ಲಿ ಇಲ್ಲ. ದೇಶದ ಯುವಸಂಪತ್ತಿಗೆ ಬಲನೀಡಲು ಗುಣಮಟ್ಟದ ಶಿಕ್ಷಣ, ಕೌಶಲ ಒದಗಿಸುವುದು ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳ ಜವಾಬ್ದಾರಿ ಎಂದು ಹೇಳಿದರು.

ಒಳ್ಳೆಯ ತಾಯಿಯಾಗಿ: ಚಲನ ಚಿತ್ರ ನಟ ಜಿ.ಕಿಶೋರ್‌ ಕುಮಾರ್‌ ಮಾತನಾಡಿ, ಹೆಣ್ಣು ಮಕ್ಕಳು ಈ ಸಮಾಜಕ್ಕೆ ಮಾದರಿಯಾಗಿದ್ದಾರೆ. ಯಾವುದೇ ರಂಗದಲ್ಲೂ ತಾವೇ ಮುಂದು ಎಂದು ಸಾಬೀತು ಮಾಡುತ್ತಿದ್ದಾರೆ. ನಿಮ್ಮಲ್ಲಿನ ಛಲ, ಕೌಶಲ್ಯ, ಕಲಿಕಾಸಕ್ತಿಗೆ ಸಾಟಿಯಿಲ್ಲ ಎಂದ ಅವರು, ನೀವು ಜೀವನದಲ್ಲಿ ಒಳ್ಳೆಯ ತಾಯಿಯಾಗಿ ಸಮಾಜಕ್ಕೆ ಕೊಡುಗೆ ನೀಡಿ ಎಂದರು.

ಕೊಡುಗೆ ನೀಡಿ: ರಾಷ್ಟ್ರೀಯ ಬಾಸ್ಕೆಟ್ಬಾಲ್ ಪಟು ಸಿ.ಮಹಾನಂದ್‌, ಒಂದು ಮಗುವನ್ನು ಅಮ್ಮ ಮಾತ್ರ ದಾರಿಗೆ ತರಬಲ್ಲಳು, ಆ ಮಗುವಿನ ಭವಿಷ್ಯ ರೂಪಿಸಬಲ್ಲಳು, ಆಕೆ ಮಾತ್ರವೇ ದೈವವಾಗಿ ಸಮಾಜ, ದೇಶಕ್ಕೆ ಕೊಡುಗೆ ನೀಡಲು ಸಾಧ್ಯ ಎಂದರು.

Advertisement

ಪ್ರೊ.ರಾಜೇಂದ್ರ ಮಾತನಾಡಿ, ಸರ್ಕಾರಿ ಕಾಲೇಜು ಎಂಬ ಕೀಳರಿಮೆ ಇಲ್ಲ. ಹೋಂಡಾ ಕಂಪನಿ ನೀಡಿರುವ ಆಡಿಟೋರಿಯಂ, ಮಹೀಂದ್ರ ಕಂಪನಿ ನೀಡಿರುವ ಶೌಚಾಲಯ, ಮತ್ತಿತರ ಸೌಲಭ್ಯಗಳಿಗೆ ಧನ್ಯವಾದ ಸಲ್ಲಿಸಿದರು.

ಉತ್ತಮ ಸಹಕಾರ: ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪಂಡಿತ್‌ ಮುನಿವೆಂಕಟಪ್ಪ, ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕರು, ಸಚಿವರಿಗೂ ಮನವಿ ಮಾಡಿದ್ದೇವೆ ಎಂದರು.

ಪ್ರೊ.ಅಶ್ವತ್ಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜು ನಾಲ್ಕೈದು ವರ್ಷಗಳಿಂದ ಸತತ ಪದವಿಯಲ್ಲಿ ರ್‍ಯಾಂಕ್‌ ಪಡೆಯುತ್ತಿದೆ. ಹಲವು ವಿದ್ಯಾರ್ಥಿಗಳು ಚಿನ್ನದ ಪದಕಕ್ಕೂ ಭಾಜನರಾಗಿದ್ದಾರೆ ಎಂದರು. ಕ್ರೀಡೆ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಸಾಧನೆ ಮಾಡಿದವರಿಗೆ ಬಹುಮಾನ ವಿತರಿಸಲಾಯಿತು. ಹೇಮಮಾಲಿನಿ ನಿರೂಪಿಸಿ, ಶ್ರೀವಿದ್ಯಾ, ಜೀವಿತಾ ಪ್ರಾರ್ಥಿಸಿ, ಬೃಂದಾ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಅಶೋಕ್‌, ವಿಜಯಕುಮಾರ್‌, ಸೀನಾನಾಯಕ್‌, ರವೀಂದ್ರ, ಶಿವಪ್ಪ, ಅಮರನಾರಾಯಣ, ಸುನೀಲ್, ಸೀನಪ್ಪ, ಮಂಜುನಾಥ್‌ ಉಪಸ್ಥಿತರಿದ್ದು, ಎನ್‌.ಎಲ್.ವಿಜಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next