Advertisement

ಬೆಳ್ಮಣ್‌ ಟೋಲ್‌ಗೇಟ್‌ ವಿರುದ್ಧ ಪ್ರತಿಭಟನೆಗೆ ವ್ಯಾಪಕ ಬೆಂಬಲ

06:25 AM Oct 06, 2018 | Team Udayavani |

ಬೆಳ್ಮಣ್‌: ಇಲ್ಲಿನ ಟೋಲ್‌ಗೇಟ್‌ ವಿರುದ್ಧ ಅ. 7ರಂದು ನಡೆಯಲಿರುವ ಬ್ರಹತ್‌ ಸಾರ್ವಜನಿಕ ಪ್ರತಿಭಟನೆಗೆ ವಿವಿಧ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.    ಖಾಸಗಿ ಬಸ್ಸು ಮಾಲಕರು ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದ್ದು ಲಾರಿ ಮಾಲಕರು, ಕಾರು, ರಿಕ್ಷಾ ಮಾಲಕರು ತಮ್ಮ ಕಾರ್ಮಿಕರ ಜತೆ  ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. 

Advertisement

ಪ್ರತಿಭಟನೆಯ ರೂಪುರೇಷೆ
ಈ ಹೋರಾಟದ ಬಗ್ಗೆ  ಅಕ್ಕ ಪಕ್ಕದ 27 ಗ್ರಾಮಗಳ  ಧಾರ್ಮಿಕ, ಶಿಕ್ಷಣ ಸಂಸ್ಥೆಗಳು, ವಿವಿಧ ಸಂಘ ಸಂಸ್ಥೆಗಳನ್ನು  ಸಂಪರ್ಕಿಸಲಾಗಿದೆ. ಪ್ರತಿಭಟನೆ  ಬೆಳಿಗ್ಗೆ  9.30ಕ್ಕೆ ಟೋಲ್‌ ಸಂಗ್ರಹದ ನಿರ್ಧರಿತ ಜಾಗವಾದ ಸರಕಾರಿ.ಪ.ಪೂ ಕಾಲೇಜು ಮುಂಭಾಗದ ಹೆದ್ದಾರಿಯಲ್ಲಿ ನಡೆಯಲಿದೆ. ಸುಮಾರು 10 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ. ಮನವಿಯನ್ನು ಸ್ವೀಕರಿಸಲು  ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೋರಾಟದ ನೇತೃತ್ವ ವಹಿಸಿರುವ ಸುಹಾಸ್‌ ಹೆಗ್ಡೆ ತಿಳಿಸಿದ್ದಾರೆ.

ಗುಟ್ಟಾಗಿ ಸರ್ವೆ 
ಟೋಲ್‌ಗಾಗಿ ಪಡುಬಿದ್ರೆಯಿಂದ ಕಾರ್ಕಳದ ವರೆಗೆ ಸುಮಾರು 29 ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 4 ಕಡೆ ಸ್ಥಳವನ್ನು ಗುರುತಿಸಲಾಗಿದ್ದು ಒಂದೂವರೆ ವರ್ಷದ ಹಿಂದೆ ಗುಟ್ಟಾಗಿ ಸರ್ವೆ ನಡೆಸಲಾಗಿದೆ. ಇದಕ್ಕಾಗಿ ಇಲ್ಲಿ ವಾಹನ ಲೆಕ್ಕಾಚಾರ ಹಾಕಲಾಗಿತ್ತು ಎನ್ನಲಾಗಿದೆ.  

ಸರಕಾರದ ವಿರುದ್ಧ  ಸುನಿಲ್‌ ಕುಮಾರ್‌ ಆಕ್ರೋಶ  
ಬೆಳ್ಮಣ್‌:
ನೂತನ ಟೋಲ್‌ಗೇಟ್‌ ಸ್ಥಾಪನೆ ವಿರುದ್ಧ ಬೆಳ್ಮಣ್‌ ಪೇಟೆಯಲ್ಲಿ ಬಿಜೆಪಿ ಶಕ್ತಿ ಕೇಂದ್ರದ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು. 

ಈ ವೇಳೆ ಮಾತನಾಡಿದ  ಕಾರ್ಕಳ ಶಾಸಕ ಸುನಿಲ್‌ ಕುಮಾರ್‌, ರಾಜ್ಯದ ಖಜಾನೆ ಖಾಲಿಯಾಗಿದ್ದು ವೈನ್‌ಶಾಪ್‌ ತೆರೆಯುವ ಮೂಲಕ, ಟೋಲ್‌ ಸ್ಥಾಪನೆ ಮೂಲಕ ಖಜಾನೆ ಭರ್ತಿ ಮಾಡುವ ಉದ್ದೇಶ ಹೊಂದಿದೆ. ಸಂಪೂರ್ಣ ಸರಕಾರಿ ವೆಚ್ಚದಲ್ಲಿ ಪೂರ್ಣಗೊಂಡ ಈ ರಸ್ತೆಗೆ ಮೂರುವರೆ ವರ್ಷದ ಬಳಿಕ ಟೋಲ್‌ ಸಂಗ್ರಹ ಯಾಕಾಗಿ ಎಂದು ಅವರು ಪ್ರಶ್ನಿಸಿದರು. 

Advertisement

ಅಲ್ಲದೆ ರಸ್ತೆ ನಿರ್ಮಾಣದ ಪೂರ್ವದಲ್ಲಿ ಟೋಲ್‌ ಸಂಗ್ರಹಿಸುವ ಮೂಲ ಒಪ್ಪಂದವೇ ಇರಲಿಲ್ಲ ಎಂದರು. ಜತೆಗೆ ರವಿವಾರದ ಪ್ರತಿಭಟನೆಯನ್ನು ಬೆಂಬಲಿಸುವುದಾಗಿ ಹೇಳಿದರು.  

ಜಿಲ್ಲಾ ಪಂಚಾಯತ್‌ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿ ನವೀನ್‌ ನಾಯಕ್‌, ಪಡುಬಿದ್ರೆ ಬಿಜೆಪಿ ನಾಯಕ ಪ್ರಕಾಶ್‌ ಶೆಟ್ಟಿ, ಸೂರ್ಯಕಾಂತ ಶೆಟ್ಟಿ ಮಾತನಾಡಿದರು.

ಜಿಲ್ಲಾ ಪಂಚಾಯತ್‌ ಸದಸ್ಯರಾದ ಸುಮಿತ್‌ ಶೆಟ್ಟಿ, ಉದಯ ಎಸ್‌. ಕೋಟ್ಯಾನ್‌, ಕಾರ್ಕಳ ತಾಲೂಕು ಪಂಚಾಯತ್‌ ಆಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಉಪಾಧ್ಯಕ್ಷ ಗೋಪಾಲ ಮೂಲ್ಯ, ಸದಸ್ಯರಾದ ಪುಷ್ಪಾ ಸತೀಶ್‌, ಆಶಾ ದೇವೇಂದ್ರ ಶೆಟ್ಟಿ, ವಿವಿಧ ಪಂಚಾಯತ್‌ಗಳ ಆಧ್ಯಕ್ಷರು, ಸದಸ್ಯರು, ತಾಲೂಕು ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಕ್ತಿ ಕೇಂದ್ರ ಅಧ್ಯಕ್ಷ ಬೋಳ ಜಯರಾಮ ಸಾಲ್ಯಾನ್‌ ಹಾಗೂ ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಇನ್ನಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಬ್ಯಾರಿಕೇಡ್‌ ಇಟ್ಟು ಸುಂಕ ವಸೂಲಿ
ಏತನ್ಮಧ್ಯೆ ಕೆಆರ್‌ಡಿಸಿಎಲ್‌ನ  ಜತೆ  ಒಡಂಬಡಿಕೆ ಮಾಡಿಕೊಂಡು ಸುಂಕ ವಸೂಲಾತಿಯ ಬಗ್ಗೆ ಗುತ್ತಿಗೆ ವಹಿಸಿಕೊಂಡಿರುವ ಮೈಸೂರಿನ ಮಿತ್ರಾ ಇನೋ ಸೊಲ್ಯೂಷನ್‌ ಸಂಸ್ಥೆ ಈ ಬಗ್ಗೆ  ಪಂಚಾಯತ್‌ನ ಯಾವುದೇ ನಿರಾಪೇಕ್ಷಣ ಪತ್ರದ ಅಗತ್ಯ ಇಲ್ಲದೆ ರಾಜ್ಯ ಹೆದ್ದಾರಿಯಲ್ಲಿ ರಸ್ತೆಗೆ ಅಡ್ಡದಾಗಿ ಬ್ಯಾರಿಗೇಟ್‌ಗಳನ್ನು ಹಾಕಿ ಅ.15ರಿಂದ ಈ ಭಾಗ‌ದಲ್ಲಿ ಸಂಚರಿಸುವ ವಾಹನ ಸವಾರರಿಂದ ಸುಂಕ ವಸೂಲಿಯನ್ನು ಮಾಡಲು ಹೊರಟಿದೆ ಎನ್ನಲಾಗಿದೆ.

ಒಂದಾದ ಬೆಳ್ಮಣ್‌ ಜನ
ಟೋಲ್‌ ಸಂಗ್ರಹಕ್ಕೆ  ಅಗತ್ಯ ಇರುವ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು  ಸ್ಥಳೀಯ ಗುತ್ತಿಗೆದಾರರಿಗೆ ಗುತ್ತಿಗೆ ನೀಡುವ ಸಾಧ್ಯತೆಗಳಿವೆ. ಹೀಗಾಗಿ ಬೆಳ್ಮಣ್‌ ಆಸುಪಾಸಿನ ಯಾವುದೇ ಗುತ್ತಿಗೆದಾರನೂ ಸುಂಕ ವಸೂಲಿ ಕೇಂದ್ರದ ಕಟ್ಟಡ ನಿರ್ಮಾಣದ ಗುತ್ತಿಗೆ ವಹಿಸಿಕೊಳ್ಳಬಾರದಾಗಿ ಈ ಭಾಗದ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಜತೆಗೆ  ಯಾವುದೇ ಕಟ್ಟಡ ನಿರ್ಮಾಣ ಸಾಮಾಗ್ರಿ ವಿತರಕರು ಸಾಮಾಗ್ರಿಯನ್ನೂ ನೀಡ ಕೂಡದು  ಸಿಬ್ಬಂದಿಗೂ ಬಾಡಿಗೆ ಕೋಣೆ ನೀಡದಂತೆ ವಿನಂತಿಸಿಕೊಳ್ಳಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next