ಪಿ.ಸತ್ಯನಾರಾಯಣ
ಹೊಸಪೇಟೆ: ಕಿರಿಯ ಮಗನ ಮದುವೆ ಪ್ರಯುಕ್ತವಾಗಿ ತಾಲೂಕಿನ ಕಡ್ಡಿರಾಂಪುರದ ಕುಟುಂಬವೊಂದು ನೇತ್ರದಾನಕ್ಕೆ ಮುಂದಾಗಿ ಇತರರಿಗೆ ಮಾದರಿಯಾಗಿದ್ದಾರೆ.
ತಾಲೂಕಿನ ಹಂಪಿಯ ಬಳಿ ಇರುವ ಕಡ್ಡಿರಾಂಪುರ ಗ್ರಾಮದ ಕುರುಬರ ಕೊಟ್ರಬಸಪ್ಪ ಎಂಬುವರು ಜೂ.22 ರಂದು ನಡೆಯಲಿರುವ ತಮ್ಮ ಕಿರಿಯ ಮಗನ ಆನಂದಕುಮಾರ್ ಹಾಗೂ ಆರತಿ ವಿವಾಹದ ಅಂಗವಾಗಿ ಕುಟುಂಬದ 28 ಸದಸ್ಯರು ನೇತ್ರದಾನಕ್ಕೆ ಸಂಕಲ್ಪ ಮಾಡಿ ಅಂಧರ ಬಾಳಿಗೆ ಬೆಳಕು ನೀಡಲು ಮುಂದಾಗಿದ್ದು, ನೇತ್ರದಾನಿಗಳು ಸಂಡೂರು ರಸ್ತೆಯಲ್ಲಿರುವ ನೇತ್ರ ಲಕ್ಷ್ಮೀ ವೈದ್ಯಾಲಯದಲ್ಲಿ ಗುರುವಾರ ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದಾರೆ. ನಾಳೆ ನಡೆಯಲಿರುವ ಮದುವೆ ಸಮಾರಂಭದಲ್ಲಿ ವೈದ್ಯಾಧಿಕಾರಿಗಳು ನೇತ್ರದಾನಿಗಳಿಗೆ ಪ್ರಮಾಣ ಪತ್ರ ನೀಡಲಿದ್ದಾರೆ.
ನಮ್ಮ ಕುಟುಂಬ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ದೃಷ್ಟಿಯಿಂದ ನನ್ನ ತಮ್ಮ ಆನಂದಕುಮಾರ್ ಮದುವೆ ಅಂಗವಾಗಿ ನೇತ್ರದಾನ ಮಾಡುವ ಮೂಲಕ ನಮ್ಮ ಬಳಿಕ ಅಂಧರ ಬಾಳಿಗೆ ನಮ್ಮ ಕಣ್ಣುಗಳು ಬೆಳಕು ನೀಡಲಿ ಎಂಬ ಉದ್ದೇಶದಿಂದ ನೇತ್ರದಾನ ಮಾಡಲು ನಮ್ಮ ಕುಟುಂಬದ 28 ಸದಸ್ಯರು ಸಂಕಲ್ಪ ಮಾಡಿದ್ದು, ನಮ್ಮಂತೆ ಇತರರು ನೇತ್ರದಾನ ಮಾಡಲು ಮುಂದಾಗಬೇಕು ಎಂದು ವರನ ಸಹೋದರ ಪ್ರಶಾಂತ್ ಮನವಿ ಮಾಡಿದ್ದಾರೆ.
ವಿಶ್ವದಲ್ಲಿ 37 ಮಿಲಿಯನಷ್ಟು ಜನರು ಅಂಧತ್ವದಿಂದ ಕತ್ತಲ್ಲಲ್ಲಿ ಕಾಲ ಕಳೆಯತ್ತಿದ್ದಾರೆ. ಅದರಲ್ಲಿ ಭಾರತದಲ್ಲಿ 15 ಮಿಲಿಯನ್ಸ್ ಜನರು ಅಂಧ್ವತದಿಂದ ಬಳಲುತ್ತಿದ್ದಾರೆ. ಇದರಲ್ಲಿ ಶೇ.75ರಷ್ಟು ಕುರುಡತನವನ್ನು ಸೂಕ್ತ ಚಿಕಿತ್ಸೆಯಿಂದ ಕುರುಡತನ ನಿವಾರಣೆ ಮಾಡಬಹುದಾಗಿದೆ. ಸರ್ವೇ ಪ್ರಕಾರ ದೇಶದಲ್ಲಿ ಒಂದು ವರ್ಷಕ್ಕೆ 2.5 ಲಕ್ಷ ನೇತ್ರಗಳ ಅವಶ್ಯಕತೆ ಇದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಶೇ. 32ರಿಂದ 40 ಜನರು ಮಾತ್ರ ನೇತ್ರದಾನ ಮಾಡಲು ಮುಂದಾಗುತ್ತಿದ್ದಾರೆ. ಹೀಗಾಗಿ ನೇತ್ರದಾನ ಮಾಡುವ ಕುರಿತು ಜನರಲ್ಲಿ ಇರುವ ಹಿಂಜರಿಕೆ, ತಪ್ಪು ಕಲ್ಪನೆಯಿಂದ ಬಹುತೇಕ ಜನರು ನೇತ್ರದಾನಕ್ಕೆ ಮುಂದಾಗುತ್ತಿಲ್ಲ. ಸರ್ಕಾರ ಸೇರಿದಂತೆ ಸಂಘ-ಸಂಸ್ಥೆಗಳು ನೇತ್ರದಾನ ಮಹತ್ವ ಸಾರುವ ಮೂಲಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನೇತ್ರದಾನ ಜಾಗೃತಿ ಮೂಡಿಸಬೇಕಿದೆ.
ಡಾ| ಪ್ರವೀಣ್‌ಕುಮಾರ್, ವೈದ್ಯಾಧಿಕಾರಿಗಳು.