ಮಾನ್ವಿ: ಗುರುವಾರ ರಾತ್ರಿ ಬೀಸಿದ ಬಿರುಗಾಳಿಗೆ ತಾಲೂಕಿನಾದ್ಯಂತ ಅಪಾರ ಪ್ರಮಾಣ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿದೆ. ತಾಲೂಕಿನ ಜಾನೇಕಲ್, ಅಮರಾವತಿ, ಹರವಿ, ಕೆ. ಗುಡದಿನ್ನಿ ಮತ್ತು ಕ್ಯಾಂಪ್, ಹಳ್ಳಿ ಹೊಸೂರು,
ಮಾಡಗಿರಿ, ಶ್ರೀನಿವಾಸ ಕ್ಯಾಂಪ್, ಬಲ್ಲಟಗಿ ಮತ್ತು ಸುತ್ತಲಿನ ಕ್ಯಾಂಪ್‌ಗ್ಳು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭಾರಿ ಪ್ರಮಾಣದ ಆಸ್ತಿ ಹಾನಿಯಾಗಿದೆ. ಬೃಹತ್ ಮರಗಳು ರಸ್ತೆಗೆ ಉರುಳಿವೆ. ಟೀನ್ ಶೆಡ್, ಹುಲ್ಲಿನ ಬಣವಿ ಗಾಳಿಗೆ ಹಾರಿ ಹೋಗಿವೆ. ವಿದ್ಯುತ್ ಕಂಬಗಳು ಉರುಳಿವೆ.
ಪ್ರಾಣಾಪಾಯವಿಲ್ಲ: ತಾಲೂಕಿನಾದ್ಯಂತ ಗುರುವಾರ ರಾತ್ರಿ ಬಿರುಗಾಳಿ ಬೀಸಿದೆ. ಆದರೆ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಬಸವಣ್ಣ ಕ್ಯಾಂಪ್‌ನಲ್ಲಿ ಗಾಳಿಗೆ ತೂರಿ ಬಂದ ಟೀನ್ ಹೊಟ್ಟೆಗೆ ತಗುಲಿದ ಪರಿಣಾಮ ತಾಲೂಕಿನ ಗಟ್ಟಿಮಿಟ್ಟಿಕ್ಯಾಂಪ್‌ನ ವೀರೇಶ ಬಸವರಾಜ ಎನ್ನುವವರಿಗೆ ಸಣ್ಣ ಗಾಯವಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಸಲಾಗಿದ್ದು, ಇದನ್ನು ಹೊರತುಪಡಿಸಿದರೆ ಬಿರುಗಾಳಿಗೆ ಯಾವುದೇ ಪ್ರಣಾಪಾಯ ಹಾಗು ಜಾನುವಾರು ಪ್ರಣಾಪಾಯ ಸಂಭಿಸಿದ ವರದಿಯಾಗಿಲ್ಲ.
ವಿದ್ಯುತ್ ವ್ಯತ್ಯಯ: ಬಿರುಗಾಳಿಗೆ ಹೆಚ್ಚಾಗಿ ಟೀನ್ ಶೆಡ್‌ಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದಿವೆ. ವಿದ್ಯುತ್ ಕಂಬಗಳು ಉರಳಿದ ಪರಿಣಾಮ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಗ್ರಾಮೀಣ ಜನರು ವಿದ್ಯುತ್ ಸಮಸ್ಯೆಯಿಂದಾಗಿ ತೀವ್ರ ಸಮಸ್ಯೆ ಎದುರಿಸವಂತಾಗಿದೆ. ಈ ಕುರಿತು ಜೆಸ್ಕಾಂ ಕಚೇರಿ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ. ಇದಕ್ಕೆ ಜೆಸ್ಕಾಂನಲ್ಲಿ ಸಿಬ್ಬಂದಿ ಕೊರತೆಯುಂಟಾಗುತ್ತಿದೆ.
ಇದುವರೆಗೂ ಜೆಸ್ಕಾ ಅಧಿಕಾರಿಗಳು ಮಾತ್ರ ಯಾವುದೇ ಗ್ರಾಮಗಳಿಗೆ ಭೇಟಿ ನೀಡಿ ವಿದ್ಯುತ್ ಸಮಸ್ಯೆ ನಿವರಣೆಗೆ ಮುಂದಾಗಿಲ್ಲ.
ಭೇಟಿ: ಉಪ ತಹಶೀಲ್ದಾರ್ ಸಿದ್ದನಗೌಡ ಹಾಗೂ ಶಾಸಕ ರಾಜಾವೆಂಕಟಪ್ಪ ನಾಯಕ ಅವರ ಸಹೋದರ ಮತ್ತು ಜೆಡಿಎಸ್ ಯುವ ಮುಖಂಡ ರಾಜಾರಾಮಚಂದ್ರ ನಾಯಕ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಬಿರುಗಾಳಿ ದುಷ್ಪರಿಣಾಮ ಪರಿಶೀಲಿಸಿದರು.