ಹುಬ್ಬಳ್ಳಿ: ಪುನೀತ ರಾಜಕುಮಾರ ಅವರ ಕಟ್ಟಾ ಅಭಿಮಾನಿ ರಾಘವೇಂದ್ರ ವದ್ದಿ ಪುನೀತ ರಾಜಕುಮಾರ ಅವರ ಜನ್ಮದಿನ ಹಾಗೂ ಕೊನೆ ಚಿತ್ರ ಜೇಮ್ಸ್ ಚಿತ್ರದ ಪ್ರಯುಕ್ತ ನೂರು ಜನರನ್ನು ಗುರುತಿಸಿ ಅವರ ಕಣ್ಣಿನ ದೃಷ್ಟಿ ಸರಿಪಡಿಸಲು ಶಸ್ತ್ರ ಚಿಕಿತ್ಸೆ ಮಾಡಿಸಿ ಅಪ್ಪು ಅವರ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾನೆ.
ದೃಷ್ಟಿ ಸರಿಯಾದ ನಂತರ ತನ್ನ ಅಪ್ಪುವಿನ ಚಿತ್ರ ನೋಡಬೇಕು ಎನ್ನುವ ಕಾರಣಕ್ಕೆ ಈ ನೂರು ಜನರಿಗಾಗಿ ಟಿಕೆಟ್ ಪಡೆದಿದ್ದಾರೆ. ಚಿತ್ರ ವೀಕ್ಷಿಸಿದ ನಂತರ ಅಪ್ಪು ಹೆಸರಲ್ಲಿ ಒಂದು ಸಸಿ ನೀಡಿ ಮನೆಯ ಮುಂದೆ ಬೆಳೆಸಬೇಕೆನ್ನುವ ಪರಿಸರ ಪ್ರಜ್ಞೆ ಮೂಡಿಸುವ ಕಾರ್ಯ ಹಮ್ಮಿಕೊಂಡಿದ್ದಾರೆ.
ಅಪ್ಪು ಅವರ ಭಾವಚಿತ್ರ ಮನೆಯಲ್ಲಿಟ್ಟು ಅವರ ಮಾರ್ಗದಲ್ಲಿ ನಡೆಯುವಂತೆ ತಿಳಿಸುವ ಕೆಲಸ ಮಾಡಲಿದ್ದಾರೆ. 200 ಟಿಕೆಟ್‌ಗಳನ್ನು ಅವರ ಅಭಿಮಾನಿಗಳಿಗೆ ಉಚಿತವಾಗಿ ಹಂಚಲಿದ್ದಾರೆ. ಅಪ್ಸರಾ ಚಿತ್ರ ಮಂದಿರಕ್ಕೆ ಜೇಮ್ಸ್ ವೀಕ್ಷಿಸಲು ಬರುವ ಪ್ರತಿಯೊಬ್ಬರಿಗೆ ಉಪ್ಪಿಟ್ಟು-ಸಿರಾ ವಿತರಿಸಲಿದ್ದಾರೆ. ಅಪ್ಪು ಅವರಿಗೆ ಚಿಕನ್ ಬಿರಿಯಾನಿ ಇಷ್ಟ ಎನ್ನುವ ಕಾರಣಕ್ಕೆ ಮಧ್ಯಾಹ್ನ ಚಿಕನ್ ಬಿರಿಯಾನಿ ಹಂಚಲಿದ್ದಾರೆ. ಈಗಾಗಲೇ ಸ್ವಂತ ಖರ್ಚಿನಿಂದ ಚಿತ್ರ ಮಂದಿರವನ್ನು ಅಪ್ಪು ಅವರ ಚಿತ್ರ ಇರುವ ಪರಪರಿಗಳಿಂದ ಶೃಂಗರಿಸಿದ್ದಾರೆ. ಇಲ್ಲಿನ ಅಂಚಟಗೇರಿ ನಿವಾಸಿಯಾಗಿರುವ ರಾಘು ಜೀವನಕ್ಕೆ ಸಣ್ಣದೊಂದು ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾರೆ. ಬರುವ ಆದಾಯದಲ್ಲಿ ಒಂದಿಷ್ಟು ದೇವರಿಗೆ ತೆಗೆದಿಡುವ ರೀತಿಯಲ್ಲಿ ಅಪ್ಪು ಅವರ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕ್ಕೆ ಬಳಸುವುದನ್ನು ರೂಢಿಸಿಕೊಂಡಿದ್ದಾರೆ. ಇದೀಗ ಸ್ನೇಹಿತರಿಂದ ಸಾಲ ಮಾಡಿ ಕಡಿಮೆ ಅವಧಿಯಲ್ಲಿ 100 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ ಕಾರ್ಯ ಪೂರ್ಣಗೊಳಿಸಿದ್ದಾರೆ.
ಅಪ್ಪು ಅವರ ಅಭಿಮಾನಕ್ಕಾಗಿ ಜೈ ರಾಜವಂಶ ಎನ್ನುವ ಸಂಸ್ಥೆ ಆರಂಭಿಸಿ ವಿವಿಧ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ಎದೆ ಮೇಲೆ ಅಪ್ಪು ಅವರ ಭಾವಚಿತ್ರ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಯುವರತ್ನ ಚಿತ್ರ ಬಿಡುಗಡೆ ಸಂದರ್ಭದಲ್ಲಿ 50 ವಿಕಲಚೇತನರಿಗೆ ಕೃತಕ ಕಾಲು ನೀಡಿದ್ದರು. ರಾಜಕುಮಾರ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಪುನೀತ ರಾಜಕುಮಾರ ಅವರ ಕಟೌಟ್‌ಗೆ 100 ಲೀಟರ್ ಹಾಲು ಸುರಿದು ಅಭಿಮಾನ ವ್ಯಕ್ತಪಡಿಸಿದ್ದರು. ಇಂತಹ ಕಾರ್ಯಕ್ಕೆ ಪುನೀತ ಅಸಮಾಧಾನ ವ್ಯಕ್ತಪಡಿಸಿ ಹಾಲು ಸುರಿಯುವ ಬದಲು ಯಾರಿಗಾದರೂ ದಾನ ಮಾಡಿ ಎಂದು ಮನವಿ ಮಾಡಿದ್ದರು. ಹುಬ್ಬಳ್ಳಿಗೆ ಬಂದ ಸಂದರ್ಭದಲ್ಲಿ ಅವರ ನಿವಾಸಕ್ಕೆ ಹೋಗಿ ಮನೆಯವರೆಲ್ಲರನ್ನು ಭೇಟಿಯಾಗಿದ್ದರು. ಇಂತಹ ಸರಳತೆಯಿಂದ ಪುನೀತ ಪ್ರತಿಯೊಬ್ಬರ ಮನೆ ಮಗನಾಗಿದ್ದಾರೆ ಎನ್ನುತ್ತಾರೆ ರಾಘು ವದ್ದಿ.
ಅಪ್ಪು ಹಾಗೂ ಅವರ ಕುಟುಂಬದವರು ನೇತ್ರದಾನಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಇಹಲೋಕ ತ್ಯಜಿಸಿದ ನಂತರ ನಾಲ್ವರ ಬದುಕಿಗೆ ಬೆಳಕಾಗಿದ್ದಾರೆ. ಅವರು ತೋರಿಸಿರುವ ಸಾಮಾಜಿಕ ಕಾಳಜಿಯ ಮಾರ್ಗದಲ್ಲಿ ನಡೆಯಬೇಕು ಎನ್ನುವ ಕಾರಣಕ್ಕೆ ದುಡಿಯುವ ಹಣದಲ್ಲಿ ಒಂದಿಷ್ಟನ್ನು ಅವರ ಹೆಸರಲ್ಲಿ ತೆಗೆದಿಟ್ಟು ಈ ಕೆಲಸ ಮಾಡುತ್ತಿದ್ದೇನೆ.
–
ರಾಘು ವದ್ದಿ, ಅಪ್ಪು ಅಭಿಮಾನಿ