ಬೆಳಗಾವಿ: ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ಪುಸಲಾಯಿಸಿ ಬಾಡಿಗೆ ಮನೆಯಲ್ಲಿ ಗಂಡ-ಹೆಂಡತಿ ಎಂದು ಹೇಳಿ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಜಿಲ್ಲಾ ಪೋಕ್ಸೋ ನ್ಯಾಯಾಲಯ ಗುರುವಾರ ಮಹತ್ವದ ತೀರ್ಪು ನೀಡಿದೆ.
ಚಿಕ್ಕೋಡಿ ತಾಲೂಕಿನ ಕುರ್ಲಿ ಗ್ರಾಮದ ಶ್ರೀಸಂಗಮ ಕೃಷ್ಣಾತ್ ನಿಕಾಡೆ(24) ಎಂಬ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ-1 ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ತೀರ್ಪು ನೀಡಿದ್ದಾರೆ.
14 ಜುಲೈ 2016ರಂದು ಆರೋಪಿ ಶ್ರೀಸಂಗಮ ನಿಕಾಡೆ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ಪುಸಲಾಯಿಸಿ ಅಪಹರಣ ಮಾಡಿಕೊಂಡು ಕೊಲ್ಲಾಪುರಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಪುಣೆಗೆ ಒಯ್ದು ಬಳಿಕ ಕೊಲ್ಲಾಪುರ ತಾಲೂಕಿನ ಆಡೂರ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಾರೆ. ಗಂಡ-ಹೆಂಡತಿ ಎಂದು ಹೇಳಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ನಿಪ್ಪಾಣಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖಾಧಿಕಾರಿ ಅಶೋಕ ಭರಣಿ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ವಿಚಾರಣೆ ನಡೆಸಿ 15 ಸಾಕ್ಷಿ, 35 ದಾಖಲೆಗಳು ಹಾಗೂ 10 ಮುದ್ದೆಮಾಲುಗಳ ಆಧಾರದ ಮೇಲಿಂದ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಒಂದು ಲಕ್ಷ ರೂ. ಪರಿಹಾರ ಧನವನ್ನು ಪಡೆಯಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದಾರೆ.