Advertisement

ಕಣ್ಣಿನಲ್ಲಿ ತೇಲುಬಿಂಬಗಳು

04:15 PM Feb 06, 2022 | Team Udayavani |

ಹೊರಜಗತ್ತನ್ನು ಕಾಣಿಸುವ ಮೂಲ ನಮ್ಮ ಕಣ್ಣುಗಳು. ಇದರಲ್ಲಿ ಯಾವುದೇ ಅಡಚಣೆ ಉಂಟಾದರೂ ಅದು ನಮ್ಮ ದೈನಂದಿನ ಜೀವನವನ್ನು ಬಾಧಿಸುತ್ತದೆ. ದೃಷ್ಟಿಯಲ್ಲಿ ಉಂಟಾಗುವ ಸಮಸ್ಯೆಗಳಲ್ಲಿ ನಮ್ಮ ಕಣ್ಣುಗಳ ಮುಂದೆ ಸಣ್ಣ ಕಪ್ಪು ಬಿಂದುಗಳು ಅಥವಾ ಗೆರೆಗಳು ಕಾಣಿಸಿಕೊಳ್ಳುವುದು ಕೂಡ ಒಂದು. ಈ ಬಿಂದುಗಳು ಅಥವಾ ಗೆರೆಗಳು, ವಿಶೇಷವಾಗಿ ನಾವು ಕಣ್ಣುಗಳನ್ನು ಅತ್ತ ಇತ್ತ ತಿರುಗಿಸುವಾಗ ಒಂದು ಬದಿಯಿಂದ ಇನ್ನೊಂದು ಬದಿಗೆ ನಿಧಾನವಾಗಿ ತೇಲಿದಂತೆ ಭಾಸವಾಗುತ್ತದೆ. ಇವುಗಳನ್ನು ತೇಲುಬಿಂಬಗಳು ಅಥವಾ “ಫೋಟರ್’ ಎಂದು ಕರೆಯಲಾಗುತ್ತಿದ್ದು, ಇದು ಅಂತರ್ಗತವಾಗಿರುವ ದೃಷ್ಟಿ ಅನಾರೋಗ್ಯದ ಲಕ್ಷಣವಾಗಿರಲೂ ಬಹುದು. ಲಘು ಪ್ರಕರಣಗಳಲ್ಲಿ, ಬಿಳಿಯ ಪರದೆಯ ಎದುರು ಅಥವಾ ಆಕಾಶದತ್ತ ದೃಷ್ಟಿ ಹರಿಸಿದಾಗ ಇದನ್ನು ಗಮನಿಸಬಹುದು. ಆದರೆ ಹೆಚ್ಚು ತೀವ್ರವಾಗಿದ್ದಾಗ ಇದು ದೈನಿಕ ಚಟುವಟಿಕೆಗಳ ಸಂದರ್ಭದಲ್ಲಿ ವ್ಯಕ್ತಿಯ ನೋಟವನ್ನು ಬಾಧಿಸಬಹುದಾಗಿದೆ.

Advertisement

ತೇಲುಬಿಂಬಗಳು ಅಥವಾ ಫ್ಲೋಟರ್ ಅಥವಾ “ಮಸ್ಕೆಯಿ ವೊಲಿಟಾಂಟಿಸ್‌’ ಇದರ ವೈದ್ಯಕೀಯ ಪರಿಭಾಷೆಯ ಪದವಾಗಿದ್ದು, ಅಕ್ಷರಶಃ “ಹಾರುವುದು’ ಎಂಬರ್ಥ ಹೊಂದಿದೆ. ಇದರ ಲಕ್ಷಣಗಳು ಸೊಳ್ಳೆಗಳು ಅಥವಾ ಸಣ್ಣ ನೊಣಗಳು ಕಣ್ಣಮುಂದೆ ಹಾರಿದಂತಹ ಅನುಭವ ನೀಡುತ್ತವಾದ್ದರಿಂದ ಈ ಹೆಸರು, ಈ ತೇಲುವ ಬಿಂಬಗಳನ್ನು ದೃಷ್ಟಿಯಿಂದ ಬದಿಗೆ ಸರಿಸಲು ವ್ಯಕ್ತಿ ವಿಫ‌ಲ ಪ್ರಯತ್ನ ನಡೆಸುತ್ತಾನೆ.

ತೇಲುಬಿಂಬಗಳು ಕಾಣಿಸಿಕೊಳ್ಳುವುದು ವಯಸ್ಸಿಗೆ ಸಂಬಂಧಿಸಿದ ಬದಲಾವಣೆ ಆಗಿರಬಹುದು ಅಥವಾ ಅಂತರ್ಗತವಾಗಿರುವ ಕಣ್ಣಿದ ಅನಾರೋಗ್ಯದ ಲಕ್ಷಣವಾಗಿರಬಹುದು; ಈ ಅನಾರೋಗ್ಯಗಳಲ್ಲಿ ಕೆಲವು ದೃಷ್ಟಿಗೆ ಅಪಾಯಕಾರಿಯೂ ಆಗಿರಬಹುದು.

ಕಣ್ಣಿನೊಳಗೆ ಇರುವ ವಿಟ್ರಿಯಸ್‌ ಹ್ಯೂಮರ್‌ ಎನ್ನುವ ಜೆಲ್‌ ದ್ರವರೂಪಕ್ಕೆ ತಿರುಗುವುದು ವಯಸ್ಸಾಗುವುದಕ್ಕೆ ಸಂಬಂಧಿಸಿದ ಒಂದು ಸಮಸ್ಯೆ. ಸಾಮಾನ್ಯವಾಗಿ ಇದು 40ನೆಯ ವರ್ಷದ ಬಳಿಕ ಸಂಭವಿಸುತ್ತದೆ ಅಥವಾ ತೀವ್ರ ಮೇಯೋಪಿಯಾ ಇದ್ದಾಗ ಅದಕ್ಕಿಂತ ಸಣ್ಣ ವಯಸ್ಸಿನಲ್ಲೂ ಉಂಟಾಗಬಹುದು. ಕಣ್ಣಿನೊಳಗಿರುವ ದ್ರವ ಒಂದು ಬದಿಯಿಂದ ಇನ್ನೊಂದು ಬದಿಗೆ ಸರಿದಾಗ ರೆಟಿನಾದ ಮುಂದೆ ಗೆರೆಗಳು ಅಥವಾ ಬಿಂದುಗಳ ನೆರಳನ್ನು ಉಂಟುಮಾಡಿ ತೇಲು ಬಿಂಬಗಳನ್ನು ಸೃಷ್ಟಿಸಬಹುದು. ವ್ಯಕ್ತಿ ಶುಭ್ರ ಬೆಳಕಿನಲ್ಲಿ ಖಾಲಿ ಗೋಡೆ ಅಥವಾ ಆಕಾಶವನ್ನು ವೀಕ್ಷಿಸಿದಾಗ ಇದನ್ನು ಗಮನಿಸಬಹುದು. ತೇಲುಬಿಂಬಗಳ ಸಂಖ್ಯೆ ಕಡಿಮೆ ಇರುತ್ತದೆ. ರೆಟಿನಾದ ರಕ್ತನಾಳಗಳಲ್ಲಿ ಸಹಜ ರಕ್ತಕಣಗಳ ಚಲನೆಯಿಂದಲೂ ಇದು ಉಂಟಾಗಬಹುದು. ಇಂತಹ ಪ್ರಕರಣಗಳಿಗೆ ಚಿಕಿತ್ಸೆಯ ಅಗತ್ಯ ಇರುವುದಿಲ್ಲ; ನಿಗಾ ವಹಿಸಿದರೆ ಸಾಕು. ಇಂತಹ ಕೆಲವು ಪ್ರಕರಣಗಳಲ್ಲಿ, ಇಂತಹ ತೇಲುಬಿಂಬಗಳು ಕ್ಯಾಟರ್ಯಾಕ್ಟ್ ಉಂಟಾದಾಗ ಅಥವಾ ಅದಕ್ಕೆ ಶಸ್ತ್ರಚಿಕಿತ್ಸೆ ಒದಗಿಸಿದಾಗ ಹೆಚ್ಚಲೂ ಬಹುದು.

ಕಣ್ಣು ಶುಷ್ಕವಾಗುವುದು ಅಥವಾ ಕಂಜಕ್ಟಿವಿಟಿಸ್‌ನಿಂದಾಗಿ ಕಣ್ಣಿನ ಪಾಪೆಯಲ್ಲಿ ಕಸ ಅಥವಾ ಅನ್ಯವಸ್ತು ಸೇರುವುದರಿಂದಲೂ ತೇಲುಬಿಂಬಗಳು ಸೃಷ್ಟಿಯಾಗಬಹುದು. ಆದರೆ ಇಂತಹ ಪ್ರಕರಣಗಳಲ್ಲಿ ತೇಲುಬಿಂಬಗಳ ಲಕ್ಷಣಗಳ ಜತೆಗೆ ಕಣ್ಣಿನಲ್ಲಿ ಕಿರಿಕಿರಿ ಮತ್ತು ಕಣ್ಣು ಮಿಟುಕಿಸಿದಾಗ ಕಣ್ಣಿನ ಪಾಪೆಯೂ ಚಲಿಸುವುದರಿಂದ ತೇಲುಬಿಂಬಗಳ ಚಲನೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ.

Advertisement

ಕೆಲವು ಬಗೆಯ ಸೋಂಕುಗಳು ಅಥವಾ ಆಟೋ ಇಮ್ಯೂನ್‌ ಸ್ಥಿತಿಯಿಂದಾಗಿ ಉರಿಯೂತಕ್ಕೆ ಒಳಗಾದ ರಕ್ತನಾಳಗಳಿಂದ ವಿಟ್ರಿಯಸ್‌ಗೆ ಸ್ರಾವವಾಗುವ ಸ್ಥಿತಿಯನ್ನು ವಿಟ್ರೈಟಿಸ್‌ ಎನ್ನುತ್ತಾರೆ. ಈ ಅಂಗಾಂಶಗಳು ಮತ್ತು ಸ್ರಾವಗಳು ತೇಲುಬಿಂಬಗಳ ಜತೆಗೆ ದೃಷ್ಟಿ ಮಂಜಾಗುವುದಕ್ಕೆ ಕಾರಣವಾಗುತ್ತವೆ. ಅಂತರ್ಗತ ಸೋಂಕಿಗೆ ಆ್ಯಂಟಿಬಯಾಟಿಕ್‌ಗಳ ಮೂಲಕ, ಉರಿಯೂತಕ್ಕೆ ಸ್ಟಿರಾಯ್ಡ ಗಳ ಮೂಲಕ ಚಿಕಿತ್ಸೆ ನೀಡುವುದರಿಂದ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಅಪರೂಪದ ಪ್ರಕರಣಗಳಲ್ಲಿ ಹುಳುಗಳು ಕಣ್ಣಿನ ಒಳಕ್ಕೆ ವಲಸೆ ಬಂದು ಇಂತಹುದೇ ಲಕ್ಷಣಗಳಿಗೆ ಕಾರಣವಾಗಬಹುದು; ಇದಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ.

ಕಣ್ಣಿನ ವಿಟ್ರಿಯಸ್‌ನಲ್ಲಿ ರಕ್ತಸ್ರಾವ ಉಂಟಾಗುವ ಸ್ಥಿತಿಯನ್ನು ವಿಟ್ರಿಯಸ್‌ ಹೆಮರಾಜ್‌ ಎನ್ನುತ್ತಾರೆ. ಕಣ್ಣಿನೊಳಕ್ಕೆ ಬಸಿದ ರಕ್ತದ ಹನಿಗಳು ಮತ್ತು ರಕ್ತಕಣಗಳು ತೇಲುಬಿಂಬಗಳು ಹೆಚ್ಚಲು ಕಾರಣವಾಗಬಹುದು. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ತೀವ್ರಗೊಂಡಂತಹ ಪ್ರಕರಣಗಳಲ್ಲಿ ಇದು ಕಂಡುಬರುತ್ತದೆ. ಇದರಲ್ಲಿ ರೆಟಿನಾದ ರಕ್ತನಾಳಗಳು ಒಳಗೊಂಡಿರುತ್ತವೆ. ಒಂದು ಬಿಂದುವಿನಿಂದ 25ರಿಂದ 30 ಬಿಂದುಗಳು ಉದ್ಭವಗೊಂಡು ಇತರೆಲ್ಲ ಕಡೆ ಹರಡುವಂತೆ ಇದು ಉಂಟಾಗುತ್ತದೆ.

ಪೋಸ್ಟೀರಿಯರ್‌ ವಿಟ್ರಿಯಸ್‌ ಡಿಟ್ಯಾಚ್‌ಮೆಂಟ್‌ ಎಂಬುದು ವಯಸ್ಸಾಗುತ್ತಿದ್ದಂತೆ ವಿಟ್ರಿಯಸ್‌ ಕೋರ್‌ ದ್ರವರೂಪಕ್ಕಿಳಿಯುವುದರಿಂದ ರೆಟಿನಾಕ್ಕೆ ಸಮೀಪವಿರುವ ವಿಟ್ರಿಯಸ್‌ ಜೆಲ್‌ನ ಬಾಹ್ಯಪದರವು ಕುಸಿಯುವುದರಿಂದ ಉಂಟಾಗುವ ಒಂದು ಅನಾರೋಗ್ಯ ಸ್ಥಿತಿ. ಇದರಿಂದಾಗಿ ರೆಟಿನಾ ಬಿಗಿಯಾಗಿ ಬಂಧಿತವಾಗಿರುವ ಕೆಲವು ಸ್ಥಳಗಳಲ್ಲಿ ಬಿಗಿತ ಉಂಟಾಗಿ ರೆಟಿನಾ ಹರಿಯಬಹುದು, ಅಪರೂಪಕ್ಕೆ ರಕ್ತನಾಳವೂ ಒಳಗೊಂಡಿದ್ದರೆ ರೆಟಿನಾದಲ್ಲಿ ರಕ್ತಸ್ರಾವ ಉಂಟಾಗಬಹುದು. ರೆಟಿನಾ ಹರಿಯದೆ ಇದ್ದಲ್ಲಿ ಈ ಸ್ಥಿತಿಯ ಬಗ್ಗೆ ನಿಗಾ ಇರಿಸಬಹುದು. ಪೂರ್ಣವಾಗಿ ಪೊಸ್ಟೀರಿಯರ್‌ ವಿಟ್ರಿಯಸ್‌ ಡಿಟ್ಯಾಚ್‌ಮೆಂಟ್‌ ಆಗಿದ್ದಲ್ಲಿ ಕೆಲವು ರೋಗಿಗಳಲ್ಲಿ “ಉಂಗುರ’ ಆಕಾರದ ತೇಲುಬಿಂಬಗಳನ್ನು ಗಮನಿಸಬಹುದು.

ಇಂತಹ ವಿಟ್ರಿಯಸ್‌ ಡಿಟ್ಯಾಚ್‌ಮೆಂಟ್‌ಗಳಿಂದ ರೆಟಿನಾಕ್ಕೆ ಗಾಯ ಅಥವಾ ಹಾನಿ ಉಂಟಾದಾಗ ಅದು ದೃಷ್ಟಿ ಸಾಮರ್ಥ್ಯಕ್ಕೆ ಅಪಾಯವನ್ನು ಉಂಟುಮಾಡುವ ರೆಟಿನಾ ಸ್ಥಾನಪಲ್ಲಟಕ್ಕೆ ಕಾರಣವಾಗಬಹುದು; ಇಂತಹ ಸಂದರ್ಭದಲ್ಲಿ ತುರ್ತಾಗಿ ಶಸ್ತ್ರಚಿಕಿತ್ಸೆ ಒದಗಿಸಬೇಕಾಗುತ್ತದೆ. ರೆಟಿನಾಕ್ಕೆ ಗಾಯ ಉಂಟಾಗಿದ್ದಲ್ಲಿ ತೇಲುಬಿಂಬಗಳ ಜತೆಗೆ ಕೆಮರಾದ ಫ್ಲ್ಯಾಶ್‌ ಅಥವಾ ಮಿಂಚಿನಂತಹ ಬೆಳಕು ಕೂಡ ಕಾಣಿಸುತ್ತದೆ. ತೇಲುಬಿಂಬಗಳು ಮತ್ತು ಮಿಂಚಿನಂತಹ ಬೆಳಕಿನ ಈ ಲಕ್ಷಣಗಳು ಬೇಗನೆ ಗಮನಕ್ಕೆ ಬಂದರೆ ಲೇಸರ್‌ನಿಂದಲೇ ಚಿಕಿತ್ಸೆ ಒದಗಿಸಬಹುದು, ಶಸ್ತ್ರಚಿಕಿತ್ಸೆಯ ಅಗತ್ಯ ಬೀಳದು. ಆದರೆ ಈ ಲಕ್ಷಣಗಳನ್ನು ನಿರ್ಲಕ್ಷಿಸುವುದು ಅಥವಾ ಲಕ್ಷಣಗಳು ಗಮನಕ್ಕೆ ಬಂದ ಬಳಿಕವೂ ಕಾರಣ ಪತ್ತೆ ವಿಳಂಬವಾದಲ್ಲಿ ರೆಟಿನಾಕ್ಕೆ ಹಾನಿಯಾಗಬಹುದು, ಅಂತಿಮವಾಗಿ ರೆಟಿನಾ ಸಂಪೂರ್ಣವಾಗಿ ಸ್ಥಾನಪಲ್ಲಟಗೊಳ್ಳಬಹುದು.

ಒಟ್ಟಾರೆಯಾಗಿ, ತೇಲುಬಿಂಬಗಳೆಂದರೆ ಲಘು ಸ್ವರೂಪದ, ನೋವಿಲ್ಲದ ಮತ್ತು ಸಾಮಾನ್ಯವಾಗಿ ನಿರ್ಲಕ್ಷ್ಯಕ್ಕೆ ಒಳಗಾಗುವ ಕಣ್ಣಿನ ಅನಾರೋಗ್ಯದ ಲಕ್ಷಣಗಳು. ಇದರ ಬಗ್ಗೆ ನಿರ್ಲಕ್ಷ್ಯ ತಾಳದೆ, ನೇತ್ರತಜ್ಞರ ಜತೆಗೆ ಸಮಾಲೋಚನೆ ನಡೆಸಿದರೆ ಕಣ್ಣಿನ ದೃಷ್ಟಿ ಸಾಮರ್ಥ್ಯಕ್ಕೆ ಅಪಾಯವನ್ನು ಉಂಟುಮಾಡುವ ಕಾಯಿಲೆಯನ್ನು ಆರಂಭಿಕ ಹಂತದಲ್ಲಿಯೇ ತಡೆಗಟ್ಟಬಹುದಾಗಿದೆ.

 

ಡಾ| ಯೋಗೀಶ್‌ ಸುಬ್ರಾಯ ಕಾಮತ್‌

ಪ್ರೊಫೆಸರ್‌, ಆಪ್ತಮಾಲಜಿ ವಿಭಾಗ,

 ಕೆಎಂಸಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next