ನಾನು ಮಾತು ಕಡಿಮೆ. ಕೆಲಸ ಜಾಸ್ತಿ ಮಾಡ್ತೀನಿ …ಮೈಕು ಕೈಗೆ ಸಿಗುತ್ತಿದ್ದಂತೆಯೇ, ಏನು ಮಾತನಾಡಬೇಕೆಂದು ಯೋಚಿಸಿದ ಸಂದೀಪ್, ಕೊನೆಗೆ ಮೇಲೆ ಹೇಳಿದ ಸಾಲು ಹೇಳಿದರು. ಸಭಾಂಗಣದಲ್ಲಿದವರೆಲ್ಲಾ ಚಪ್ಪಾಳೆ ಹೊಡೆದರು. ಆ ನಂತರ ಮತ್ತೆ ಮೌನ. ಮಾತುಗಳಿಗೆ ಮತ್ತೆ ತಡಕಾಡಿದ ಸಂದೀಪ್, “ನಾನು ಉಪ್ಪಿ ಸಾರ್ ಜೊತೆಗೆ ಐದು ವರ್ಷ ಕೆಲಸ ಮಾಡಿದ್ದೆ. ಕಥೆ ಮಾಡಿಕೊಂಡು ನಿರ್ಮಾಪಕರನ್ನು ಹುಡುಕುತ್ತಿದ್ದೆ. ಆದರೆ, ನಾನು ಚಿತ್ರ ಮಾಡಬಹುದು ಎಂದು ಯಾರೂ ನಂಬಲಿಲ್ಲ. ಕೊನೆಗೆ ನಾವೇ ಮಾಡೋಣ ಅಂತ ಒಂದು ಲೋ ಬಜೆಟ್ ಚಿತ್ರ ಪ್ಲಾನ್ ಮಾಡಿದೆವು. ಕೊನೆಗೆ ಅದು ಡಬ್ಬಲ್ ಆಯಿತು’ ಎಂದರು.
ಕಳೆದ ವರ್ಷ “ಫೇಸ್ 2 ಫೇಸ್’ ಎಂಬ ಚಿತ್ರ ಶುರು ಮಾಡಿದ್ದ ಸಂದೀಪ್ ಜನಾರ್ಧನ್, ಇದೀಗ ಆ ಚಿತ್ರವನ್ನು ಮುಗಿಸಿದ್ದಾರೆ. ಮುಂದಿನ ತಿಂಗಳು ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ಅವರು ತೀರ್ಮಾನಿಸಿದ್ದು, ಅದಕ್ಕೂ ಮುನ್ನ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. “ಏಕ್ ಖ್ವಾಬ್’ ಎಂಬ ಮುಂಬೈನ ತಂಡವೊಂದು ಹಾಡುಗಳನ್ನು ಸಂಯೋಜಿಸಿದ್ದು, ಕಳೆದ ವಾರ ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಟ್ಟಡದಲ್ಲಿ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಹಾಡುಗಳನ್ನು ಬಿಡುಗಡೆ ಮಾಡಿದ್ದು ಹಿರಿಯ ನಟ ಶಿವರಾಮಣ್ಣ.
“ಫೇಸ್ 2 ಫೇಸ್’ ಚಿತ್ರದಲ್ಲಿ ರೋಹಿತ್ ಭಾನುಪ್ರಕಾಶ್ ನಾಯಕನಾಗಿ ಕಾಣಿಸಿಕೊಂಡರೆ, ಪೂರ್ವಿ ಜೋಷಿ ಮತ್ತು ದಿವ್ಯ ಉರುಡುಗ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರವಿ ಭಟ್, ವೀಣಾ ಸುಂದರ್, ಸುಚೀಂದ್ರ ಪ್ರಸಾದ್, ಯಮುನಾ ಶ್ರೀನಿಧಿ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟಕ್ಕೂ ಈ ಚಿತ್ರದ ಕಥೆ ಏನು ಅಥವಾ ಎಳೆ ಏನು ಎಂದು ನಿರ್ದೇಶಕರು ಹೇಳಲಿಲ್ಲ. ತುಂಬಾ ನರ್ವಸ್ ಆಗಿರುವುದಾಗಿಯೂ, ಸಿನಿಮಾದಲ್ಲೇ ನೋಡಬೇಕೆಂದು ಅವರು ಹೇಳಿದರು.
ಕೊನೆಗೆ ಚಿತ್ರದ ತಿರುಳೇನಿರಬಹುದು ಎಂದು ಹೇಳಿದ್ದು ಸಂಕಲನಕಾರ ಶ್ರೀ. “ಚಿತ್ರದ ಟೈಟಲ್ ನೋಡಿದರೆ ಇದೇನು ಮುಖಾಮುಖೀನಾ? ಮುಖವಾಡನಾ? ಅಥವಾ ಸ್ಪ್ಲಿಟ್ ಪರ್ಸನಾಲಿಟಿಯಾ? ಎಂದನಿಸಬಹುದು. ಅದೇ ಚಿತ್ರದ ಸಸ್ಪೆನ್ಸ್. ಸಂದೀಪ್ ಮಾತು ಕಡಿಮೆಯಾದರೂ, ಅವರಿಗೆ ಕ್ಲಾರಿಟಿ ಇದೆ. ತಮಗೇನು ಬೇಕು ಎನ್ನುವುದು ಗೊತ್ತಿದೆ. ಅವರೊಬ್ಬ ಹಠವಾದಿ. ತಮಗೆ ಬೇಕಾಗಿದ್ದು ಬರುವವರೆಗೂ ಬಿಡುವುದಿಲ್ಲ’ ಎಂದು ಹೇಳಿದರು.
ನಾಯಕ ರೋಹಿತ್, ಈ ಚಿತ್ರದಲ್ಲಿ ಉದಯೋನ್ಮುಖ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಿಜಜೀವನದ ಪಾತ್ರವನ್ನೇ ಈ ಚಿತ್ರದಲ್ಲೂ ನಿರ್ವಹಿಸುತ್ತಿರುವುದಾಗಿ ಅವರು ಹೇಳಿದರು. ಇನ್ನು ದಿವ್ಯ ಉರುಡುಗ ಮತ್ತು ಪೂರ್ವಿ ಜೋಷಿಗೆ ನಿರ್ದೇಶಕರು ಕಥೆ ಹೇಳಿದಾಗ, ಏನೂ ಅರ್ಥವಾಗಲಿಲ್ಲವಂತೆ. ಮತ್ತೆ ಮತ್ತೆ ಕೇಳಿದಾಗ ಇಷ್ಟವಾಗಿ, ನಟಿಸಲು ಒಪ್ಪಿಕೊಂಡರಂತೆ. ಛಾಯಾಗ್ರಾಹಕ ವಿಶ್ವಜಿತ್ ರಾವ್, ನಿರ್ಮಾಪಕಿ ಸುಮಿತ್ರ, ಯಮುನಾ ಶ್ರೀನಿಧಿ, ರವಿ ಭಟ್ ಮುಂತಾದವರು ಈ ಸಮಾರಂಭದಲ್ಲಿ ಹಾಜರಿದ್ದರು.