ಭಟ್ಕಳ: ಕೋವಿಡ್ 19 ಬಂದಾಗಿನಿಂದ ಒಂದಿಲ್ಲೊಂದು ವಿಷಯದಲ್ಲಿ ಪಟ್ಟಣ ಸುದ್ದಿಯಾಗುತ್ತಲೇ ಇದೆ. ಇಲ್ಲಿನ ಮದೀನಾ ಕಾಲೋನಿಯ ಮೇಕರ್ಸ್ ಹಬ್ ವಿದ್ಯಾರ್ಥಿಗಳ ಸಂಘ ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರಿಗೆ ನೆರವಾಗಬಲ್ಲ ಫೇಸ್ ಶೀಲ್ಡ್ (ಮಾಸ್ಕ್ಗೆ ಪರ್ಯಾಯ) ತಯಾರಿಸುವ ಮೂಲಕ ಗಮನ ಸೆಳೆದಿದೆ.
ಕೋವಿಡ್ 19 ವೈರಸ್ ತಡೆಯಲು ಕೇವಲ ಮಾಸ್ಕ್ ಹಾಕಿಕೊಂಡರೆ ನೂರಕ್ಕೆ ನೂರು ಅಪಾಯದಿಂದ ಪಾರಾಗಲು ಸಾಧ್ಯವಿಲ್ಲ. ಇದಕ್ಕೆಂದೇ ಫೇಸ್ ಶೀಲ್ಡ್ ಬೇಕು ಎನ್ನುವುದನ್ನು ಅರಿತು ಪ್ರಾಥಮಿಕ ಹಂತದಲ್ಲಿ ನೂರು ಫೇಸ್ ಶೀಲ್ಡ್ ತಯಾರಿಸಲು ಸಂಘ ಮುಂದಾಗಿದೆ. ಸದ್ಯ ಮೇಕರ್ಸ್ ಹಬ್‌ನವರು ಇದನ್ನು ಕೈಯಿಂದಲೇ ತಯಾರಿಸುತ್ತಿದ್ದಾರೆ. ಕೋವಿಡ್-19ರ ವೈದ್ಯಕೀಯ ನೋಡಲ್ ಅಧಿಕಾರಿ ಡಾ| ಶರದ್ ನಾಯಕ ಕೂಡಾ ಇದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾಗಿ ತಿಳಿದು ಬಂದಿದೆ.
2017ರಲ್ಲಿ ಸ್ಥಾಪನೆ: ಸ್ಥಳೀಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಸಮಾನ ಮನಸ್ಕರು ಸೇರಿ 2017ರಲ್ಲಿ ಮದೀನಾ ಕಾಲೋನಿಯ ಕುತುಬ್ ಮಹಲ್‌ನಲ್ಲಿ ಮೇಕರ್ಸ ಹಬ್ ಅನ್ನು ಹುಟ್ಟು ಹಾಕಿದ್ದರು. ಕೋವಿಡ್ 19 ವೈರಸ್ ವಿರುದ್ಧದ ತೀವ್ರ ಹೋರಾಟದ ಸಂದರ್ಭದಲ್ಲಿ ಅತೀ ಅಗತ್ಯವಾದ ಫೇಸ್ ಶೀಲ್ಡ್ ಸಿದ್ಧಪಡಿಸುವ ಬಗ್ಗೆ ಸದಸ್ಯರು ಚರ್ಚೆ ನಡೆಸಿದ್ದಲ್ಲದೇ ಉತ್ಪಾದನೆಯನ್ನೂ ಮಾಡಿ ಗಮನ ಸೆಳೆದಿದ್ದಾರೆ. ಪ್ರಥಮ ಹಂತದಲ್ಲಿ ಯಶಸ್ಸನ್ನು ಸಾಧಿಸಿ, ಮುಂದಿನ ದಿನಗಳಲ್ಲಿ ಇದನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಲು ಸಂಘ ಸಿದ್ಧತೆ ನಡೆಸಿದೆ.
ಮುಂದಿನ ದಿನಗಳಲ್ಲಿ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಯೋಜನೆಯನ್ನು ಸಿದ್ಧಗೊಳಿಸಿ ಅವರಿಗೆ ಮಾರ್ಗದರ್ಶನ ನೀಡುವುದು ಸೇರಿದಂತೆ ಯುವ ಪೀಳಿಗೆಗೆ ಆಸಕ್ತಿಯನ್ನು ಬೆಳೆಸಲು ಕಾರ್ಯಾಗಾರ ಆಯೋಜಿಸುವುದು, ಎಲ್ಲಾ ರೀತಿಯ ತಾಂತ್ರಿಕ ಪರಿಕರಗಳು, ಯಂತ್ರೋಪ ಕರಣಗಳು, ಸಾಫ್ಟ್‌ವೇರ್‌ಗಳು, ತಾಂತ್ರಿಕ ಬೆಂಬಲ ಮತ್ತು ಮಾರ್ಗದರ್ಶನ ಒಂದೇ ಸೂರಿನಡಿ ಒದಗಿಸುವುದು ಹಬ್‌ನ ಪ್ರಮುಖ ಉದ್ದೇಶವಾಗಿದೆ.
ಮೂಗು ಮತ್ತು ಬಾಯಿ ರಕ್ಷಣೆ ಮಾತ್ರ ಸಾಧ್ಯ. ಕಣ್ಣುಗಳ ರಕ್ಷಣೆ ಅಸಾಧ್ಯ. ನಾವು ಸಿದ್ಧಗೊಳಿಸಿದ ಫೇಸ್ ಶೀಲ್ಡ್ ಧರಿಸುವುದರಿಂದ ಸಂಪೂರ್ಣ ಮುಖಕ್ಕೆ ರಕ್ಷಣೆ ದೊರೆಯುತ್ತದೆ. ಕಣ್ಣುಗಳಿಗೆ ಸೋಂಕು ಹರಡುವುದನ್ನು ತಡೆಯಬಹುದು. ಕರ್ತವ್ಯ ನಿರತ ಪೊಲೀಸ್ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಇದು ಅತ್ಯಂತ ಉಪಯುಕ್ತವಾಗಿದೆ. –
ಸುಹೈಲ್ ದಾಮೋದಿ, ಮೇಕರ್ಸ್ ಹಬ್‌ನ ಸದಸ್ಯ