Advertisement
ಅನಂತಕುಮಾರ ಹೆಗಡೆ ಮೊದಲು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದರೆ, ಕೇಂದ್ರ ಸಚಿವರು ಸಂವಿಧಾನಕ್ಕೆ ಅವಮಾನ ಮಾಡಿದ್ದು, ದೇಶದ ಜನತೆಯ ಕ್ಷಮೆ ಕೇಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಆಗ್ರಹಿಸಿದ್ದಾರೆ.
ಹುಬ್ಬಳ್ಳಿ: ಸಂವಿಧಾನವನ್ನೇ ಬದಲಿಸುವ ಉದ್ದೇಶ ಹೊಂದಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮೊದಲು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ದಿನಗಳಲ್ಲಿ ಸಂವಿಧಾನ ಬದಲಾವಣೆ ಮಾಡುತ್ತೇವೆಂದು ಅನಂತಕುಮಾರ ಹೆಗಡೆ ಹೇಳಿರುವುದು ಖಂಡನೀಯ. ಅವರಿಗೆ ಸಂವಿಧಾನದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ.
Related Articles
Advertisement
ಧರ್ಮ ವಿಭಜನೆ ನಮ್ಮ ಉದ್ದೇಶವಲ್ಲ: ನಾವು ಧರ್ಮ ವಿಭಜನೆ ಮಾಡಲು ಹೊರಟಿಲ್ಲ. ನನಗೆ ಬಂದ ಐದು ಅರ್ಜಿಗಳನ್ನು ಅಲ್ಪಸಂಖ್ಯಾತರ ಆಯೋಗಕ್ಕೆ ಕಳಿಸಿದ್ದೇನೆ. ಒಬ್ಬೊಬ್ಬರದು ಒಂದು ಬೇಡಿಕೆಯಿದೆ. ವೀರಶೈವ ಮಹಾಸಭಾದವರು ಪ್ರತ್ಯೇಕ ವೀರಶೈವ ಲಿಂಗಾಯತ ಧರ್ಮ ಬೇಕು ಅಂತಾರೆ, ಮಾತೆ ಮಹಾದೇವಿಯವರು ಲಿಂಗಾಯತ ಪ್ರತ್ಯೇಕ ಧರ್ಮವಾಗಲಿ ಅಂತಾರೆ.
ಆದ್ದರಿಂದ ಎಲ್ಲ ಅರ್ಜಿಗಳನ್ನು ಆಯೋಗಕ್ಕೆ ಕಳಿಸಲಾಗಿದೆ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು. ರುಂಡ-ಮುಂಡ ಬೇರ್ಪಡಿಸುವ ಸಂಸ್ಕೃತಿ ನಮ್ಮದಲ್ಲ. ನಾನು ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದು ತಿಳಿಸಿದರು.
ಜನತೆಯ ಕ್ಷಮೆ ಕೇಳಲಿಬೆಂಗಳೂರು: ಸಂವಿಧಾನವನ್ನು ಬದಲಾಯಿಸಲು ಅಧಿಕಾರಕ್ಕೆ ಬಂದಿರುವುದಾಗಿ ಹೇಳಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನಕ್ಕೆ ಅವಮಾನ ಮಾಡಿದ್ದು, ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಪರಮೇಶ್ವರ್ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಅವಕಾಶ ಕಲ್ಪಿಸಿದೆ. ಸಂವಿಧಾನದಲ್ಲಿನ ಒಂದೊಂದು ಪ್ರಸ್ತಾವನೆಯ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿದೆ. ಇಂತಹ ಸಂವಿಧಾನವನ್ನು ಬದಲಾಯಿಸುವ ಮಾತನಾಡಿರುವುದು ಸಂವಿಧಾನಕ್ಕೆ ಮಾಡಿದ ಅವಮಾನ ಎಂದರು. ಅಲ್ಲದೇ ಜಾತ್ಯತೀತ ತತ್ವದವರಿಗೆ ತಂದೆ ತಾಯಿ ಯಾರು ಎನ್ನುವುದು ಗೊತ್ತಿಲ್ಲವೆಂದು ಸಂವಿಧಾನ ಬಾಹಿರ ಪದ ಬಳಕೆ ಮಾಡಿದ್ದು, ಹೆಗಡೆ ಈ ಪದವನ್ನು ವಾಪಸ್ ಪಡೆದು ನಾಡಿನ ಜನತೆಯ ಕ್ಷಮೆ ಕೇಳಬೇಕೆಂದು ಪರಮೇಶ್ವರ್ ಆಗ್ರಹಿಸಿದರು. ಸಂವಿಧಾನ ಬದಲಿಸುವ ಉದ್ದೇಶ ಕೇಂದ್ರಕ್ಕಿಲ್ಲ: ಶೋಭಾ
ಚಿಕ್ಕಮಗಳೂರು: “ಸಂವಿಧಾನ ಬದಲಿಸುವ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಾಗಲಿ ಅಥವಾ ಬಿಜೆಪಿಯಲ್ಲಾಗಲಿ ಇಲ್ಲ’ ಎಂದು ಸಂಸದೆ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಸಂವಿಧಾನಕ್ಕೆ ತಿದ್ದುಪಡಿ ತರುವ ಬಗ್ಗೆ ನೀಡಿರುವ ಹೇಳಿಕೆ ಕುರಿತು ಪ್ರಶ್ನಿಸಿದಾಗ, ಸಂವಿಧಾನಕ್ಕೆ ತಿದ್ದುಪಡಿ ತರುವ ಬಗ್ಗೆ ಕೇಂದ್ರ ಸರ್ಕಾರದಲ್ಲಾಗಲಿ ಅಥವಾ ಬಿಜೆಪಿಯಲ್ಲಾಗಲಿ ಯಾವುದೇ ಚರ್ಚೆ ನಡೆದಿಲ್ಲ. ಆದರೆ ಸಂವಿಧಾನವನ್ನು ಮತ್ತಷ್ಟು ಬಲಪಡಿಸುವ, ಶಕ್ತಿ ತುಂಬುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದರು. ಅನಂತ ಕುಮಾರ್ ಹೆಗಡೆ ಅವರ ಹೇಳಿಕೆ ಸರಿಯೇ, ತಪ್ಪೆ ಎಂಬ ಬಗ್ಗೆ ತಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಅವರ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗುವುದಿಲ್ಲವೆ ಎಂದು ಪ್ರಶ್ನಿಸಿದಾಗ, ಆ ಬಗ್ಗೆ ಪಕ್ಷದ ಹಿರಿಯರು ತೀರ್ಮಾನಿಸುತ್ತಾರೆ. ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎನ್ನುವುದಾದರೆ ಅವರೇ ಪ್ರತಿಕ್ರಿಯಿಸುತ್ತಾರೆ. ತಾವು ಅನಂತ ಕುಮಾರ್ ಹೆಗಡೆ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸುವುದಿಲ್ಲ. ಅವರು ಕೇಂದ್ರ ಸಚಿವರು, 5 ಬಾರಿ ಸಂಸದರಾಗಿರುವವರು ಎಂದು ಹೇಳಿದರು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ತಲೆ ಸರಿಯಿಲ್ಲ. ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕಿದೆ. ಹೆಗಡೆ ಜಾತ್ಯತೀತ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದವರು. ಸಂವಿಧಾನ ಬಗ್ಗೆ ಗೌರವ ಇಲ್ಲದವರು. ಇಂತಹವರು ಸಂಸದ ಸ್ಥಾನದಲ್ಲಿರಲು ನಾಲಾಯಕ್.ದೇಶದ ಎಲ್ಲ ಧರ್ಮ, ಜಾತಿಯ ಜನ ಸಂವಿಧಾನ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುವ ನಿಲುವು ವ್ಯಕ್ತಪಡಿಸಿರುವುದು ಹಾಸ್ಯಾಸ್ಪದ
-ರುದ್ರಪ್ಪ ಲಮಾಣಿ, ಸಚಿವ ಡಾ| ಬಿ.ಆರ್. ಅಂಬೇಡ್ಕರ್ ತಪಸ್ಸು ಮಾಡಿ ರಚಿಸಿರುವ ಭಾರತದ ಸಂವಿಧಾನವನ್ನು ಬದಲಾಯಿಸಲು ಮುಂದಾದರೆ ಬಿಜೆಪಿ ಅವನತಿ ಆರಂಭವಾಗಲಿದೆ. ಅನಂತ ಕುಮಾರ್ ಹೆಗಡೆ ರೀತಿಯಲ್ಲಿ ಕೊಳಕು, ಅಶ್ಲೀಲ ಮಾತುಗಳನ್ನು ಆಡಿದ್ದರೆ ಇಷ್ಟೊತ್ತಿಗಾಗಲೇ ಕಾಂಗ್ರೆಸ್ ಪಕ್ಷ ನನ್ನನ್ನು ಉಚ್ಚಾಟನೆ ಮಾಡಿರುತ್ತಿತ್ತು.
-ಎಚ್.ಆಂಜನೇಯ ಸಚಿವ