ಬೆಂಗಳೂರು: ಪ್ಲೈವುಡ್ ವ್ಯಾಪಾರಿ ಅಪಹರಿಸಿ 10 ಲಕ್ಷ ರೂ. ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ರೌಡಿಶೀಟರ್ ಸೇರಿ ನಾಲ್ವರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಹನುಮಂತನಗರ ನಿವಾಸಿಗಳಾದ ರೌಡಿಶೀಟರ್ ರವಿತೇಜ(34), ಫೈನಾನ್ಶಿಯರ್ ಸಂತೋಷ್(36) ಹಾಗೂ ಅವರ ಸಹಚರರಾದ ಹಜಿವಾಲಾ, ರಾಜಶೇಖರ್ ಬಂಧಿತರು.
ಫ್ಲೈ ವುಡ್ ವ್ಯಾಪಾರಿ ರಂಜಿತ್ ಎಂಬವರನ್ನು ಸೆ.23 ರಂದು ಅಪಹರಿಸಿ, 50 ಲಕ್ಷ ರೂ.ಗೆ ಬೇಡಿಕೆ ಇರಿಸಿ, 10 ಲಕ್ಷ ರೂ. ಸುಲಿಗೆ ಮಾಡಿದ್ದರು. ಬಳಿಕ ಬಾಕಿ ಹಣ 15 ದಿನಗಳ ಒಳಗೆ ಕೊಡಬೇಕು. ಇಲ್ಲವಾದರೆ ಹತ್ಯೆ ಮಾಡುವುದಾಗಿ ಬೆದರಿಸಿ ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ರಂಜಿತ್ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು. ಆ ಬಳಿಕ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಂಜಿತ್ ಬ್ಯಾಟರಾಯನಪುರದಲ್ಲಿ ಪ್ಲೈವುಡ್ ಏಜೆನ್ಸಿ ಇಟ್ಟುಕೊಂಡಿದ್ದು, ಆರೋಪಿಗಳ ಪೈಕಿ ಫೈನಾನ್ಸಿಯರ್ ಸಂತೋಷ್ ಪರಿಚಯ ಇತ್ತು. ಈತನಿಂದ ರಂಜಿತ್ ಆಗಾಗ್ಗೆ ಲಕ್ಷಾಂತರ ರೂ. ಸಾಲ ಪಡೆದುಕೊಂಡು ಬಡ್ಡಿ ಸಮೇತ ಸಾಲ ತೀರಿಸುತ್ತಿದ್ದರು. ಈ ಮಧ್ಯೆ ಕೆಲ ತಿಂಗಳ ಹಿಂದೆ 14 ಲಕ್ಷ ರೂ. ಸಾಲ ಪಡೆದುಕೊಂಡು, ಈ ಹಣದ ಬಡ್ಡಿ 9 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು. ಸಾಲ ತೀರಿಸಿದ್ದ ವ್ಯಾಪಾರಿ: ಸಾಲ ತೀರಿಸಲು ಸಾಧ್ಯವಾಗದೆ ರಂಜಿತ್, ತನ್ನ ಮನೆಯ ಪತ್ರಗಳನ್ನು ಖಾಸಗಿ ಫೈನಾನ್ಸ್‌ಗೆ ಅಡಮಾನ ಇಟ್ಟು 1 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಈ ಹಣದಲ್ಲಿ ಸಂತೋಷ್‌ಗೆ ಕೊಡಬೇಕಿದ್ದ 14 ಲಕ್ಷ ರೂ. ಅಸಲು ಮತ್ತು 9 ಲಕ್ಷ ರೂ. ಬಡ್ಡಿ ಸೇರಿ 23 ಲಕ್ಷ ರೂ.ಅನ್ನು ಚೆಕ್ ಮೂಲಕ ಸಾಲ ತೀರಿಸಿದ್ದರು. ಆದರೆ, ಸಂತೋಷ್ ಹಣ ಕೊಡುವಾಗ ರಂಜಿತ್ ನಿಂದ ಪಡೆದುಕೊಂಡಿದ್ದ ಸ್ಟಾಂಪ್ ಪೇಪರ್, ಖಾಲಿ ಚೆಕ್‌ಗಳನ್ನು ವಾಪಸ್ ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ರಂಜಿತ್ ತನ್ನ ಮನೆಯನ್ನು 1 ಕೋಟಿ ರೂ.ಗೆ ಅಡಮಾನ ಇಟ್ಟಿರುವ ವಿಚಾರ ತಿಳಿದ ಸಂತೋಷ್, ಈ ಹಿಂದೆ ನಿನಗೆ ಸಾಕಷ್ಟು ಬಾರಿ ಸಾಲ ಕೊಟ್ಟಿದ್ದೇನೆ. ಈಗ ನನಗೆ ಹಣ ಬೇಕು ಎಂದು 10 ಲಕ್ಷ ರೂ. ಚೆಕ್ ಪಡೆದು ಡ್ರಾ ಮಾಡಿಕೊಂಡಿದ್ದ. ರಂಜಿತ್ ಬಳಿ ಇನ್ನಷ್ಟು ಹಣ ಇರುವ ಬಗ್ಗೆ ಮಾಹಿತಿ ತಿಳಿದ ಸಂತೋಷ್, ಸೆ.23ರಂದು ರೌಡಿಶೀಟರ್ ರವಿತೇಜ ಸೇರಿ ಇತರೆ ಸಹಚರರನ್ನು ಟಿಂಬರ್ ಲೇಔಟ್‌ಗೆ ಕರೆಸಿಕೊಂಡಿದ್ದಾನೆ.
50 ಲಕ್ಷ ರೂ.ಗೆ ಬೇಡಿಕೆ: ಬಳಿಕ ರಂಜಿತ್‌ನನ್ನು ಕಾರಿನಲ್ಲಿ ಹತ್ತಿಸಿಕೊಂಡು ಗಿರಿನಗರ, ಜಯನಗರ ಸೇರಿ ವಿವಿಧೆಡೆ ಸುತ್ತಾಡಿಸಿದ್ದಾನೆ. ಬಳಿಕ “ನಿನ್ನ ಹತ್ಯೆಗೆ ನಿನ್ನ ಭಾವ ಸುಪಾರಿ ಕೊಟ್ಟಿದ್ದಾನೆ. ನೀನು 50 ಲಕ್ಷ ರೂ. ಕೊಟ್ಟರೆ ಬಿಟ್ಟು ಕಳುಹಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದ. ಧಮ್ಕಿ ಹಾಕಿ 10 ಲಕ್ಷ ರೂ. ಸುಲಿಗೆ: ರಂಜಿತ್ ತನ್ನ ಬಳಿ ಅಷ್ಟೊಂದು ಹಣ ಇಲ್ಲ ಎಂದಾಗ ಆರೋಪಿಗಳು ಆತನ ಮೇಲೆ ಹÇÉೆ ನಡೆಸಿದ್ದಾರೆ. ಅದರಿಂದ ಹೆದರಿದ ರಂಜಿತ್ 10 ಲಕ್ಷ ರೂ. ಕೊಟ್ಟಿದ್ದಾನೆ. ಹೀಗಾಗಿ ಬಾಕಿ ಹಣ 15 ದಿನಗಳಲ್ಲಿ ಕೊಡಬೇಕು ಎಂದು ಧಮ್ಕಿ ಹಾಕಿ, ರಂಜಿತ್‌ನನ್ನು ಮೈಸೂರು ರಸ್ತೆಗೆ ಬಿಟ್ಟು ಹೋಗಿದ್ದರು. ಬಳಿಕ ರಂಜಿತ್ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ಪ್ರಕರಣ ವರ್ಗಾಯಿಸಲಾಗಿತ್ತು. ಇದೀಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮನೆ ಬಳಿ ಬಂದು ಪ್ರಾಣ ಬೆದರಿಕೆ: ಬೆದರಿಕೆ ಹಾಕಿ ಕಳುಹಿಸಿದ ಮರು ದಿನ ರಂಜಿತ್ ಮನೆ ಬಳಿ ಬಂದ ಆರೋಪಿ, ಹಣದ ವಿಚಾರವನ್ನು ಮನೆಯವರು ಅಥವಾ ಬೇರೆಯವರ ಬಳಿ ಹೇಳಿದರೆ, ಬೀದಿ ಹಣವಾಗುತ್ತಿಯಾ ಎಂದು ಬೆದರಿಕೆ ಹಾಕಿದ್ದ. ಅಲ್ಲದೆ, ಆರೋಪಿ ಸಂತೋಷ್, ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅಂಗಡಿ ಬಾಗಿಲು ಮುಚ್ಚಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ರಂಜಿತ್ ದೂರಿನಲ್ಲಿ ಉಲ್ಲೇಖೀಸಿದ್ದರು.