ಬೆಂಗಳೂರು: ಖಾಸಗಿ ಫೋಟೋ, ವಿಡಿಯೋಗಳು ಇರುವುದಾಗಿ ಟೆಕಿಗೆ ಬೆದರಿಸಿ ಸ್ನೇಹಿತರೇ 65 ಲಕ್ಷರೂ. ಸುಲಿಗೆ ಮಾಡಿರುವ ಆರೋಪದಡಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಮೂಲದ 26 ವರ್ಷದ ಟೆಕಿಯೊಬ್ಬರು ನೀಡಿದ ದೂರಿನ ಮೇರೆಗೆ ಎಚ್.ಎಸ್.ಆರ್. ಲೇಔಟ್ ನಿವಾಸಿಗಳಾದ ಅಕ್ಷಯ್ ಕುಮಾರ್ ಮತ್ತು ಆತನ ಸಹೋದರ ಭರತ್ ಎಂಬವರ ವಿರುದ್ಧ ವಿಧಾನಸೌಧ ಠಾಣೆ ಪೊಲೀಸರು ಎಫ್ಐಆರ್ ದಾಖಲಾಗಿದ್ದು, ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ದೂರುದಾರ ಟೆಕಿ ಅಂಬೇಡ್ಕರ್ ರಸ್ತೆಯಲ್ಲಿರುವ ಸಾಫ್ಟ್ವೇರ್ ಕಂಪನಿ ಯಲ್ಲಿ ಎಂಜಿನಿಯರ್ ಆಗಿದ್ದು, ಆರೋಪಿ ಅಕ್ಷಯ್ ಕುಮಾರ್ ಕಳೆದ 18 ವರ್ಷಗಳಿಂದ ಸ್ನೇಹಿತನಾಗಿದ್ದು, ಈತನ ಸಹೋದರ ಭರತ್ ಸಹ ಪರಿಚಿತ. ಇತ್ತೀಚೆಗೆ ಅಕ್ಷಯ್ ಮತ್ತು ಭರತ್, ದೂರುದಾರನನ್ನು ಭೇಟಿಯಾಗಿ ನಿನ್ನ ಖಾಸಗಿ ಫೋಟೋಗಳು ಬೇರೆ ವ್ಯಕ್ತಿಯ ಬಳಿ ಇದ್ದು, ಆತ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಹೇಳುತ್ತಿದ್ದಾನೆ. 12 ಲಕ್ಷ ರೂ. ಕೊಟ್ಟರೆ ಆ ಫೋಟೋಗಳನ್ನು ವಾಪಸ್ ಪಡೆದುಕೊಳ್ಳಬಹುದು ಎಂದು ಹೇಳುತ್ತಿದ್ದಾನೆ ಎಂದು ನಂಬಿಸಿದ್ದ. ಅದರಿಂದ ಗಾಬರಿಗೊಂಡ ದೂರು ದಾರ ಮೊದಲಿಗೆ 11.20 ಲಕ್ಷ ರೂ. ಅನ್ನು ಅಕ್ಷಯ್‌ಗೆ ನೀಡಿದ್ದಾನೆ. ಆ ನಂತರವೂ ಆರೋಪಿಗಳು ದೂರುದಾರರಿಗೆ ಹಣಕ್ಕೆ ಬೇಡಿಕೆ ಇಟ್ಟಾಗ 10 ಲಕ್ಷ ರೂ. ಕೊಟ್ಟಿದ್ದಾರೆ.
ಆದರೂ ಬಿಡದ ಸಹೋದರರು, ಸ್ನೇಹಿತನಿಗೆ ಬ್ಲ್ಯಾಕ್‌ವೆುàಲ್ ಮಾಡಲು ಆರಂಭಿಸಿದ್ದಾರೆ. ಬೇಸರಗೊಂಡ ಟೆಕಿ, ಪೋಷಕರು ಹಾಗೂ ಸ್ನೇಹಿತರ ಬಳಿ ಸಾಲ ಪಡೆದು 12 ಲಕ್ಷ ರೂ. ನೀಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಅಕ್ಷಯ್, ತನ್ನ ಗೆಳತಿ ಎಂಬಾಕೆಯಿಂದ ಕರೆ ಮಾಡಿಸಿ, 5 ಲಕ್ಷ ರೂ. ಸುಲಿಗೆ ಮಾಡಿದ್ದಾನೆ ಎಂದು ಟೆಕಿ ದೂರಿನಲ್ಲಿ ಆರೋಪಿಸಿದ್ದಾರೆ.
ಮತ್ತೂಂದೆಡೆ ದೂರುದಾರ ಟೆಕಿ ಬಳಿ ಹೋದ ಆರೋಪಿಗಳು, ನಿಮ್ಮ ತಮ್ಮ ಈ ರೀತಿಯ ಸಮಸ್ಯೆಯಲ್ಲಿ ಸಿಲುಕಿದ್ದಾನೆ ಎಂದು ಸುಳ್ಳು ಹೇಳಿ 12.20 ಲಕ್ಷ ರೂ. ಹಣ ಪಡೆದ್ದಾರೆ. ಆ ನಂತರ ಮತ್ತೆ 15 ಲಕ್ಷ ರೂ. ಪಡೆದುಕೊಂಡಿದ್ದಾನೆ. ಹೀಗೆ ಬರೋಬ್ಬರಿ 65 ಲಕ್ಷ ರೂ. ಪಡೆದುಕೊಂಡಿದ್ದಾರೆ. ಆ ನಂತರವೂ ಆರೋಪಿಗಳು ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದರಿಂದ ಅನುಮಾನಗೊಂಡ ದೂರುದಾರ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈ ಸಂಬಂಧ ಇಬ್ಬರು ಸಹೋದರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಅಶ್ಲೀಲ ಫೋಟೋ ವಿಡಿಯೋ ಚಿತ್ರೀಕರಣ:
ಆರೋಪಿಗಳು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಹೀಗಾಗಿ ಹಣದ ಸಹಾಯ ಮಾಡುವಂತೆ ದೂರುದಾರರನ್ನು ಆಗಾಗ ಕೇಳುತ್ತಿದ್ದರು. ದೂರುದಾರ ಸ್ವಲ್ಪ ಹಣವನ್ನೂ ನೀಡುತ್ತಿದ್ದರು. ಕೆಲ ಸಂದರ್ಭದಲ್ಲಿ ಹಣ ನೀಡಲು ನಿರಾಕರಿಸುತ್ತಿದ್ದರು. ಆದರಿಂದ ಆರೋಪಿಗಳು ಸ್ನೇಹಿತನನ್ನೇ ಬ್ಲ್ಯಾಕ್‌ಮೇಲ್ ಮಾಡಲು ಸಂಚು ರೂಪಿಸಿ, ಸ್ನೇಹಿತನ ಖಾಸಗಿ ಕ್ಷಣಗಳ ಫೋಟೋ ಹಾಗೂ ವಿಡಿಯೊವನ್ನು ಆರೋಪಿಗಳು ಚಿತ್ರೀಕರಿಸಿಕೊಂಡಿದ್ದರು. ಬಳಿಕ ಅಪರಿಚಿತನ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.