Advertisement

ಕಮ್ಯುನಿಸ್ಟ್‌ ನಾಯಕರ ದುಂದುಗಾರಿಕೆ ನಾಯಕರಿಂದಾಗಿ ಪಕ್ಷ ಕಂಗಾಲು

12:20 PM Feb 06, 2018 | Harsha Rao |

ಕೇರಳದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ. ಸರಕಾರಿ ನೌಕರರಿಗೆ ತಿಂಗಳ ಸಂಬಳ ನೀಡಲು ಪರದಾಡಬೇಕಾದ ಸ್ಥಿತಿಯಲ್ಲಿ ರಾಜ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಸಚಿವರು ಮಾತ್ರ ಈ ಪರಿಯ ದುಂದುಗಾರಿಕೆ ಮಾಡುತ್ತಿರುವುದು ಕಮ್ಯುನಿಸ್ಟ್‌ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿರುವ ವರ್ತನೆ.

Advertisement

ಕೆಲ ದಿನಗಳ ಹಿಂದೆ ತ್ರಿಪುರದ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ತನ್ನ ಸಂಪತ್ತು ಘೋಷಿಸಿದಾಗ ಇಡೀ ದೇಶ ಆಶ್ಚರ್ಯ ಚಕಿತವಾಗಿತ್ತು. ಸುಮಾರು ಮೂರು ದಶಕಗಳಿಂದ ರಾಜ್ಯವಾಳುತ್ತಿರುವ ಮುಖ್ಯಮಂತ್ರಿಯ ಬ್ಯಾಂಕ್‌ ಖಾತೆಯಲ್ಲಿರುವುದು ಬರೀ ಎರಡು ಸಾವಿರ ಚಿಲ್ಲರೆ ರೂಪಾಯಿ. ಹೆಂಡತಿ ಹೆಸರಲ್ಲಿರುವ ಒಂದು ಚಿಕ್ಕ ಮನೆ ಬಿಟ್ಟರೆ ಬೇರೆ ಯಾವ ಸಂಪತ್ತೂ ಈ ಮುಖ್ಯಮಂತ್ರಿಯ ಬಳಿಯಿಲ್ಲ. ಪಂಚಾಯತ್‌ ಸದಸ್ಯನಾದರೂ ಸಾಕು ಲಕ್ಷ , ಕೋಟಿಗಳಲ್ಲಿ ಸಂಪಾದಿಸುವ ನಾಯಕರಿರುವ ದೇಶದಲ್ಲಿ ಮಾಣಿಕ್‌ ಸರ್ಕಾರ್‌ ನಿಜವಾಗಿಯೂ ಅಪರೂಪದ ರಾಜಕಾರಣಿ. ಕನಿಷ್ಠ ಆ ರಾಜ್ಯದ ಪಾಲಿಗಾದರೂ ಅವರು ಒಂದು ಅಮೂಲ್ಯ ಸಂಪತ್ತೇ ಸರಿ. ತ್ರಿಪುರದಲ್ಲಿ ಇನ್ನೂ ಸಿಪಿಎಂ ಅಧಿಕಾರದಲ್ಲಿದೆ ಎಂದಾದರೆ ಅದಕ್ಕೆ ಕಾರಣ ಪಕ್ಷದ ಜನಪ್ರಿಯತೆಯೂ ಅಲ್ಲ, ರಾಷ್ಟ್ರೀಯ ನಾಯಕರ ವರ್ಚಸ್ಸೂ ಅಲ್ಲ, ಮಾಣಿಕ್‌ ಸರ್ಕಾರ್‌ ಅವರ ಈ ಸರಳತೆ ಮತ್ತು ಪ್ರಾಮಾಣಿಕತೆ. ಮಾಣಿಕ್‌ ಸರ್ಕಾರ್‌ ಜೀವನವೇ ಅಲ್ಲಿ ಒಂದು ದಂತಕತೆ. ಕಮ್ಯುನಿಸ್ಟ್‌ ಪಕ್ಷ ಅಧಿಕಾರದಲ್ಲಿರುವ ಎರಡು ರಾಜ್ಯಗಳಲ್ಲಿ ತ್ರಿಪುರ ಒಂದು. ಇನ್ನೊಂದು ದಕ್ಷಿಣದ ತುದಿಯಲ್ಲಿರುವ ಕೇರಳ. ತ್ರಿಪುರ ಮಾಣಿಕ್‌ ಸರ್ಕಾರ್‌ ಅವರ ದಕ್ಷ ಆಡಳಿತದಿಂದ ಸುದ್ದಿಯಾಗುತ್ತಿದ್ದರೆ ಕೇರಳದ ಸಿಪಿಎಂ ಸರಕಾರ ಮಾತ್ರ ಅಧಿಕಾರಕ್ಕೇರಿದಂದಿನಿಂದ ಕೆಟ್ಟ ಕಾರಣಗಳಿಗಾಗಿಯೇ ಸುದ್ದಿ ಮಾಡುತ್ತಿದೆ. 

ಒಂದೆಡೆ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರ ಮತ್ತು ಕೊಲೆಗಳಿಗೆ ಲಗಾಮು ಹಾಕಲು ಸಾಧ್ಯವಾಗದೆ ಕೇರಳದ ಸರಕಾರ ಕಂಗಾಲಾಗಿದೆ. ಇನ್ನೊಂದೆಡೆ ಹಲವು ಸಚಿವರು ಭ್ರಷ್ಟಾಚಾರದ ಆರೋಪ ಹೊತ್ತು ಸಂಪುಟದಿಂದ ಹೊರಹೋಗುವುದು ಅನಂತರ ತನಿಖೆಯ ಪ್ರಹಸನ ಮುಗಿಸಿ ದೋಷಮುಕ್ತರಾಗಿ ಮರಳಿ ಬರುವುದು ನಡೆಯುತ್ತಿದೆ. ಇದೀಗ ವಿಧಾನಸಭೆಯ ಸ್ಪೀಕರ್‌ ಸೇರಿದಂತೆ ಮೂವರು ಸಚಿವರ ಬಿಲ್ವಿದ್ಯೆ ಪ್ರಾವೀಣ್ಯತೆ ಸಿಪಿಎಂ ಸರಕಾರವನ್ನು ಮತ್ತೂಮ್ಮೆ ತಲೆತಗ್ಗಿಸುವಂತೆ ಮಾಡಿದೆ. ಮಾಣಿಕ್‌ ಸರ್ಕಾರ್‌ ಅವರಿಗೆ ತದ್ವಿರುದ್ಧವಾಗಿದೆ ಸ್ಪೀಕರ್‌ ಮತ್ತು ಇಬ್ಬರು ಸಚಿವರ ವರ್ತನೆ. ಸ್ಪೀಕರ್‌ ಪಿ. ರಾಮಕೃಷ್ಣನ್‌ ಧರಿಸುತ್ತಿರುವ ಕನ್ನಡಕದ ಬೆಲೆ ಭರ್ತಿ 50,000 ರೂ. ಇದೇನು ದೊಡ್ಡ ವಿಷಯವಲ್ಲ. 75 ಲಕ್ಷದ ವಾಚು ಕಟ್ಟುವ ಮುಖ್ಯಮಂತ್ರಿ ಇರುವಾಗ ರಾಮಕೃಷ್ಣನ್‌ 50,000 ರೂ. ಕನ್ನಡಕ ಧರಿಸುವುದು ಆಶ್ಚರ್ಯವುಂಟು ಮಾಡುವುದಿಲ್ಲ. ಆದರೆ ಈ ಕನ್ನಡಕದ ಬಿಲ್ಲನ್ನು ಅವರು ಸರಕಾರದಿಂದ ಪಡೆದುಕೊಂಡಿದ್ದಾರೆ. ಅದೇ ರೀತಿ ಇನ್ನೋರ್ವ ಸಚಿವ ಥಾಮಸ್‌ ಐಸಾಕ್‌ 1.20 ಲಕ್ಷ.ರೂ.ಯ ಆಯುರ್ವೇದ ಮಸಾಜ್‌ ಮಾಡಿಸಿಕೊಂಡು ಆ ಬಿಲ್ಲನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಕೆಲ ಸಮಯದ ಹಿಂದೆ 28,000 ರೂ.ಯ ಕನ್ನಡಕದ ಬಿಲ್ಲನ್ನು ಕೂಡ ಸರಕಾರದಿಂದ ವಸೂಲು ಮಾಡಿದ್ದರು. ವಿಶೇಷವೆಂದರೆ ಈ ಪೈಕಿ ಥಾಮಸ್‌ ಐಸಾಕ್‌ ರಾಜ್ಯದ ಹಣಕಾಸು ಸಚಿವ. ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ಎಲ್ಲರೂ ಮಿತವ್ಯಯ ಪಾಲಿಸಬೇಕೆಂದು ವಿನಂತಿಸಿದ್ದರು. ಆದರೆ ತಾನು ಮಾತ್ರ ಮಸಾಜ್‌ ಬಿಲ್ಲನ್ನು ಸರಕಾರದ ಲೆಕ್ಕಕ್ಕೆ ಬರೆಸಿಕೊಂಡಿದ್ದಾರೆ. 

ಕೇರಳದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ. ಸರಕಾರಿ ನೌಕರರಿಗೆ ತಿಂಗಳ ಸಂಬಳ ನೀಡಲು ಪರದಾಡಬೇಕಾದ ಸ್ಥಿತಿಯಲ್ಲಿ ರಾಜ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಸಚಿವರು ಮಾತ್ರ ಈ ಪರಿಯ ದುಂದುಗಾರಿಕೆ ಮಾಡುತ್ತಿರುವುದು ಕಮ್ಯುನಿಸ್ಟ್‌ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿರುವ ವರ್ತನೆ. ನಾಯಕರ ಇಂತಹ ಎಡಬಿಡಂಗಿ ವರ್ತನೆಯಿಂದಲೇ ಸಿಪಿಎಂ ದೇಶದಲ್ಲಿ ಹಿನ್ನೆಲೆಗೆ ಸರಿಯುತ್ತಿದೆ. ಕೇರಳ ಮತ್ತು ತ್ರಿಪುರ ಬಿಟ್ಟರೆ ಬೇರೆ ಯಾವ ರಾಜ್ಯದಲ್ಲೂ ಪಕ್ಷದ ಉಪಸ್ಥಿತಿ ಕಾಣಿಸುತ್ತಿಲ್ಲ. ತ್ರಿಪುರದಲ್ಲಿ ಮೊದಲೇ ಹೇಳಿರುವಂತೆ ಮಾಣಿಕ್‌ ಸರ್ಕಾರ್‌ ಅವರಿಂದಾಗಿ ಉಳಿದುಕೊಂಡಿದೆಯಷ್ಟೆ. ಭದ್ರಕೋಟೆಯಾದ ಪಶ್ಚಿಮ ಬಂಗಾಳವನ್ನು ಕಳೆದುಕೊಂಡ ಬಳಿಕ ಸಿಪಿಎಂ ಶೋಚನೀಯ ಸ್ಥಿತಿಗೆ ಇಳಿದಿದೆ. ಆದರೂ ಪಕ್ಷದ ನಾಯಕರು ಎಚ್ಚೆತ್ತುಕೊಂಡಿಲ್ಲ. ಪಕ್ಷದ ಕೇಂದ್ರೀಯ ನಾಯಕತ್ವ ಯೆಚೂರಿ ಮತ್ತು ಕಾರಟ್‌ ಬಣದ ನಡುವೆ ಹೋಳಾಗಿದೆ. ಒಬ್ಬರು ನೀರಿಗೆಳೆದರೆ ಇನ್ನೊಬ್ಬರು ಏರಿಗೆಳೆಯುವ ಸ್ವಭಾವದವರು ಈ ನಾಯಕರು. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಒಂದು ಕಾಲದ ಬದ್ಧವೈರಿ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳುವಷ್ಟರ ಮಟ್ಟಿಗೆ ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡಿತ್ತು. ಇದೀಗ ಮರಳಿ ಮೈತ್ರಿ ಮಾಡಿಕೊಳ್ಳುವ ಕುರಿತು ಉಭಯ ಬಣಗಳ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ಇದಕ್ಕೆಲ್ಲ ಪುಟವಿಟ್ಟಂತೆ ಅಧಿಕಾರದಲ್ಲಿರುವ ದೊಡ್ಡ ರಾಜ್ಯವಾದ ಕೇರಳದ ನಾಯಕರು ಪಕ್ಷಕ್ಕೆ ದಿನಕ್ಕೊಂದು ಮುಜುಗರ ತಂದೊಡ್ಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next