Advertisement

ಕಣ್ಣು ಕಣ್ಣು ಕಲೆತಾಗ…!

11:20 AM Oct 30, 2017 | |

ಕಬ್ಬು ಸಸಿ ನಾಟಿ ಪದ್ದತಿಯನ್ನು ಎಲ್ಲರೂ ಅನುಸರಿಸುವುದು ಬಹಳ ಅತ್ಯವಶ್ಯ. ಇದರಿಂದ ಲಾಭ ಇದೆ. ಅದು ಹೇಗೆ ಅನ್ನೋದಕ್ಕೆ ಇಲ್ಲಿದೆ ಮಾಹಿತಿ.  

Advertisement

10 ತಿಂಗಳ ಕಬ್ಬನ್ನು ಕಟಾವು ಮಾಡಿ ಕಬ್ಬಿನ ಗಿಡದಲ್ಲಿನ ಗಣಿಕೆಗಳ ಮಧ್ಯದ ಕಣ್ಣನ್ನು ಮಾತ್ರ ವ್ಯವಸ್ಥಿತವಾಗಿ ತೆಗೆದುಕೊಳ್ಳುವುದು. ನಂತರ ಸಣ್ಣ ಸಣ್ಣ ಟ್ರೇನಲ್ಲಿ ಕಬ್ಬಿನಿಂದ ತೆಗೆದ ಕಣ್ಣುಗಳನ್ನು ಕೋಕೋಫಿಟ್‌ನೊಂದಿಗೆ ನಾಟಿ ಮಾಡಿದರೆ ಕೆಲವು ದಿನಗಳ ನಂತರ ಆ ಕಬ್ಬಿನ ಕಣ್ಣುಗಳು ಸಸಿಯಾಗಿ ಚಿಗುರೊಡೆಯುತ್ತವೆ. ಹೀಗೆ ಚಿಗುರೊಡೆದ ಕಬ್ಬಿನ ಸಸಿಗಳನ್ನು  ಅಂದಾಜು 30 ರಿಂದ 45 ದಿನಗಳ ಕಾಲ ಟ್ರೇನಲ್ಲಿಯೇ ವ್ಯವಸ್ಥಿತವಾಗಿ ಬೆಳೆಸಿ ನಂತರ ಈ ಸಸಿಗಳನ್ನು ಜಮೀನಿನಲ್ಲಿ ನಾಟಿ ಮಾಡುವುದನ್ನೇ ಕಬ್ಬು ಸಸಿ ನಾಟಿ ಪದ್ಧತಿ ಎನ್ನುತ್ತಾರೆ. ಈ ಪದ್ಧತಿಯಲ್ಲಿ ಪ್ರತಿ ಹೆಕ್ಟೇರ್‌ಗೆ ಕೇವಲ 8 ಕ್ವಿಂಟಲ್‌ ಕಬ್ಬಿನ ಕಣ್ಣುಗಳು ಮಾತ್ರ ಸಾಕು.

 ಪ್ರತಿಯೊಂದು ಕಬ್ಬಿನಲ್ಲಿ ಅಂದಾಜು 15 ಕಣ್ಣುಗಳಿರುತ್ತವೆ. ಅಂದರೆ ಒಂದು ಟನ್‌ ಕಬ್ಬಿನ ಬೆಳೆಯಲ್ಲಿ 9990 ಕಣ್ಣುಗಳಿರುತ್ತವೆ. ಈ ಕಣ್ಣುಗಳಲ್ಲಿ ಕನಿಷ್ಟ 9500 ಕಣ್ಣುಗಳು ಸಸಿ ಮಾಡಲು ಯೋಗ್ಯವಾಗಿರುತ್ತವೆ.

ಈ ಪದ್ದತಿಯಿಂದಾಗುವ  ಮಹತ್ವದ ಉಳಿತಾಯವೇನೆಂದರೆ ಸಸಿ ತಯಾರಿಕೆಗೆ ಸಂಪೂರ್ಣವಾಗಿ ಒಂದು ಟನ್‌ ಕಬ್ಬು ಬೇಕಾಗುವುದಿಲ್ಲ.  ಒಂದು ಟನ್‌ ಕಬ್ಬಿನಲ್ಲಿನ ಕೇವಲ 03 ಕ್ವಿಂಟಲ್‌ ಕಬ್ಬಿನ ಕಣ್ಣುಗಳು ಮಾತ್ರ ಸಸಿ ತಯಾರಿಕೆಗೆ ಸಾಕಾಗುತ್ತವೆ. ಇನ್ನು 07 ಕ್ವಿಂಟಲ್‌ ಕಣ್ಣುರಹಿತ ಕಬ್ಬು ಉಳಿಯುತ್ತದೆ. ಈ ಕಣ್ಣುರಹಿತ 7 ಕ್ವಿಂಟಲ್‌ ಕಬ್ಬನ್ನು ಕನಿಷ್ಠ ರೂ.2000/- ಬೆಲೆಗೆ ಆಲೆಮನೆಗೆ ಅಥವಾ ಪಶು ಆಹಾರಕ್ಕೆ ಮಾರಾಟ ಮಾಡಬಹುದಾಗಿದೆ. ಇದನ್ನು ಗಮನಿಸಿದಲ್ಲಿ ಒಂದು ಸಸಿಗೆ ಕೇವಲ ರೂ.0.50/-ಪೈಸೆ ಖರ್ಚಾಗುತ್ತದೆ. ಒಂದು ಟ್ರೇನಲ್ಲಿ 72 ಸಸಿಗಳಿರುತ್ತವೆ. ಅಂದರೆ ಒಂದು ಟ್ರೇನ ಖರ್ಚು ಕೇವಲ ರೂ.36  ಆಗುತ್ತದೆ.         

  ಈ ಕಣ್ಣುರಹಿತ ಕಬ್ಬಿನಲ್ಲಿ ಗುಕೋಸ್‌ ಪ್ರಮಾಣ ಹೆಚ್ಚಿಗೆ ಇರುವುದರಿಂದ ಇದು ಪಶುಗಳಿಗೆ ಒಳ್ಳೆಯ ಆಹಾರವಾಗಿದೆ.
 ಈ ಕಣ್ಣುರಹಿತ ಕಬ್ಬನ್ನು ಪಶು ಆಹಾರವಾಗಿ ಉಪಯೋಗಿಸಿ ಕೃಷಿಗೆ ಪೂರಕವಾದ ಪಶು ಸಂಪತ್ತನ್ನೂ ಸಹ ಉಳಿಸಬಹುದಾಗಿದೆ. ಅದರಂತೆ ರೈತರು ಪಶು ಆಹಾರಕ್ಕಾಗಿ ಉಪಯೋಗಿಸುವ ಭೂಮಿಯನ್ನು ಇನ್ನಿತರ ಲಾಭದಾಯಕ ಬೆಳೆ ತೆಗೆಯಲು ಬಳಸುವುದೂ ಸಾಧ್ಯವಾಗುತ್ತದೆ.                                                                                                                                      

Advertisement

ನಾಟಿ ಹೇಗೆ?
ಕಬ್ಬಿನ ಸಸಿ ತಯಾರಿಸುವ ಟ್ರೇನಲ್ಲಿ ಕೋಕೋಫಿಟ್‌ನ್ನು (ತೆಂಗಿನ ಮರದ ಯಾವುದೇ ಒಣಗಿದ ತ್ಯಾಜ್ಯ ವಸ್ತುವನ್ನು ಯಂತ್ರದ ಸಹಾಯದಿಂದ ಪುಡಿ ಮಾಡಿದ ವಸ್ತು) ಮಾತ್ರ ತುಂಬಬೇಕು. ಇದು ನೀರನ್ನು ಹಿಡಿದಿಟ್ಟುಕೊಳ್ಳುವ ಗುಣ ಹೊಂದಿದೆ. ಟ್ರೇನಲ್ಲಿ ಸಡಿಲಾಗಿ ಇರುವುದರಿಂದ ಕಬ್ಬಿನ ಕಣ್ಣಿಗೆ ಬೇಗನೆ ಮೊಳಕೆಯೊಡೆಯುವ ಸಾಮರ್ಥ್ಯ ಬರುವುದರೊಂದಿಗೆ ಸಡಿಲವಿರುವ ಸ್ಥಳದ ತುಂಬೆಲ್ಲ ಸಸಿಯು ಬೇರು ಬಿಡಲು ಅನುಕೂಲವಾಗುತ್ತದೆ. ದಿನಕಳೆದಂತೆ ಈ ಕೋಕೋಫಿಟ್‌ ನೀರಿನೊಂದಿಗೆ ಬೆರೆತು ಕಳೆತು ಗೊಬ್ಬರವಾಗುತ್ತ ಬೆಳೆಯುವ ಸಸಿಗೆ ಆಹಾರವಾಗುತ್ತದೆ. 

ಒಂದು ವೇಳೆ ಈ ಟ್ರೇನಲ್ಲಿ ಸಸಿ ತಯಾರಿಸಲು ಕೋಕೋಫಿಟ್‌ ಬದಲಾಗಿ ಮಣ್ಣನ್ನು ಉಪಯೋಗಿಸಿದರೆ ಕೆಲವೇ ಗಂಟೆಗಳಲ್ಲಿ ಆ ಮಣ್ಣು ಗಟ್ಟಿ(ಘನ)ಯಾಗಿ ನೀರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಈ ಸಣ್ಣ ಸಣ್ಣ ರಂಧ್ರಗಳಲ್ಲಿನ ಮಣ್ಣನ್ನು ಕೈಯಿಂದ ಮೇಲಿಂದ ಮೇಲೆ ಸಡಿಲು ಮಾಡಲು ಬರುವುದಿಲ್ಲ. ಆಗ ಅದರಲ್ಲಿರುವ ಎಳೆಯ ಕಬ್ಬಿನ ಕಣ್ಣಿಗೆ ಮೊಳಕೆಯೊಡೆಯಲು ಮತ್ತು ಬೇರು ಬಿಡಲು ಸಾಧ್ಯವಾಗುವುದಿಲ್ಲ. ಇದರಿಂದ ಕಬ್ಬಿನ ಕಣ್ಣಿಗೆ ಸರಿಯಾದ ಆಹಾರ ಪೂರೈಕೆಯಾಗದಿರುವುದರಿಂದ ಸಸಿ ಬೆಳೆಯುವುದಿಲ್ಲ. ಟ್ರೇನಲ್ಲಿ ಕೇವಲ ಕಬ್ಬಿನ ಕಣ್ಣು ಮತ್ತು ಸ್ವಲ್ಪ ಕೋಕೋಫಿಟ್‌ ಹಿಡಿಯುವಷ್ಟು ಮಾತ್ರ. ಅಂದರೆ, ಅಂದಾಜು 72 ಸಣ್ಣ ಸಣ್ಣ ರಂಧ್ರಗಳಿರುತ್ತವೆ. ಆದ್ದರಿಂದ ಕೋಕೋಫಿಟ್‌ ಮಾತ್ರ ಉಪಯೋಗಿಸಬೇಕು. 

ಟ್ರೇನ ರಂದ್ರಗಳಲ್ಲಿ ಕೋಕೋಫಿಟ್‌ ಮತ್ತು ಕಬ್ಬಿನ ಕಣ್ಣುಗಳನ್ನು ಸರಿಯಾಗಿ ತುಂಬಿದ ನಂತರ ಟ್ರೇಗಳನ್ನು ಒಂದರ ಮೇಲೊಂದರಂತೆ 10 ಟ್ರೇಗಳನ್ನು ಇಟ್ಟು ಫಾಲಿಥಿನ್‌ ಹೊದಿಕೆಯಿಂದ ಆ ಸಮಯದಲ್ಲಿನ ವಾತಾವರಣದ ಆದ್ರìತೆಯನ್ನು ಗಮನಿಸಿ  ಕನಿಷ್ಠ 3 ರಿಂದ 5 ದಿನಗಳ ಕಾಲ ಗಾಳಿಯಾಡದಂತೆ ಮುಚ್ಚಿಡಬೇಕು. ಇದರಿಂದ ಶಾಖೋತ್ತನ್ನವಾಗಿ ಕಬ್ಬಿನ ಕಣ್ಣುಗಳು ಬೇಗನೆ ಚಿಗುರೊಡೆಯುತ್ತವೆ. ನಂತರ ಮುಚ್ಚಿದ ಫಾಲಿಥಿನ್‌ ಹೊದಿಕೆಯನ್ನು ಟ್ರೇಗಳಿಂದ ತೆಗೆಯಬೇಕು. ಒಂದರ ಮೇಲೊಂದಿರುವ ಇರುವ ಟ್ರೇಗಳನ್ನು ಮೊಳಕೆಗಳಿಗೆ ತೊಂದರೆಯಾಗದಂತೆ ಸಾವಕಾಶವಾಗಿ ತೆಗೆದು ನೆಲದ ಮೇಲೆ ಇಡಬೇಕು. ನಂತರ ಟ್ರೇಗಳಲ್ಲಿನ ತೇವಾಂಶವನ್ನು ಗಮನಿಸುತ್ತ 30 ರಿಂದ 45 ದಿನಗಳ ಕಾಲ ನೀರನ್ನು ಹಾಕಿ ಆರೋಗ್ಯವಾಗಿ ಬೆಳೆಸಿ ಜಮೀನಿನಲ್ಲಿ ನಾಟಿ ಮಾಡಬೇಕು.   

ಎಚ್ಚರಿಕೆ ಗಳೇನು?
.ರೈತರು ತಮಗೆ ಅವಶ್ಯವಿರುವಷ್ಟು ಕಬ್ಬಿನ ಕಣ್ಣುಗಳನ್ನು ಮೊನಚಾದ ಉಪಕರಣಗಳಿಂದ ವ್ಯವಸ್ಥಿತವಾಗಿ ಬೇರ್ಪಡಿಸಬಹುದು.

.ಕಬ್ಬಿನಿಂದ ಬೇರ್ಪಡಿಸುವಾಗ ಕಣ್ಣುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರವಸುವುದು ಅವಶ್ಯ. ತೊಂದರೆಯಾದ ಕಣ್ಣುಗಳು ಮೊಳಕೆಯೊಡೆಯುವುದಿಲ್ಲ.

.ಕಬ್ಬಿನ ಕಣ್ಣುಗಳನ್ನು ಕೋಕೋಫಿಟ್‌ ನೊಂದಿಗೆ ಟ್ರೇನಲ್ಲಿ ನಾಟಿ ಮಾಡಿದ ತಕ್ಷಣದಿಂದಲೇ ಆಯಾ ದಿನದ ವಾತಾವರಣ ಗಮನಿಸಿ ಪ್ರತಿದಿನ ಕನಿಷ್ಟ ಮೂರರಿಂದ ನಾಲ್ಕು ಬಾರಿ ನೀರು ಹಾಕಬೇಕು. ಒಟ್ಟಾರೆ ಟ್ರೇನಲ್ಲಿ ತೇವಾಂಶ ಕಾಪಾಡಿಕೊಳ್ಳುತ್ತಿರಬೇಕು.

.ಟ್ರೇನಲ್ಲಿ ಕಬ್ಬಿನ ಕಣ್ಣುಗಳು ಮೊಳಕೆಯೊಡೆದ ನಂತರ ಕನಿಷ್ಟ 15 ದಿನಗಳಿಂದ 45 ದಿನಗಳೊಳಗಾಗಿ ಮೊಳಕೆಯೊಡೆದ ಸಸಿಗಳನ್ನು ಟ್ರೇನಿಂದ ಹೊರತೆಗೆದು ಜಮೀನಿನಲ್ಲಿ ನಾಟಿ ಮಾಡಬೇಕು. ಒಂದು ವೇಳೆ 45 ದಿನಗಳ ನಂತರ ಸಸಿಗಳನ್ನು ಟ್ರೇನಿಂದ ಹೊರತೆಗೆದು ಜಮೀನಿನಲ್ಲಿ ನಾಟಿ ಮಾಡದಿದ್ದರೆ ಟ್ರೇನಲ್ಲಿನ ಕೋಕೊಫಿಟ್‌ ನಲ್ಲಿರುವ ಆಹಾರ ಸಸಿಗಳಿಗೆ ಸಾಕಾಗುವುದಿಲ್ಲ.

ಬಸವರಾಜ ಶಿವಪ್ಪಾ ಗಿರಗಾಂವಿ

Advertisement

Udayavani is now on Telegram. Click here to join our channel and stay updated with the latest news.

Next