Advertisement

ಕುಲುಮೆಯಂತಾದ ಯುಕೆ; ಹಲವೆಡೆ ಕಾಡ್ಗಿಚ್ಚು: ಗರಿಷ್ಠ 39 ಡಿಗ್ರಿ ಸೆಲ್ಸಿಯಸ್‌ ದಾಖಲು

07:50 PM Jul 19, 2022 | Team Udayavani |

ಲಂಡನ್‌: ಯುನೈಟೆಡ್‌ ಕಿಂಗ್‌ಡಮ್‌ನ ಇತಿಹಾಸದಲ್ಲೇ ಕಂಡುಕೇಳರಿಯದಂಥ ಉಷ್ಣ ಹವೆಯ ಮಾರುತಗಳು ಇಡೀ ದೇಶ ಹಾಗೂ ಯೂರೋಪ್‌ನ ಇನ್ನಿತರ ದೇಶಗಳನ್ನು ಆವರಿಸಿದ್ದು, ಜನಜೀವನ ತಲ್ಲಣಗೊಂಡಿದೆ. ಹಲವಾರು ಕಡೆ ಬೆಂಕಿ ಅನಾಹುತಗಳು ಸಂಭವಿಸಿದ್ದು, ಉಷ್ಣಹವೆಯು ಹಲವರ ಬಲಿಯನ್ನೂ ಪಡೆದಿದೆ.

Advertisement

ಎರಡು ದಿನಗಳವರೆಗೆ ಅತಿ ಹೆಚ್ಚು ಉಷ್ಣಾಂಶ ಇರಲಿದೆ ಎಂದು ತಜ್ಞರು ಹೇಳಿದ್ದ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕರಿಗೆ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೊಳಿಸಿತ್ತು. ಬ್ರಿಟನ್‌ ಆರೋಗ್ಯ ಇಲಾಖೆಯು, ಯಾರೊಬ್ಬರೂ ಮನೆಗಳಿಂದ ಅನವಶ್ಯಕವಾಗಿ ಹೊರಬಾರದಂತೆ ಎಚ್ಚರಿಕೆ ನೀಡಿತ್ತು. ರೈಲು, ಬಸ್ಸು ಹಾಗೂ ವಿಮಾನ ಸೇವೆಗಳನ್ನು ಮಿತಿಗೊಳಿಸಲಾಗಿತ್ತು. ಲ್ಯೂಟನ್‌ ನಾರ್ಟನ್‌ ಹಾಗೂ ರಾಯಲ್‌ ಏರ್‌ಫೋರ್ಸ್‌ ಬ್ರಿಜ್‌ ನಾರ್ಟನ್‌ ಸೇವೆಗಳಲ್ಲೂ ವ್ಯತ್ಯಯ ಉಂಟಾಗಿತ್ತು.

ಬ್ರಿಟನ್‌ನಲ್ಲಿ ಮಂಗಳವಾರ ಗರಿಷ್ಠ 39.1 ಉಷ್ಣಾಂಶ ದಾಖಲಾಗಿದೆ. ಆದರೆ, ಹೀತ್ರೋ ವಿಮಾನ ನಿಲ್ದಾಣದಲ್ಲಿ 40.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಅಗತ್ಯವಿದ್ದರಷ್ಟೇ ಜನರು ಪ್ರಯಾಣಿಸಬೇಕೆಂದು ಸೂಚಿಸಲಾಗಿತ್ತು. ಆದರೆ, ದೇಶದ ಅಲ್ಲಲ್ಲಿ ಬಿಸಿಲಿನ ಬೇಗೆಯನ್ನು ತಾಳಲಾರದೆ ನದಿ, ಕೆರೆಗಳಲ್ಲಿ ಈಡಾಜಲು ಹೋದವರಲ್ಲಿ ಐವರು ಮೃತಪಟ್ಟಿರುವ ಘಟನೆಗಳು ನಡೆದಿವೆ.

ಉಷ್ಣ ಹವೆಯಿಂದ ಹಲವೆಡೆ ಕಾಡ್ಗಿಚ್ಚು
ಬೇಸಗೆಯಲ್ಲೂ ತಣ್ಣಗಿರುವ ಪ್ರಾಂತ್ಯವೆಂದೇ ಪ್ರಸಿದ್ಧಿಯಾದ ಬ್ರಿಟನ್‌ನ ಪಶ್ಚಿಮ ಭಾಗದಲ್ಲಿರುವ ಬ್ರಿಟಾನಿಯಲ್ಲಿ ಉಷ್ಣ ಹವೆಯಿಂದಾಗಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಇದರಂತೆ, ಫ್ರಾನ್ಸ್‌, ಗ್ರೀಸ್‌, ಪೋರ್ಚುಗಲ್‌, ಸ್ಪೇನ್‌ ಸೇರಿದಂತೆ ಯೂರೋಪ್‌ನ ಹಲವಾರು ಕಡೆ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಫ್ರಾನ್ಸ್‌ನ ನೈರುತ್ಯ ಭಾಗದಲ್ಲಿರುವ ಅರಣ್ಯ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನಿಂದಾಗಿ 17,000 ಹೆಕ್ಟೇರ್‌ಗಳಲ್ಲಿನ ಅರಣ್ಯ ನಾಶವಾಗಿದೆ. ಕಾಡ್ಗಿಚ್ಚನ್ನು ನಂದಿಸಲು ಅಲ್ಲಿನ ಅಗ್ನಿಶಾಮಕ ದಳದ 1,700 ಸಿಬ್ಬಂದಿ ಅವಿರತ ಪ್ರಯತ್ನಿಸುತ್ತಿದ್ದಾರೆ.

ಸ್ಪೇನ್‌ನ ಝಮೋರಾ ಪ್ರಾಂತ್ಯದ ಅರಣ್ಯ ಪ್ರದೇಶದಲ್ಲಿ ಸಾಗುತ್ತಿದ್ದ ರೈಲನ್ನು, ಹಳಿಯ ಎರಡೂ ಬದಿಯ ಪೊದೆಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡ ಕಾರಣಕ್ಕಾಗಿ ಕೆಲವು ಗಂಟೆಗಳ ಕಾಲ ನಿಲ್ಲಿಸಲಾಗಿತ್ತು. ಸ್ಪೇನ್‌ನ ಪಶ್ಚಿಮ ಭಾಗದಲ್ಲಿರುವ ತಬಾರಾದಲ್ಲಿ ಕಾಡಿಗೆ ತೆರಳಿದ್ದ ಯುವಕನೊಬ್ಬ ಹಠಾತ್ತಾಗಿ ಸುತ್ತಲೂ ಆವರಿಸಿದ ಕಾಡ್ಗಿಚ್ಚಿನಿಂದ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next