Advertisement

2024ರ ಟಿ20 ವಿಶ್ವಕಪ್‌ ಆತಿಥ್ಯ ಅಮೆರಿಕಕ್ಕೆ?

01:29 AM Nov 15, 2021 | Team Udayavani |

ಸಿಡ್ನಿ: ಅಮೆರಿಕಕ್ಕೆ ಟಿ20 ವಿಶ್ವಕಪ್‌ ಆತಿಥ್ಯ ಲಭಿಸಲಿದೆಯೇ? 2024ರ ಚುಟುಕು ವಿಶ್ವಕಪ್‌ ದೊಡ್ಡಣ್ಣನ ನಾಡಿನಲ್ಲಿ ನಡೆಯಲಿದೆಯೇ? “ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌’ನ ವರದಿಯೊಂದು ಇಂಥ ಸಾಧ್ಯತೆಯನ್ನು ತೆರೆದಿರಿಸಿದೆ. ಐಸಿಸಿ ಇಂಥದೊಂದು ಯೋಜನೆಯಲ್ಲಿದೆ ಎಂದು ವರದಿ ತಿಳಿಸಿದೆ.

Advertisement

2028ರ ಒಲಿಂಪಿಕ್ಸ್‌ ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿದ್ದು, ಇದರಲ್ಲಿ ಕ್ರಿಕೆಟಿಗೂ ಆದ್ಯತೆ ಲಭಿಸುವಂತೆ ಮಾಡುವುದು ಐಸಿಸಿ ಉದ್ದೇಶ. ಹೀಗಾಗಿ 2024ರ ಟಿ20 ವಿಶ್ವಕಪ್‌ ಪಂದ್ಯಾವಳಿಯ ಆತಿಥ್ಯವನ್ನು ಅಮೆರಿಕಕ್ಕೆ ವಹಿಸುವ ನಿಟ್ಟಿನಲ್ಲಿ ಐಸಿಸಿ ಚಿಂತಿಸುತ್ತಿದೆ. ಜತೆಗೆ ವೆಸ್ಟ್‌ ಇಂಡೀಸ್‌ಗೆ ಸಹ ಆತಿಥ್ಯ ನೀಡುವ ಯೋಜನೆಯೂ ಇದೆ. ಹಾಗೆಯೇ ಐಸಿಸಿ ಕ್ರಿಕೆಟ್‌ ಪಂದ್ಯಾವಳಿಗಳನ್ನು ವಿಶ್ವವ್ಯಾಪಿಗೊಳಿಸುವ ಚಿಂತನೆಯೂ ಇಲ್ಲಿದೆ.

2024ರ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ 20 ತಂಡಗಳನ್ನು ಆಡಿಸುವ ಸಾಧ್ಯತೆ ಇದೆ. ಆಗ ಪಂದ್ಯಗಳ ಸಂಖ್ಯೆ 55ಕ್ಕೆ ಏರಲಿದೆ. ಸದ್ಯ 16 ತಂಡಗಳ ನಡುವೆ 45 ಪಂದ್ಯ ನಡೆಯುತ್ತಿದೆ. 2022ರ ಆಸ್ಟ್ರೇಲಿಯ ಆತಿಥ್ಯದ ವಿಶ್ವಕಪ್‌ನಲ್ಲೂ ತಂಡ ಹಾಗೂ ಪಂದ್ಯಗಳ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳವಿಲ್ಲ.

“2028ರ ಒಲಿಂಪಿಕ್ಸ್‌ ಲಾಸ್‌ ಏಂಜಲೀಸ್‌ನಲ್ಲಿ ಹಾಗೂ 2032ರ ಒಲಿಂಪಿಕ್ಸ್‌ ಬ್ರಿಸ್ಬೇನ್‌ನಲ್ಲಿ ನಡೆಯಲಿದ್ದು, ಇಲ್ಲಿ ಕ್ರಿಕೆಟನ್ನು ಪದಕ ಕ್ರೀಡೆಯಾಗಿ ಸೇರ್ಪಡೆಗೊಳಿಸಲು ಐಸಿಸಿ ಮುಂದಾಗಿದೆ. ಹೀಗಾಗಿ 2024-2031ರ ಅವಧಿಯಲ್ಲಿ ಬಹಳಷ್ಟು ಕ್ರಿಕೆಟ್‌ ಕೂಟಗಳನ್ನು ಆಯೋಜಿಸಲು ಐಸಿಸಿ ನಿರ್ಧರಿಸಿದ್ದು, 2024ರ ಟಿ20 ವಿಶ್ವಕಪ್‌ ಇವುಗಳಲ್ಲಿ ಮೊದಲನೆಯದಾಗಿದೆ’ ಎಂದು “ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌’ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next