Advertisement
ಕಲ್ಲಡ್ಕ ಮಾರ್ನೆಮಜಲು ಬಾಡಿಗೆ ಮನೆ ನಿವಾಸಿ ಹಬೀಬ್ ಹಸನ್ ಆಲಿಯಾಸ್ ಚೊಂಬುಗುಡ್ಡೆ ಹಬೀಬ್ ಮತ್ತು ಉಳ್ಳಾಲ ಕೋಡಿ ನ್ಯೂ ತೋಟ ಹೌಸ್‌ನ ಮಹಮ್ಮದ್ ಫೈಜಲ್ ಆಲಿಯಾಸ್ ಶಾಕಿರ್ ಬಂಧಿತ ಆರೋಪಿಗಳು. ಆರೋಪಿಗಳಿಂದ 12,48,550 ರೂ. ಅಂದಾಜು ಮೌಲ್ಯದ 240 ಗ್ರಾಂ ಚಿನ್ನ ಮತ್ತು 1.34 ಲ.ರೂ. ಅಂದಾಜು ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೂ. 2ರಂದು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೋರ್ವರು ಮನೆಯ ಕಾಂಪೌಂಡ್ ಒಳಗಿನ ಬಾವಿಯಿಂದ ನೀರು ಸೇದುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗೆ ಪೊಲೀಸ್ ಆಯುಕ್ತರು ಸುರತ್ಕಲ್ ಇನ್‌ಸ್ಪೆಪೆಕ್ಟರ್ ಮಹೇಶ್ ಪ್ರಸಾದ್ ನೇತೃದಲ್ಲಿ ವಿಶೇಷ ತಂಡ ರಚಿಸಿದ್ದರು.
Related Articles
Advertisement
ಸಿಸಿ ಕೆಮರಾ ನೆರವು ಆರೋಪಿಗಳ ಪತ್ತೆಗೆ ಸಿಸಿ ಕೆಮರಾದಿಂದ ಅನುಕೂಲವಾಗಿದೆ. ಸಿಸಿ ಕೆಮರಾ ಅಳವಡಿಕೆಗೆ ಪೊಲೀಸ್ ಇಲಾಖೆ ಹೆಚ್ಚು ಆದ್ಯತೆ ನೀಡುತ್ತಿದೆ. ಖಾಸಗಿಯವರು ಕೂಡ ಅಗತ್ಯ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಲು ಸೂಚಿಸಲಾಗಿದೆ. ಪೊಲೀಸ್ ಇಲಾಖೆ ಆ್ಯಪ್ ಮೂಲಕ 24,000 ಸಿಸಿ ಕೆಮರಾಗಳ ಲೊಕೇಷನ್‌ಗಳನ್ನು ಮ್ಯಾಪ್ ಮಾಡಿಕೊಂಡಿದ್ದು, ಈ ಸ್ಥಳಗಳಲ್ಲಿ ಯಾವುದೇ ಘಟನೆಯಾದರೂ ಕೂಡಲೇ ಕಾರ್ಯಾಚರಣೆಗೆ ಅನುಕೂಲವಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶು ಕುಮಾರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಬಿ.ಪಿ., ಮಂಗಳೂರು ಉತ್ತರ ವಿಭಾಗದ ಎಸಿಪಿ ಮನೋಜ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಾಚರಣೆಯಲ್ಲಿ ಸುರತ್ಕಲ್ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಎಸ್‌ಐ ಅರುಣ್ ಕುಮಾರ್ ಡಿ., ಎಎಸ್‌ಐ ರಾಧಾಕೃಷ್ಣ, ಎಚ್‌ಸಿ ಅಣ್ಣಪ್ಪ ವಂಡ್ಸೆ, ಪಿಸಿಗಳಾದ ಕಾರ್ತಿಕ್ ಕುಲಾಲ್, ಮಣಿಕಂಠ ಎಚ್.ಎ., ನಾಗರಾಜ, ಶಿವರಾಮ, ಪಣಂಬೂರು ಠಾಣೆಯ ಎಸ್‌ಐ ಜ್ಞಾನಶೇಖರ, ಪಿಸಿ ನಿಂಗಪ್ಪ, ಬಜಪೆ ಠಾಣೆಯ ಎಎಸ್‌ಐ ಕುಶಾಲ್ ಮಣಿಯಾಣಿ, ಕಾವೂರು ಠಾಣೆಯ ಎಚ್‌ಸಿ ಇಸಾಕ್, ಮೂಡುಬಿದಿರೆ ಠಾಣೆಯ ಎಚ್‌ಸಿಗಳಾದ ಅಕೀಲ್ ಅಹ್ಮದ್ ಮತ್ತು ಹುಸೇನ್ ಪಾಲ್ಗೊಂಡಿದ್ದರು. ತಂಡಕ್ಕೆ ಆಯುಕ್ತರು ನಗದು ಬಹುಮಾನ ನೀಡಿದರು. ಖತರ್‌ನಾಕ್ ಕಳ್ಳರಿವರು
ವಿವಿಧ ರೀತಿಯ ಅಪರಾಧಗಳಿಗೆ ಸಂಬಂಧಿಸಿದಂತೆ ಹಬೀಬ್ ವಿರುದ್ಧ 35 ಪ್ರಕರಣಗಳು, ಫೈಝಲ್ ವಿರುದ್ಧ 15 ಪ್ರಕರಣ ದಾಖಲಾಗಿವೆ. ಹಬೀಬ್ ವಿರುದ್ಧ ಬಜಪೆ, ಉಳ್ಳಾಲ, ಮಂಗಳೂರು ದಕ್ಷಿಣ, ಕೊಣಾಜೆ, ಸುರತ್ಕಲ್, ಮೂಲ್ಕಿ, ಮಂಗಳೂರು ಉತ್ತರ, ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ, ಮಲ್ಪೆ, ಮಣಿಪಾಲ, ಉಡುಪಿ ನಗರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಫೈಜಲ್ ವಿರುದ್ಧ ಬೆಳ್ತಂಗಡಿ, ವಿಟ್ಲ, ಮೂಲ್ಕಿ, ಸುರತ್ಕಲ್, ಉಳ್ಳಾಲ, ಉಡುಪಿ ನಗರ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆ, ಪುತ್ತೂರು, ಕೊಣಾಜೆ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಬೀಬ್‌ಪ್ರಕರಣವೊಂದಕ್ಕೆ ಸಂಬಂಧಿಸಿ ಇದೇ ವರ್ಷದ ಮಾ. 9ರಂದು ಮಂಗ ಳೂರು ಕಾರಾಗೃಹದಿಂದ ಬಿಡುಗಡೆಗೊಂಡಿದ್ದ ಎಂದು ಆಯುಕ್ತರು ತಿಳಿಸಿದರು. ಎಲ್ಲೆಲ್ಲಿ ಕೃತ್ಯ? ಆರೋಪಿಗಳು ಕಾರ್ಕಳ ಕುಕ್ಕೂಂದೂರಿನಲ್ಲಿ ವೃದ್ಧ ಮಹಿಳೆಯಿಂದ ಲಕ್ಷ್ಮೀತಾಳಿ ಮತ್ತು ಮಾಂಗಲ್ಯ ಸರ, ಶಿರ್ವ ಠಾಣೆಯ ತುಂಡುಬಲ್ಲಿ ಎಂಬಲ್ಲಿ ಚಿನ್ನದ ಸರ, ಮಣಿಪಾಲ ಠಾಣಾ ವ್ಯಾಪ್ತಿಯ ಪರ್ಕಳ ಬಬ್ಬರ್ಯ ದೈವಸ್ಥಾನದ ಬಳಿ ಚಿನ್ನದ ಸರ, ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಮಾರ್ನಾಡು ಎಂಬಲ್ಲಿ ಚಿನ್ನದ ಕರಿಮಣಿಸರ, ಬಂಟ್ವಾಳ ನಗರ ಪೊಲೀಸ್ ಠಾಣೆಯ ಪಚ್ಚಿನಡ್ಕ ಎಂಬಲ್ಲಿ ಚಿನ್ನದ ಕರಿಮಣಿಸರ, ಸುರತ್ಕಲ್ ಠಾಣಾ ವ್ಯಾಪ್ತಿಯ ತಡಂಬೈಲು ಎಂಬಲ್ಲಿ ವೃದ್ಧ ಮಹಿಲೆಯಿಂದ ಚಿನ್ನದ ಕೊತ್ತಂಬರಿ ಡಿಸೈನ್ ಸರ, ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಂಡ್ಕೂರು ಎಂಬಲ್ಲಿಂದ ಚಿನ್ನದ ಸರ ಸುಲಿಗೆ ಮಾಡಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೀರ್ತಿನಗರದಲ್ಲಿ ಬೈಕ್, ಕಾವೂರು ಪೊಲೀಸ್ ಠಾಣಾ ವ್ಯಾಪ್ತಿ ಮಾಲೆಮಾರ್‌ನಿಂದ ಬೈಕ್ ಕಳವು, ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಮಲ್ಲಿಕಟ್ಟೆಯಿಂದ ಬೈಕ್ ಕಳವು, ಮಣಿಪಾಲ ಪೊಲೀಸ್ ಠಾಣೆಯ ಸರಹದ್ದಿನ ಶಿವಳ್ಳಿ ಗ್ರಾಮದ ಅಪಾರ್ಟ್‌ಮೆಂಟ್‌ನಿಂದ ಸ್ಕೂಟರ್ ಕಳವು ಮಾಡಿದ್ದಾರೆ.