Advertisement

ಕುಡಿಯುವ ನೀರಿನ ಸೌಲಭ್ಯಕ್ಕೆ ಹೆಚ್ಚುವರಿ ಹಣ

02:04 AM May 10, 2019 | Sriram |

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ 3,600 ಕೋಟಿ ರೂ.ಮೊತ್ತದ ಕ್ರಿಯಾ ಯೋಜನೆ ಹೊರತುಪಡಿಸಿ 201 ಕೋಟಿ ರೂ.ಗಳ ಹೆಚ್ಚುವರಿ ಹಣ ಒದಗಿಸಲಾಗಿದೆ. ಹೀಗಾಗಿ, ಕುಡಿಯುವ ನೀರು ಪೂರೈಕೆ ಸೇರಿ ಬರ ನಿರ್ವಹಣೆ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಚಿವರು, ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ, ಬರಪೀಡಿತ ಪ್ರತಿ ತಾಲೂಕಿಗೆ ತಲಾ 2 ಕೋಟಿ ರೂ.ನಂತೆ ಒಟ್ಟು 324 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ನೀರಿನ ತೀವ್ರ ಅಭಾವವಿರುವ ಕಡೆ ಟ್ಯಾಂಕರ್‌ ವ್ಯವಸ್ಥೆ ಹಾಗೂ ಖಾಸಗಿ ಕೊಳವೆಯನ್ನು ಬಾಡಿಗೆಗೆ ಪಡೆದು ನೀರು ಪೂರೈಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಕಳೆದ ವರ್ಷ ಕುಡಿಯುವ ನೀರಿನ ಯೋಜನೆಗಳಿಗೆ 2,800 ಕೋಟಿ ರೂ.ವೆಚ್ಚ ಮಾಡಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಕುಡಿಯುವ ನೀರು ಪೂರೈಕೆಗಾಗಿ 3,600 ಕೋಟಿ ರೂ.ವೆಚ್ಚದ ಕ್ರಿಯಾ ಯೋಜನೆ ರೂಪಿಸಲಾಗಿದೆ. ಇದನ್ನು ಹೊರತುಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಕೈಗೊಂಡಿರುವ ತುರ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು 201 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

ಇಲಾಖೆ ವತಿಯಿಂದ ಈಗಾಗಲೇ ಮೊದಲ ಹಂತದಲ್ಲಿ ಬರ ಘೋಷಣೆಯಾದ 100 ತಾಲೂಕುಗಳಿಗೆ 1.50 ಕೋಟಿ ರೂ.ಗಳನ್ನು ಮೂರು ಹಂತದಲ್ಲಿ ಬಿಡುಗಡೆ ಮಾಡಲಾಗಿದೆ. ಹಿಂಗಾರಿನಲ್ಲಿ ಬರಪೀಡಿತ ತಾಲೂಕುಗಳಿಗೆ ಎರಡು ಹಂತದಲ್ಲಿ 75 ಲಕ್ಷ ರೂ.ಗಳನ್ನು ಟಾಸ್ಕ್ಪೋರ್ಸ್‌ಗಳಿಗೆ ನೀಡಲಾಗಿದೆ. ಬರ ಘೋಷಣೆಯಾಗದ ತಾಲೂಕುಗಳಿಗೆ ಎರಡು ಹಂತದಲ್ಲಿ 35 ಲಕ್ಷ ರೂ.ನೀಡಲಾಗಿದೆ. ಈ ರೀತಿ ಒಟ್ಟು 201 ಕೋಟಿ ರೂ.ನೀಡಲಾಗಿದೆ ಎಂದು ಹೇಳಿದರು.

ಟಾಸ್ಕ್ಫೋರ್ಸ್‌ಗಿದ್ದ ಅಧಿಕಾರ ಸಿಇಒಗೆ ಹಸ್ತಾಂತರ: ನೀತಿ ಸಂಹಿತೆ ಜಾರಿಗೂ ಮೊದಲ ಹಂತದಲ್ಲಿ ಮುಂಗಾರಿನಲ್ಲಿ ಘೋಷಣೆಯಾದ ಬರಪೀಡಿತ ತಾಲೂಕುಗಳಿಗೆ 50 ಲಕ್ಷ ರೂ., ಹಿಂಗಾರಿನ ಬರ ತಾಲೂಕುಗಳಿಗೆ 25 ಲಕ್ಷ ರೂ.ಹಾಗೂ ಬರ ಘೋಷಣೆಯಾಗದ ತಾಲೂಕುಗಳಿಗೆ 10 ಲಕ್ಷ ರೂ.ನೀಡಲಾಗಿದೆ. ಆದರೆ, ನೀತಿ ಸಂಹಿತೆ ಕಾರಣಕ್ಕೆ ಟಾಸ್ಕ್ಫೋರ್ಸ್‌ಗಿದ್ದ ಅಧಿಕಾರವನ್ನು ಸಿಇಒ ಅವರಿಗೆ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿರುವ ಹಣ ಹಾಗೂ ಜಿಲ್ಲಾ ಪಂಚಾಯ್ತಿಗಳಿಗೆ ಕುಡಿಯುವ ನೀರಿಗೆ ಬಿಡುಗಡೆ ಮಾಡುವ ಹಣ ಹೊರತುಪಡಿಸಿ ಹೆಚ್ಚುವರಿಯಾಗಿ 201 ಕೋಟಿ ರೂ.ನೀಡಲಾಗಿದೆ ಎಂದು ವಿವರ ನೀಡಿದರು.

Advertisement

ರಾಜ್ಯದಲ್ಲಿ 2,575 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 1324 ಗ್ರಾಮಗಳಿಗೆ 2,177 ಟ್ಯಾಂಕರ್‌ಗಳ ಮೂಲಕ ನಿತ್ಯ 6079 ಟ್ರಿಪ್‌ನಡಿ ನೀರು ಪೂರೈಸಲಾಗುತ್ತಿದೆ. ಜತೆಗೆ 1647 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು 1251 ಗ್ರಾಮಗಳಿಗೆ ನೀರು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಟ್ಯಾಂಕರ್‌ ಸೇವೆ ಹಾಗೂ ಖಾಸಗಿ ಕೊಳವೆ ಬಾವಿ ಬಾಡಿಗೆಗೆ ಪಡೆಯಲು ಜಿಲ್ಲಾಧಿಕಾರಿಗಳಿಗೆ 324 ಕೋಟಿ ರೂ.ನೀಡಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ಒಟ್ಟು 727 ಕೋಟಿ ರೂ.ಹಣ ಇದೆ. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಯೋಜನೆಗಳ ಅನುಷ್ಠಾನದಲ್ಲಿ ಶೇ.10ರಿಂದ ಶೇ.20ರಷ್ಟು ನ್ಯೂನತೆಗಳಾಗಿರಬಹುದು. ಕೆಲವನ್ನು ಸಚಿವರು, ಮಾಧ್ಯಮಗಳು ವರದಿ ಮಾಡಿದ್ದು, ಆ ನ್ಯೂನತೆಗಳನ್ನು ಸರಿಪಡಿಸಲು ಗಮನ ಹರಿಸಬೇಕೆಂಬ ಬಗ್ಗೆಯೂ ಚರ್ಚೆಯಾಗಿದೆ ಎಂದು ಹೇಳಿದರು.

ರಾಜ್ಯಾದ್ಯಂತ 150 ಮೇವಿನ ಬ್ಯಾಂಕ್‌ ತೆರೆಯಲಾಗಿದ್ದು, ಕೆ.ಜಿ.ಗೆ 2 ರೂ.ನಂತೆ ರಿಯಾಯ್ತಿ ದರದಲ್ಲಿ ಮೇವು ವಿತರಿಸಲಾಗುತ್ತಿದೆ. 12 ಗೋಶಾಲೆ ತೆರೆಯಲಾಗಿದ್ದು, 11,614 ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ. 42.7 ಕೋಟಿ ರೂ. ವೆಚ್ಚದಲ್ಲಿ 16.80 ಲಕ್ಷ ಮೇವಿನ ಮಿನಿ ಕಿಟ್ ವಿತರಿಸಲಾಗಿದೆ. ಇದರಿಂದ 63 ಲಕ್ಷ ಟನ್‌ ಮೇವು ಉತ್ಪಾದನೆಯಾಗುವ ಅಂದಾಜು ಇದೆ ಎಂದು ಹೇಳಿದರು.

ರಾಜ್ಯದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ 8.5 ಕೋಟಿ ಮಾನವ ದಿನ ಸೃಷ್ಟಿಸಿ ಗುರಿ ಮೀರಿ 10.47 ಕೋಟಿ ಮಾನವ ದಿನ ಸೃಜನೆಯಾಗಿರುವುದು ಹೊಸ ದಾಖಲೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಜೂ. 15ರವರೆಗೆ ಟೆಂಡರ್‌ ವಿನಾಯ್ತಿ
ಕುಡಿಯುವ ನೀರಿನ ಅಭಾವ ನಿವಾರಿಸಲು ಅಗತ್ಯವಿರುವ ಕಡೆ ಕೊಳವೆ ಬಾವಿ ಕೊರೆಯಲು ಟೆಂಡರ್‌ ವಿನಾಯ್ತಿ ಅವಧಿಯನ್ನು ಜೂ.15ವರೆಗೆ ವಿಸ್ತರಿಸಲು ಸಂಪುಟದಲ್ಲಿ ನಿರ್ಧರಿಸಲಾಗಿದೆ. ಕಳೆದ ಏ.1ರಿಂದ ಕೊಳವೆ ಬಾವಿ ಕೊರೆಯಲು ಟೆಂಡರ್‌ ಪ್ರಕ್ರಿಯೆ ನಡೆಸಬೇಕು ಎಂದು ಆರ್ಥಿಕ ಇಲಾಖೆ ಸೂಚಿಸಿತ್ತು. ಆದರೆ, ಟೆಂಡರ್‌ ಪ್ರಕ್ರಿಯೆಯಿಂದ ಕುಡಿಯುವ ನೀರಿನ ಪೂರೈಕೆ ವಿಳಂಬವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸೂಚನೆಯಂತೆ ಜೂ.15ರವರೆಗೆ ಟೆಂಡರ್‌ ವಿನಾಯ್ತಿ ನೀಡಲು ಸಭೆ ನಿರ್ಧರಿಸಿದೆ.

ಹೊಸ ಜನಪ್ರತಿನಿಧಿಗಳ ಆಸ್ತಿ ವಿವರ ಸಲ್ಲಿಕೆ ಗಡುವು ವಿಸ್ತರಣೆ
ಬೆಂಗಳೂರು: ಹೊಸದಾಗಿ ಆಯ್ಕೆಯಾಗುವ ರಾಜ್ಯದ ಜನಪ್ರತಿನಿಧಿಗಳು ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸುವ ಗಡುವು ಅವಧಿಯನ್ನು ಮೊದಲ ವರ್ಷಕ್ಕೆ ಸಂಬಂಧಪಟ್ಟಂತೆ ಒಂದು ತಿಂಗಳ ಕಾಲ ವಿಸ್ತರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ರಾಜ್ಯದಲ್ಲಿ ಆಯ್ಕೆಯಾಗುವ ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಪ್ರತಿ ವರ್ಷ ಜೂ. 30ರೊಳಗೆ ಲೋಕಾಯುಕ್ತ ಸಂಸ್ಥೆಗೆ ಆಸ್ತಿ ವಿವರ ಸಲ್ಲಿಸಬೇಕು. ಕೆಲ ಚುನಾವಣೆಗಳು ಮೇ, ಜೂನ್‌ ತಿಂಗಳಲ್ಲಿ ನಡೆಯುವ ಕಾರಣ ಆಗ ಆಯ್ಕೆಯಾಗುವವರು ತಕ್ಷಣವೇ ಆಸ್ತಿ ವಿವರ ಸಲ್ಲಿಸಲು
ಕಷ್ಟವಾಗಬಹುದು. ಉಪಚುನಾವಣೆಯಲ್ಲಿ ಆಯ್ಕೆಯಾದವರಿಗೂ ಈ ಸಮಸ್ಯೆ ತಲೆದೋರಬಹುದು. ಆ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಯೇ ಪತ್ರ ಬರೆದ ಹಿನ್ನೆಲೆಯಲ್ಲಿ ಆಯ್ಕೆಯಾದ ಮೊದಲ ವರ್ಷಕ್ಕೆ ಸೀಮಿತವಾಗಿ ಆಸ್ತಿ ವಿವರ ಸಲ್ಲಿಕೆಗೆ ಅವಧಿಯನ್ನು ಒಂದು ತಿಂಗಳು ವಿಸ್ತರಿಸಲು ಸಂಪುಟ ಅನುಮೋದನೆ ನೀಡಿದೆ.

15ಕ್ಕೆ ವಿಡಿಯೋ ಸಂವಾದ
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಮೇ 15ರಂದು ಬರಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಹಾಗೆಯೇ, ಉಪಚುನಾವಣೆ ನಡೆದಿರುವ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರ ಒಳಗೊಂಡ ಎರಡು ಜಿಲ್ಲೆ ಹೊರತುಪಡಿಸಿ ಉಳಿದೆಡೆ ಜಿಲ್ಲಾ ಉಸ್ತುವಾರಿ ಸಚಿವರು ವಾರದೊಳಗೆ ಬರ ನಿರ್ವಹಣೆ ಪರಿಶೀಲನಾ ಸಭೆ
ನಡೆಸುವಂತೆ ಮುಖ್ಯಮಂತ್ರಿಗಳು ಸಂಪುಟ ಸಭೆಯಲ್ಲಿ ಸೂಚಿಸಿದ್ದಾರೆ. ಅದರಂತೆ, ಮುಖ್ಯಮಂತ್ರಿಗಳ ವಿಡಿಯೋ ಸಂವಾದಕ್ಕೂ ಮೊದಲೇ ಉಸ್ತುವಾರಿ ಸಚಿವರು
ಪರಿಶೀಲನಾ ಸಭೆ ನಡೆಸುವ ಸಾಧ್ಯತೆ ಇದೆ. ಬರ ಹಾಗೂ ಇತರ ಪ್ರಕೃತಿ ವಿಕೋಪಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಪರಿಶೀಲನಾ ಸಭೆ
ನಡೆಸಲು ಕಳೆದ ಸೋಮವಾರವಷ್ಟೇ ಚುನಾವಣಾ ಆಯೋಗ ನೀತಿ ಸಂಹಿತೆ ಸಡಿಲಿಸಿ ಅನುಮತಿ ನೀಡಿತ್ತು.

ಕೊಳವೆ ಬಾವಿ ಬರಿದು
ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊಳವೆ ಬಾವಿಗಳು ಬರಿದಾಗುತ್ತಿವೆ. ಇದರಿಂದ ಹಳ್ಳಿಗಳಿಗೆ ಟ್ಯಾಂಕರ್‌ ನೀರು ಪೂರೈಸಬೇಕಿದೆ. ಅಲ್ಲದೆ, ಶುದ್ಧನೀರಿನ ಘಟಕಗಳಿಗೂ ಸಮಸ್ಯೆಯಾಗುತ್ತಿದೆ. ಮಾಸಾಂತ್ಯಕ್ಕೆ ಪೂರ್ವ ಮುಂಗಾರು ಆರಂಭವಾಗುವ ವಾಡಿಕೆ ಇದೆ. ಕೆಲ ತಾಲೂಕುಗಳಲ್ಲಿ ಮಳೆಯಾಗಿದೆ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗಿಲ್ಲ. ಮೇ ತಿಂಗಳೊಳಗೆ ಮಳೆಯಾಗದಿದ್ದರೆ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಿಸಲಿದೆ. ಬೀದರ್‌ ನಲ್ಲಿ ಸಾಕಷ್ಟು ಮಂದಿ ಒಂದೇ ಬಾವಿಯ ನೀರು
ಆಶ್ರಯಿಸಿ ಸಮಸ್ಯೆ ಎದುರಿಸುತ್ತಿರುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆಯಾಯಿತು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಭಿವೃದ್ಧಿ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next