Advertisement

ಉಕ್ರೇನ್‌ ವಿಚಾರದಲ್ಲಿ ಭಾರತ ಶಾಂತಿಯಪರ; ಸಚಿವ ಎಸ್‌.ಜೈಶಂಕರ್‌

11:05 PM Apr 06, 2022 | Team Udayavani |

ನವದೆಹಲಿ:“ರಷ್ಯಾ- ಉಕ್ರೇನ್‌ ಕಾಳಗದಲ್ಲಿ ಭಾರತ ಒಂದು ಪಕ್ಷದ ಪರ ನಿಂತಿದೆ ಎಂದು ವಾದಿಸುವುದಿದ್ದರೆ, ನಾವು ಶಾಂತಿಯ ಪರ ನಿಂತಿದ್ದೇವೆ’- ಹೀಗೆಂದು ದೃಢವಾದ ಮಾತುಗಳಲ್ಲಿ ಹೇಳಿದ್ದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌.

Advertisement

ಲೋಕಸಭೆಯಲ್ಲಿ ಬುಧವಾರ ಉಕ್ರೇನ್‌ ಬಿಕ್ಕಟ್ಟಿನ ಬಗ್ಗೆ ನಡೆದ ಚರ್ಚೆಗೆ ಉತ್ತರವಾಗಿ ಮಾತನಾಡಿದ ಅವರು, ಆ ದೇಶದಲ್ಲಿ ತಕ್ಷಣವೇ ಹಿಂಸಾಚಾರ ನಿಲ್ಲಬೇಕು ಮತ್ತು ಶಾಂತಿ ಸ್ಥಾಪನೆಯಾಗಬೇಕು. ಅದು ಭಾರತ ಸರ್ಕಾರದ ನಿಲುವು ಎಂದು ಹೇಳಿದ್ದಾರೆ.

ಯುದ್ಧ ಪೀಡಿತ ಉಕ್ರೇನ್‌ನಿಂದ ಪ್ರಜೆಗಳನ್ನು ತೆರವುಗೊಳಿಸಿದ ಮೊದಲ ರಾಷ್ಟ್ರವೆಂದರೆ ಭಾರತ. ಸರ್ಕಾರದ ಈ ಕ್ರಮವೇ ಇತರ ರಾಷ್ಟ್ರಗಳಿಗೆ ಪ್ರೇರಣೆಯಾಯಿತು ಎಂದು ಹೇಳಿದ್ದಾರೆ.

ಉಕ್ರೇನ್‌ನಲ್ಲಿ ಇದ್ದ ದೇಶದ ವಿದ್ಯಾರ್ಥಿಗಳನ್ನು ತೆರವುಗೊಳಿಸುವ “ಆಪರೇಷನ್‌ ಗಂಗಾ’ ಅತ್ಯಂತ ಸವಾಲಿನದ್ದಾಗಿತ್ತು. ಅದಕ್ಕಾಗಿಯೇ ಕೇಂದ್ರದ ನಾಲ್ವರು ಸಚಿವರು ಅಲ್ಲಿಗೆ ತೆರಳಿದ್ದರು. ಉಕ್ರೇನ್‌ನ ನೆರೆಯ ರಾಷ್ಟ್ರಗಳ ಸರ್ಕಾರಗಳು ಸಹಕರಿಸಿದ ಕಾರಣವೇ ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ:ಜಾರಿ ನಿರ್ದೇಶನಾಲಯ ಸಮನ್ಸ್‌ ಹಿನ್ನೆಲೆ: ಎ.8ರಂದು ಟಿಟಿವಿ ದಿನಕರನ್‌ ವಿಚಾರಣೆ

Advertisement

ಪ್ರಧಾನಿಗೆ ಮೆಚ್ಚುಗೆ:
ಐದು ರಾಜ್ಯಗಳ ಚುನಾವಣಾ ಪ್ರಚಾರದ ನಡುವೆಯೂ, ಪ್ರಧಾನಿ ಮೋದಿಯವರು ಖುದ್ದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮತ್ತು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಜತೆಗೆ ಹಲವು ಬಾರಿ ಮಾತನಾಡಿದ್ದರು. ಹಲವು ಬಾರಿ ಪರಿಶೀಲನಾ ಸಭೆ ನಡೆಸಿ, ಕಾರ್ಯಾಚರಣೆ ಬಗ್ಗೆ ಸಲಹೆ ನೀಡಿದ್ದರು ಎಂದರು ಜೈಶಂಕರ್‌. ಪ್ರಜೆಗಳನ್ನು ಆ ದೇಶದಿಂದ ಸ್ವದೇಶದಿಂದ ಕರೆತಂದ ಮೊದಲ ರಾಷ್ಟ್ರ ಭಾರತ. ಅದುವೇ ಇತರ ರಾಷ್ಟ್ರಗಳಿಗೆ ಪ್ರೇರಣೆಯಾಯಿತು ಎಂದರು.

ಖಂಡನಾರ್ಹ:
ರಷ್ಯಾ- ಉಕ್ರೇನ್‌ ನಡುವೆ ಅಧ್ಯಕ್ಷರ ನಡುವೆ ಮಾತುಕತೆಗೆ ಭಾರತ ಸರ್ಕಾರ ಪ್ರೋತ್ಸಾಹ ನೀಡಿತ್ತು ಎಂದಿದ್ದಾರೆ ಜೈಶಂಕರ್‌. ಬುಚಾದಲ್ಲಿ ನಡೆದ ನಾಗರಿಕರ ಕಗ್ಗೊಲೆ ಖಂಡನಾರ್ಹ. ಈ ಬಗ್ಗೆ ಅಂತಾರಾಷ್ಟ್ರೀಯ ತನಿಖೆಗೆ ಕೇಂದ್ರ ಸರ್ಕಾರ ಬೆಂಬಲ ನೀಡುತ್ತದೆ ಎಂದರು. ಉಕ್ರೇನ್‌ನಿಂದ ವಾಪಸಾಗಿರುವ ಭಾರತದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸುವ ನಿಟ್ಟಿನಲ್ಲಿ ಪೋಲೆಂಡ್‌, ರೊಮೇನಿಯಾ, ಖಜಕಿಸ್ತಾನ, ಹಂಗೇರಿ ಸರ್ಕಾರಗಳ ಜತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು. ವಿದ್ಯಾರ್ಥಿಗಳ ತೆರವು ಕಾರ್ಯಾಚರಣೆ ಬಗ್ಗೆ ರಾಜಕೀಯ ಬಣ್ಣ ನೀಡುತ್ತಿರುವುದು ದುರಂತ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next