ಬೆಂಗಳೂರು: ಹಸ್ತಾಂತರ ಕಾಯ್ದೆ ಉಲ್ಲಂಘಿಸಿ ತಮ್ಮ ವಿಚಾರಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಭೂಗತ ಪಾತಕಿ ರವಿ ಪೂಜಾರಿ ಸಲ್ಲಿಸಿದ ಅರ್ಜಿ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿರುವ ಹೈಕೋರ್ಟ್, ಹಸ್ತಾಂತರಿಸಿದ ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖೀಸದ ಪ್ರಕರಣಗಳ ವಿಚಾರಣೆ ನಡೆಸಬಹುದೇ ಎಂಬ ಬಗ್ಗೆ ವಿವರಣೆ ಕೇಳಿದೆ.
ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೆನೆಗಲ್‌ನಿಂದ ಭಾರತಕ್ಕೆ ಹಸ್ತಾಂತರಿಸಿದ ಬಳಿಕ ಮಹಾರಾಷ್ಟ್ರದ ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ಅಲಿಯಾಸ್ ರವಿಪ್ರಕಾಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಹಸ್ತಾಂತರ ಕಾಯ್ದೆ ಸೆಕ್ಷನ್ 21ರ ಪ್ರಕಾರ, ವಿದೇಶದಿಂದ ಹಸ್ತಾಂತರಿಸಲ್ಪಟ್ಟ ವ್ಯಕ್ತಿಯನ್ನು ಹಸ್ತಾಂತರ ಆದೇಶದಲ್ಲಿ ಉಲ್ಲೇಖೀಸಿರುವ ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ಒಳಪಡಿಸಬಹುದು. ಆದರೆ, ಇತರ ಪ್ರಕರಣಗಳ ವಿಚಾರಣೆಗೆ ಅವಕಾಶವಿಲ್ಲ. ಹಸ್ತಾಂತರ ಆದೇಶದಲ್ಲಿ ನಮೂದಿಸಿರುವ ಪ್ರಕರಣಗಳು ಹೊರತುಪಡಿಸಿ ಪೂಜಾರಿ ಅವರನ್ನು ವಿಚಾರಣೆಗೆ ಒಳಪಡಿಸುವುದು ಮತ್ತು ವಿಚಾರಣೆ ನಡೆಸುವುದು ಹಸ್ತಾಂತರ ಕಾಯ್ದೆಯ ಸೆಕ್ಷನ್ 21ರ ಉಲ್ಲಂಘನೆಯಾಗಿದೆ ಉಲ್ಲಂ ಸುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ವಾದ ಆಲಿಸಿದ ನ್ಯಾಯಪೀಠ ಹಸ್ತಾಂತರ ಆದೇಶದಲ್ಲಿ ಉಲ್ಲೇಖೀಸದ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಬಹುದೇ ಎಂಬ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.
ಹಸ್ತಾಂತರ ಆದೇಶದಲ್ಲಿ 37 ಪ್ರಕರಣಗಳ ವಿಚಾರಣೆಗೆ ಅರ್ಜಿದಾರರು ಬೇಕಾಗಿತ್ತು ಎಂಬುದಾಗಿ ಹೇಳಲಾಗಿದೆ. ಆದರೆ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನದಲ್ಲಿ 107 ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ. ಆದರೂ ಹಸ್ತಾಂತರ ಆದೇಶದಲ್ಲಿನ ಪ್ರಕರಣಗಳ ವಿಚಾರಣೆ ನಡೆಸದಿರುವುದು ಹಸ್ತಾಂತರ ಮಾಡಿರುವ ನ್ಯಾಯಾಲಯ ಆದೇಶ ಉಲ್ಲಂಘನೆಯಾಗಲಿದೆ ಎಂದು ಅರ್ಜಿಯಲ್ಲಿ ಕೋರಿದ್ದಾರೆ.