Advertisement

ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕಿದೆ ಅಳಿವು ಉಳಿವಿನ ಸವಾಲು

06:57 PM Apr 18, 2020 | sudhir |

ಹೊಸದಿಲ್ಲಿ: ಕೋವಿಡ್‌-19 ವೈರಸ್‌ ಚಿಲ್ಲರೆ ವ್ಯಾಪಾರ ಕ್ಷೇತ್ರದ ಮುಂದೆ ಅಳಿವು ಉಳಿವಿನ ಸವಾಲು ಇಟ್ಟಿದೆ. ಬೇಸಗೆಯ ಬೇಡಿಕೆ ಕುದುರುವ ಋತುವಿನಲ್ಲೇ ವಕ್ಕರಿಸಿದ ವೈರಸ್‌ ಅನೇಕ ವ್ಯಾಪಾರ ಮಳಿಗೆಗಳಿಗೆ ಚರಮಗೀತೆ ಹಾಡುವ ಸಾಧ್ಯತೆಯಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಈ ಪೈಕಿ ಅತಿ ದೊಡ್ಡ ಹೊಡೆತ ಬಿದ್ದಿರುವುದು ಉಡುಪು, ಪಾದರಕ್ಷೆ, ಪ್ರಸಾದನದಂಥ ವ್ಯಾಪಾರ ಮಳಿಗೆಗಳಿಗೆ.

Advertisement

ಆಹಾರ ಮತ್ತು ಇದಕ್ಕೆ ಸಂಬಂಧಿಸಿರುವ ಇತರ ವಲಯಗಳು ತಕ್ಕಮಟ್ಟಿಗೆ ಬದುಕುಳಿದಿವೆ. ಔಷಧ ಕ್ಷೇತ್ರ ಹೆಚ್ಚಿನ ಸಮಸ್ಯೆ ಎದುರಿಸಿಲ್ಲ. ಇವೆಲ್ಲ ಅಗತ್ಯ ಸೇವೆಗಳ ಯಾದಿಯಡಿ ಬರುವಂಥವು.

ಆದರೆ ಜವುಳಿ, ಪಾದರಕ್ಷೆ, ಪ್ರಸಾದನ ಸೇರಿದಂತೆ ಐಷಾರಾಮಿ ಸೇವೆಗಳ ಯಾದಿಯಲ್ಲಿರುವ ಬಹುತೇಕ ವ್ಯಾಪಾರಗಳು ಸಂಪೂರ್ಣ ನೆಲಕಚ್ಚಿವೆ. ಆರ್ಥಿಕ ಹಿಂಜರಿತದಿಂದಾಗಿ ಮಾರ್ಚ್‌ಗೂ ಮೊದಲೇ ಈ ವ್ಯಾಪಾರಗಳು ತುಸು ಹಿನ್ನಡೆ ಅನುಭವಿಸಿದ್ದವು. ಆದರೆ ಕೋವಿಡ್‌-19 ತಾಂಡವ ಶುರುವಾದ ಮಾರ್ಚ್‌ ಬಳಿಕ ನಿರಂತರ ಕುಸಿತ ಕಾಣುತ್ತಿವೆ.

ಶಾಪಿಂಗ್‌ ಪ್ರವೃತ್ತಿ ಬದಲು
ಕೋವಿಡ್‌ನಿಂದಾಗಿ ಜನರ ಶಾಪಿಂಗ್‌ ಪ್ರವೃತ್ತಿ ಶಾಶ್ವತವಾಗಿ ಬದಲಾಗಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಮಾರ್ಚ್‌ ತಿಂಗಳೊಂದರಲ್ಲೇ ಚಿಲ್ಲರೆ ವ್ಯಾಪಾರ ವಲಯ ಶೇ. 8.7 ಕುಸಿತ ದಾಖಲಿಸಿದೆ. ಇದರಲ್ಲಿ ಚಿಲ್ಲರೆ ವ್ಯಾಪಾರ ಮಳಿಗೆಗಳು, ಆನ್‌ಲೈನ್‌ ಮಾರುಕಟ್ಟೆ, ಬಾರ್‌ ಮತ್ತು ಹೊಟೇಲುಗಳು ಒಳಗೊಂಡಿವೆ. ಮೂರು ದಶಕಗಳಲ್ಲೇ ಇಷ್ಟು ದೊಡ್ಡ ಮಟ್ಟದ ಕುಸಿತ ಇದೇ ಮೊದಲು ಎನ್ನುತ್ತಿದೆ ‌ ವಾಣಿಜ್ಯ ಇಲಾಖೆ. 2008ರಲ್ಲಿ ಚಿಲ್ಲರೆ ಕ್ಷೇತ್ರ ಇದೇ ಮಾದರಿಯ ಬಿಕ್ಕಟ್ಟನ್ನು ಎದುರಿಸಿತ್ತು. ಆರ್ಥಿಕ ಹಿಂಜರಿತದ ಪರಿಣಾಮವಾಗಿ ಖರೀದಿ ಸಾಮರ್ಥ್ಯ ಕುಸಿದ ಕಾರಣ ಸತತ ಎರಡು ತಿಂಗಳ ಚಿಲ್ಲರೆ ವ್ಯಾಪಾರ ಕ್ಷೇತ್ರ ಶೇ.4 ಕುಸಿತ ಅನುಭವಿಸಿತ್ತು.

ಇದು ಮಹಾದುರಂತದ ಹಿನ್ನೆಲೆಯಲ್ಲಿ ಆಗಿರುವ ಕುಸಿತ. ಕೆಲವು ವ್ಯಾಪಾರ ಮಳಿಗೆಗಳು ಮಾರ್ಚ್‌ ಅಂತ್ಯ ಹಾಗೂ ಎಪ್ರಿಲ್‌ ಮೊದಲ ವಾರದ ತನಕವೂ ತೆರೆದಿದ್ದವು. ಅವುಗಳು ಅನುಭವಿಸಿರುವ ವ್ಯಾಪಾರ ಕುಸಿತದ ಲೆಕ್ಕ ಇನ್ನೂ ಸಿಕ್ಕಿಲ್ಲ. ಅದನ್ನೂ ಸೇರಿಸಿದರೆ ಕುಸಿತದ ಪ್ರಮಾಣ ಇನ್ನೂ ಹೆಚ್ಚುವ ಸಾಧ್ಯತೆಯಿದೆ ಎಂದೆನ್ನುತ್ತಾರೆ ಫೊರೆಸ್ಟರ್‌ ರೀಸರ್ಚ್‌ ಸಂಸ್ಥೆ.

Advertisement

ಖರ್ಚು ಮಾಡುವ ಸಾಮರ್ಥ್ಯದ ಮೇಲಿನ ಭವಿಷ್ಯ

ಆರ್ಥಿಕತೆ ಮರಳಿ ಹಳಿಗೆ ಬಂದ ಬಳಿಕ ಜನರ ಖರ್ಚು ಮಾಡುವ ಸಾಮರ್ಥ್ಯ ಎಷ್ಟು ಕ್ಷಿಪ್ರವಾಗಿ ಹಿಂದಿನ ಸ್ಥಿತಿಗೆ ಬರುತ್ತದೆ ಎನ್ನುವುದರ ಮೇಲೆ ಚಿಲ್ಲರೆ ವ್ಯಾಪಾರ ಕ್ಷೇತ್ರದ ಭವಿಷ್ಯ ನಿಂತಿದೆ. ನೌಕರಿ ಕಳೆದುಕೊಂಡವರು ಪರ್ಯಾಯ ವ್ಯವಸ್ಥೆ ಆಗುವ ತನಕ ಖರ್ಚು ಮಾಡುವ ಸಾಧ್ಯತೆಯಿಲ್ಲ. ಮಾಲ್‌, ಹೊಟೇಲ್‌, ಸಿನೆಮಾ ಮಂದಿರ ಮುಂತಾದೆಡೆ ಜನದಟ್ಟಣೆ ಇರುವ ಕಾರಣ ಜನರು ಇಲ್ಲಿಗೆಲ್ಲ ಹೋಗಲು ಹಿಂದೇಟು ಹಾಕುವ ಸಾಧ್ಯತೆಯೂ ಇದೆ.

ಕೋವಿಡ್‌ನಿಂದ ಉಂಟಾದ ಆರ್ಥಿಕ ಹಿಂಜರಿತದ ಮೊದಲ ಹೊಡೆತ ಬೀಳುವುದೇ ಚಿಲ್ಲರೆ ವ್ಯಾಪಾರ ಮಳಿಗೆಗಳಿಗೆ. ಸಗಟು ಮತ್ತು ದೊಡ್ಡ ವ್ಯಾಪಾರ ಮಹಿಳೆಗೆಗಳು ತಾತ್ಕಾಲಿಕವಾಗಿ ಹಿನ್ನಡೆ ಅನುಭವಿಸಿದರೂ ದೀರ್ಘಾವಧಿಯಲ್ಲಿ ಪುಟಿದೇಳುವ ಸಾಮರ್ಥ್ಯ ಹೊಂದಿವೆ ಮತ್ತು ಭವಿಷ್ಯದಲ್ಲಿ ಅವುಗಳದ್ದೇ ಏಕಸ್ವಾಮ್ಯವಾಗುವ ಸಾಧ್ಯತೆಯೂ ಇದೆ. ಇದು ಚಿಲ್ಲರೆ ಮಾರುಕಟ್ಟೆಗೆ ಕೆಟ್ಟ ಸುದ್ದಿ. ಮಾರುಕಟ್ಟೆಯಲ್ಲಿ ಸ್ಪರ್ಧೆ ಕಡಿಮೆಯಾದಷ್ಟೂ ಶೋಷಣೆ ಹೆಚ್ಚುತ್ತದೆ ಎನ್ನುತ್ತದೆ ಅಧ್ಯಯನ.

ಬೇಡಿಕೆ ಮುಂದೂಡಿಕೆ-ಬೇಡಿಕೆ ನಷ್ಟ
ಮಹಾದುರಂತದಿಂದಾಗಿ ಬೇಡಿಕೆ ಮುಂದೂ ಡಲ್ಪಡುವುದು ಬೇರೆ, ಬೇಡಿಕೆ ಇಲ್ಲದಾಗುವುದು ಬೇರೆ. ಬೇಡಿಕೆ ಮುಂದೂಡಲ್ಪಟ್ಟರೆ ಮುಂದೊಂದು ದಿನ ಕುದುರುವ ನಿರೀಕ್ಷೆ ಇಟ್ಟುಕೊಳ್ಳಬಹುದು. ಆದರೆ ಬೇಡಿಕೆ ಇಲ್ಲವಾದರೆ ವ್ಯಾಪಾರವನ್ನೇ ಮುಚ್ಚುವ ಸ್ಥಿತಿ ಬರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next