ಚಿತ್ರದುರ್ಗ: ಕೋವಿಡ್ ಲಾಕ್‌ಡೌನ್ ಕಾರಣಕ್ಕೆ ಬಾಕಿ ಉಳಿದಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆ ಜೂ.18ಕ್ಕೆ ನಿಗದಿಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪಪೂ ಶಿಕ್ಷಣ ಇಲಾಖೆ ಭರದ ತಯಾರಿ ನಡೆಸುತ್ತಿವೆ.
ಈ ಸಂಬಂಧ ಈಗಾಗಲೇ ಇಲಾಖಾ ಮಟ್ಟದಲ್ಲಿ ಹಾಗೂ ಜಿಲ್ಲಾಡಳಿತದ ಸಭೆ ನಡೆದಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಅಗತ್ಯ ಸಾರಿಗೆ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಇದಕ್ಕಾಗಿ ಹೆಲ್ಪ್ಲೈನ್ ತೆರೆಯಲಾಗಿದೆ. ಈ ಹಿಂದೆ ನಡೆದ ಪರೀಕ್ಷೆಗಳಿಗೆ 14 ಪರೀಕ್ಷಾ ಬ್ಲಾಕ್‌ಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಈಗ ಕೋವಿಡ್ ಸೋಂಕಿನ ಆತಂಕ ಹಾಗೂ ಹೊರಗಿನ ವಿದ್ಯಾರ್ಥಿಗಳು ಜಿಲ್ಲೆಯಲ್ಲೇ ಪರೀಕ್ಷೆ ಬರೆಯುವುದರಿಂದ 8 ಬ್ಲಾಕ್ ಹೆಚ್ಚಾಗಿದೆ. ಒಟ್ಟು 20 ಬ್ಲಾಕ್ ಗಳ 682 ಪರೀಕ್ಷಾ ಕೊಠಡಿಗಳಲ್ಲಿ 15,339 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಚಿತ್ರದುರ್ಗ ಮೂಲದ ವಿದ್ಯಾರ್ಥಿಗಳು ದಕ್ಷಿಣಕನ್ನಡ, ದಾವಣಗೆರೆ, ಬೆಂಗಳೂರು, ಮೈಸೂರು ಮತ್ತಿತರೆಡೆ ಅಧ್ಯಯನ ಮಾಡುತ್ತಿರುವ ಮಕ್ಕಳು ಜಿಲ್ಲೆಯಲ್ಲೇ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದು, ಈ ಸಂಖ್ಯೆ 820ಕ್ಕೆ ಮುಟ್ಟಿದೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಊರು, ಮನೆಯ ಹತ್ತಿರದ ಪರೀಕ್ಷಾ ಕೇಂದ್ರಗಳಲ್ಲೇ ಅವಕಾಶ ಕಲ್ಪಿಸಿದ್ದು, ಪ್ರಶ್ನೆ ಹಾಗೂ ಉತ್ತರ ಪತ್ರಿಕೆಗಳನ್ನು ಒದಗಿಸುವಂತೆ ಪಿಯು ಮಂಡಳಿಗೆ ಜಿಲ್ಲೆಯಿಂದ ಮನವಿ ಮಾಡಲಾಗಿದೆ.
ಒಂದು ಕೊಠಡಿಗೆ 24 ವಿದ್ಯಾರ್ಥಿಗಳು: ಕೋವಿಡ್ ಸೋಂಕು ಭೀತಿಯ ನಡುವೆಯೂ ಪರೀಕ್ಷೆ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತಯಾರಿ ನಡೆಸಲಾಗುತ್ತಿದೆ. ಈ ಹಿಂದೆ ಒಂದು ಕೊಠಡಿಯಲ್ಲಿ 30 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಆದರೆ ಈಗ ಒಂದು ಕೊಠಡಿಗೆ 24 ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಲಾಗುತ್ತದೆ. ಪ್ರತಿ ಡೆಸ್ಕ್ ನಡುವೆ 3 ಅಡಿ ಅಂತರ ಇಟ್ಟುಕೊಂಡು ವ್ಯವಸ್ಥೆ ಮಾಡಲಾಗಿದೆ. ರೋಗ ಲಕ್ಷಣ ಕಂಡು ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿಟ್ಟು ಪರೀಕ್ಷೆ ಬರೆಸಲು ಹೆಚ್ಚುವರಿಯಾಗಿ ಒಂದು ಕೊಠಡಿ ಇಟ್ಟುಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ತಯಾರಿ ನಡೆದಿದೆ.
ಹೊರ ಜಿಲ್ಲೆಗಳಲ್ಲಿ ಅಧ್ಯಯನ ಮಾಡುವ ಚಿತ್ರದುರ್ಗ ಮೂಲದ ವಿದ್ಯಾರ್ಥಿಗಳ ಮೊಬೈಲ್‌ಗೆ ಪಿಯು ಮಂಡಳಿಯಿಂದ ಈಗಾಗಲೇ ಪರೀಕ್ಷಾ ಕೇಂದ್ರದ ವಿವರವುಳ್ಳ ಮೆಸೇಜ್ ಹೋಗಿದೆ. ಹಳೆಯ ಹಾಲ್ ಟಿಕೆಟ್ ತಂದರೂ ಪ್ರವೇಶ ಕಲ್ಪಿಸುತ್ತೇವೆ ಅಥವಾ ಆನ್‌ಲೈನ್‌ನಲ್ಲಿ ಹೊಸದಾಗಿಯೂ ಪ್ರಿಂಟ್ ತೆಗೆದುಕೊಳ್ಳಬಹುದು. ಈಗಾಗಲೇ ಬಸ್‌ಗಳು ಓಡಾಡುತ್ತಿರುವ ಮಾರ್ಗಗಳಲ್ಲಿ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿದರೆ ಉಚಿತವಾಗಿ ಪ್ರಯಾಣಿಸಬಹುದು.
-ಎಂ.ಸಿ. ಶೋಭಾ, ಪಿಯು ಡಿಡಿ, ಚಿತ್ರದುರ್ಗ