ಬೆಂಗಳೂರು: ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಬರೋಬ್ಬರಿ 700ಕ್ಕೂ ಹೆಚ್ಚು ಮಂದಿಯಿಂದ 25 ಕೋಟಿ ರೂ.ಗೂ ಅಧಿಕ ಹಣ ಹೂಡಿಕೆ ಮಾಡಿಕೊಂಡು ವಂಚಿಸಿದ ಇಬ್ಬರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನಕಪುರದ ಹಾರೋಹಳ್ಳಿ ನಿವಾಸಿ ಪ್ರದೀಪ್ (34), ನಾಗವಾರ ನಿವಾಸಿ ವಂಸತ್ ಕುಮಾರ್ (35) ಬಂಧಿತರು. ತಲೆಮರೆಸಿಕೊಂಡಿರುವ ಸೌಮ್ಯಾ ಎಂಬಾಕೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಬಂಧಿತರಿಂದ 7 ಲಕ್ಷ ರೂ. ನಗದು, ದಾಖಲಾತಿಗಳು ಹಾಗೂ ಕಂಪ್ಯೂಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆರೋಪಿಗಳು 2021ರಿಂದ ಜೆ.ಪಿ.ನಗರದ 9ನೇ ಹಂತದ ದೊಡ್ಡಕಲ್ಲಸಂದ್ರದ ನಾರಾಯಣ ನಗರದಲ್ಲಿ “ಪ್ರಮ್ಯ ಇಂಟರ್ ನ್ಯಾಷನಲ್” ಎಂಬ ಹೆಸರಿನಲ್ಲಿ ಅಕ್ರಮವಾಗಿ ಕಚೇರಿ ತೆರೆದಿದ್ದು, ಇದೇ ಹೆಸರಿನಲ್ಲಿ ವೆಬ್‌ಸೈಟ್ ಕೂಡ ನಡೆಸುತ್ತಿದ್ದರು. ಈ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ಹಣ ಹೂಡಿಕೆ ಮಾಡಿದರೆ ಶೇ.2.5ರಷ್ಟು ಪ್ರತಿ ತಿಂಗಳು ಲಾಭ ಬರುತ್ತದೆ ಎಂಬ ತಲೆಬರಹದಲ್ಲಿ ಆಯ್ದ ಹೂಡಿಕೆದಾರರಿಗೆ ಮಾತ್ರ ಹೂಡಿಕೆಗೆ ಅವಕಾಶ ಇರುತ್ತದೆ ಜಾಹೀರಾತು ನೀಡಿದ್ದರು.
ಜತೆಗೆ ಹೂಡಿಕೆ ಹಣಕ್ಕೆ ಭದ್ರತೆ ನೀಡಲಾಗುತ್ತದೆ, ಹೂಡಿಕೆ ಮಾಡುವ ಹಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಲಾಂಭಾಂಶ ಕೊಡುತ್ತೇವೆ, ಎಫ್.ಡಿ. ಇಟ್ಟ ಹಣಕ್ಕೆ ನಾಲ್ಕು ಪಟ್ಟು ಹೆಚ್ಚು ಹಣ ನೀಡುವುದಾಗಿ, ಶೇ.30ಕ್ಕಿಂತ ಹೆಚ್ಚಿನ ಬಡ್ಡಿ ಕೊಡುವುದಾಗಿ ಜಾಹೀರಾತು ನೀಡಿ, 5 ಸಾವಿರ ರೂ. ನಿಂದ 10 ಲಕ್ಷ ರೂ.ವರೆಗೆ ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಅದರಿಂದ ಬಂದ ಲಾಭದಲ್ಲಿ ವೈಯಕ್ತಿಕವಾಗಿ ಬಳಸಿಕೊಂಡು ವಂಚಿಸಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಹಣ ಕಳೆದುಕೊಂಡಿರುವವರು ಕಚೇರಿಗೆ ಬಂದು ದೂರು ನೀಡಿ: ದಯಾನಂದ್:
ಬಂಧಿತರ ವಿಚಾರಣೆಯಲ್ಲಿ 2021ರಿಂದ ಇದುವರೆಗೂ ಬರೋಬ್ಬರಿ 700ಕ್ಕೂ ಹೆಚ್ಚು ಮಂದಿಯಿಂದ 25 ಕೋಟಿ ರೂ.ಗೂ ಅಧಿಕ ಹಣ ಹೂಡಿಕೆ ಮಾಡಿಕೊಂಡಿದ್ದಾರೆ. ಈ ಹಣದಿಂದ ಬಂದ ಲಾಭದಲ್ಲಿ ಅಂದಾಜು 10 ಕೋಟಿ ರೂ.ಗೂ ಅಧಿಕ ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಖರೀದಿಸಿ, ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಆರೋಪಿಗಳಿಂದ ವಂಚನೆಗೊಳಗಾದವರು ಸಿಸಿಬಿ ಕಚೇರಿ ಅಥವಾ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಂದು ದೂರು ನೀಡಬಹುದು ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.