Advertisement

ಚೀನ ಗಡಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಅಸ್ತ್ರ!

07:26 AM Feb 19, 2023 | Team Udayavani |

ನವದೆಹಲಿ/ಬೀಜಿಂಗ್‌: ಉತ್ತರ ಮತ್ತು ಈಶಾನ್ಯ ವಲಯಗಳಲ್ಲಿ ಚೀನದ ಸೈನಿಕರ ಚಲನವಲನಗಳು, ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿ ರಸ್ತೆ ಸಂಸ್ಥೆ(ಬಿಆರ್‌ಒ)ಯು ಬಾಹ್ಯಾಕಾಶ ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿದೆ.

Advertisement

ರಸ್ತೆಗಳು, ಸೇತುವೆಗಳು, ಸುರಂಗಗಳು ಸೇರಿದಂತೆ ತನ್ನ ವ್ಯೂಹಾತ್ಮಕ ಆಸ್ತಿಗಳ ಮೇಲೆ ದಿನಪೂರ್ತಿ ಕಣ್ಗಾವಲು ಇಡುವಂಥ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮಹತ್ವದ ನಿರ್ಧಾರವನ್ನು ಬಿಆರ್‌ಒ ಕೈಗೊಂಡಿದೆ. ಅದಕ್ಕೆಂದೇ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಏರೋಶೋ ವೈಮಾನಿಕ ಪ್ರದರ್ಶನದ ವೇಳೆ ಇನ್ನೋವೇಷನ್ಸ್‌ ಫಾರ್‌ ಡಿಫೆನ್ಸ್‌ ಎಕ್ಸಲೆನ್ಸ್‌(ಐಡಿಇಎಕ್ಸ್‌)ನೊಂದಿಗೆ ಬಿಆರ್‌ಒ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.

ಚೀನ ಗಡಿಯಲ್ಲಿನ ಪ್ರಾಜೆಕ್ಟ್ ಗಳ ಮೇಲೆ ನಿಗಾ ಇಡಲು ಬಾಹ್ಯಾಕಾಶ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ನಮ್ಮ ಉದ್ದೇಶ. ನಮ್ಮ 17 ಪ್ರಮುಖ ಯೋಜನೆಗಳ ಪೈಕಿ 12 ಪ್ರಾಜೆಕ್ಟ್ಗಳು ಚೀನಾ ಗಡಿಯಲ್ಲೇ ಇವೆ.

ದೇಶದ ಸಶಸ್ತ್ರ ಪಡೆಗಳ ಯುದ್ಧ ಸನ್ನದ್ಧತೆಯನ್ನು ಖಾತ್ರಿಪಡಿಸಿಕೊಳ್ಳಬೇಕೆಂದರೆ ವ್ಯೂಹಾತ್ಮಕ ಪ್ರದೇಶಗಳಲ್ಲಿ ಸುರಂಗ ಮತ್ತು ಸೇತುವೆಗಳ ನಿರ್ಮಾಣವು ತ್ವರಿತಗತಿಯಲ್ಲಿ ಆಗಬೇಕು. ಇದಕ್ಕೆ ಸಮಕಾಲೀನ ತಂತ್ರಜ್ಞಾನದ ನೆರವೂ ಅತ್ಯಗತ್ಯ ಎಂದು ಬಿಆರ್‌ಒ ಪ್ರಧಾನ ನಿರ್ದೇಶಕ ಲೆ.ಜ.ರಾಜೀವ್‌ ಚೌಧರಿ ಹೇಳಿದ್ದಾರೆ. ಜತೆಗೆ, ಪ್ರಸಕ್ತ ವರ್ಷ ಮೇ ಅಥವಾ ಜೂನ್‌ ವೇಳೆಗೆ ಅರುಣಾಚಲ ಪ್ರದೇಶದಲ್ಲಿ ಸೇಲಾ ಸುರಂಗ ನಿರ್ಮಾಣ ಪೂರ್ಣಗೊಳ್ಳಲಿದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.

ಎಲ್‌ಎಸಿ ಸಮೀಪವೇ ಚೀನದಿಂದ ರೈಲ್ವೆ ಲೈನ್‌!
ಅಚ್ಚರಿಯ ಬೆಳವಣಿಗೆ ಎಂಬಂತೆ, ಎಸ್‌ಎಸಿ ಸಮೀಪದಲ್ಲೇ ಹಾಗೂ ವಿವಾದಿತ ಅಕ್ಸಾಯ್‌ ಚಿನ್‌ ಪ್ರದೇಶವನ್ನು ಹಾದುಹೋಗುವಂತೆ ಹೊಸ ರೈಲ್ವೆ ಲೈನ್‌ ನಿರ್ಮಾಣಕ್ಕೆ ಚೀನ ಮುಂದಾಗಿದೆ.

Advertisement

ಈ ಯೋಜನೆಯಲ್ಲಿ ಹೊಸ ಮಾರ್ಗಗಳನ್ನೂ ಸೇರಿಸಲಾಗಿದ್ದು, ಭಾರತ ಮತ್ತು ನೇಪಾಳದೊಂದಿಗಿನ ಚೀನದ ಗಡಿಯವರೆಗಿನ ಮಾರ್ಗಗಳೂ ಇದರಲ್ಲಿ ಸೇರಿವೆ. ರೈಲು ಮಾರ್ಗವು ಟಿಬೆಟ್‌ನ ಶಿಗಾಟೆÕಯಿಂದ ಆರಂಭವಾಗಿ, ವಾಯವ್ಯದಲ್ಲಿ ನೇಪಾಳ ಗಡಿಯುದ್ದಕ್ಕೂ ಸಂಚರಿಸಿ, ಅಕ್ಸಾಯ್‌ ಚಿನ್‌ ಮೂಲಕ ಸಾಗಿ ಕ್ಸಿನ್‌ಜಿಯಾಂಗ್‌ನ ಹೋಟನ್‌ಗೆ ತಲುಪಲಿದೆ ಎಂದು ರೈಲ್ವೆ ಟೆಕ್ನಾಲಜಿ ವರದಿ ಮಾಡಿದೆ.

ಎಲ್‌ಎಸಿಯಲ್ಲಿ ಚೀನ ಸೇನೆಯ ಚಲನವಲನಗಳು ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ ಎಂದು ಜ.12ರಂದು ಸೇನಾ ಮುಖ್ಯಸ್ಥ ಜ.ಮನೋಜ್‌ ಪಾಂಡೆ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next