ಬೆಂಗಳೂರು: ಪೊಲೀಸ್ ಇನ್‌ಸ್ಪೆಕ್ಟರ್ ಹೆಸರಿನಲ್ಲಿ ಸಾರ್ವಜನಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಬೆಸ್ಕಾಂ ಸಹಾಯಕ ಎಂಜಿನಿಯರ್ ಗಂಗಾಧರ್ ಎಂಬುವರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಸ್ಕಾಂನ ಮಲ್ಲೇಶ್ವರಂ ವಿಭಾಗದಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದ ಗಂಗಾಧರ್, ಪೊಲೀಸ್ ಇನ್‌ಸ್ಪೆಕ್ಟರ್ ಎಂದು ಹೇಳಿಕೊಂಡು ಸಾರ್ವಜನಿಕರ ಸುಲಿಗೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರೊಬ್ಬರು ದೂರು ನೀಡಿದ್ದರು.
ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಮತ್ತೂಂದೆಡೆ ಪ್ರಕರಣದ ತನಿಖೆ ಯನ್ನು ಸಿಸಿಬಿಗೆ ವಹಿಸಿ ಕಮಿಷನರ್ ಆದೆಧೀಶ ಹೊರಡಿಸಿದ್ದಾರೆ. ಹೀಗಾಗಿ, ಎಲ್ಲ ಕಡತಗಳನ್ನು ಸಿಸಿಬಿ ಅಧಿಕಾರಿಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ. ಆರೋ ಪಿಯನ್ನೂ ಸಿಸಿಬಿ ಅಧಿಕಾರಿಗಳು ಕಸ್ಟಡಿಗೆ ಪಡೆ ದು ತನಿಖೆ ಮುಂದುವರಿಸಲಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇನ್‌ಸ್ಪೆಕ್ಟರ್ ಗುರುತಿನ ಚೀಟಿ: ಬೆಸ್ಕಾಂ ನೀಡಿದ್ದ ವಾಕಿಟಾಕಿ ಇಟ್ಟುಕೊಂಡಿದ್ದ ಆರೋಪಿ, ಪೊಲೀಸ್ ಇನ್‌ಸ್ಪೆಕ್ಟರ್, ಕರ್ನಾಟಕ ಪೊಲೀಸ್ ಇಲಾಖೆ ಎಂದು ಗುರುತಿನ ಚೀಟಿ ಸಹ ಮಾಡಿಸಿಕೊಂಡಿದ್ದ. ತನ್ನ ಕಾರಿನ ಮುಂಭಾಗದಲ್ಲಿ ಪೊಲೀಸ್ ಜಾಗೃತ ದಳ ಎಂಬ ಫಲಕವನ್ನು ಆರೋಪಿ ನೇತು ಹಾಕಿದ್ದ. ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆಡೆ ಸಂಚರಿಸುತ್ತಿದ್ದ ಆರೋಪಿ, ಹಲವರನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದಾನೆ ಎಂಬ ಮಾಹಿತಿ ಇದೆ. ಕೆಲ ಪ್ರಕರಣಗಳಲ್ಲಿ ಮಧ್ಯಸ್ಥಿಕೆ ವಹಿಸುತ್ತಿದ್ದ ಆರೋಪಿ, ಪ್ರಕರಣ ದಾಖಲಿಸುವುದಾಗಿ ಜನರನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದ. ಭೂ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ವತಿಯಿಂದ ಪರಿಹಾರ ಕೊಡಿಸುವುದಾಗಿ ಹೇಳಿ ಕೆಲ ರೈತರಿಂದಲೂ ಹಣ ಪಡೆದು ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದರು.