Advertisement

ರಾಜಕಾರಣಿಗಳಲ್ಲಿ ವ್ಯಾಪಕವಾದ ಮೌಡ್ಯ

01:45 PM Jul 30, 2018 | |

ಮೈಸೂರು: ಇತ್ತೀಚಿಗೆ ಮೌಡ್ಯ ಎಂಬುದು ರಾಜಕಾರಣಿಗಳಲ್ಲಿ ವ್ಯಾಪಕವಾಗಿದ್ದು, ಧಾರ್ಮಿಕ ಆಚರಣೆಗಳನ್ನು ಖಾಸಗಿಯಾಗಿ ಮಾಡಿಕೊಳ್ಳಬೇಕೆಂಬ ಪರಿಜ್ಞಾನವೂ ಅವರಿಗೆ ಇಲ್ಲದಂತಾಗಿದೆ ಎಂದು ಸಾಹಿತಿ ಪೊ›.ಕಾಳೇಗೌಡ ನಾಗವಾರ ವಿಷಾದ ವ್ಯಕ್ತಪಡಿಸಿದರು.

Advertisement

ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಸಮೈಕ್ಯ ಪಬ್ಲಿಕೇಷನ್ಸ್‌ನಿಂದ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಭಾನುವಾರ ನಾ.ದಿವಾಕರ ಅವರ ಹತ್ತು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ದೇಶದಲ್ಲಿ ಮೂಲಭೂತವಾದ, ಅಸ್ಪೃಶ್ಯತೆ ಹಾಗೂ ಮೌಡ್ಯ ತಾಂಡವವಾಡುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿದೆ. ಯಾರೊಬ್ಬರು ಇದನ್ನು ಪ್ರಶ್ನಿಸುತ್ತಿಲ್ಲ ಮತ್ತು ಕಾನೂನಿನ ಪ್ರಕಾರ ಕ್ರಮಕೈಗೊಳ್ಳುವಂತೆ ಯಾವ ರಾಜಕಾರಣಿಯೂ ಹೇಳುತ್ತಿಲ್ಲ. ಅಂತಹ ನಾಚಿಕೆಗೇಡಿನ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ದೇಶದ ಮೊದಲ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದಲ್ಲಿ 200 ಬ್ರಾಹ್ಮಣರನ್ನು ಸಾಲಾಗಿ ನಿಲ್ಲಿಸಿ ಪಾದಪೂಜೆ ಮಾಡಿದಾಗ, ಇದು ಸಂವಿಧಾನಕ್ಕೆ ಮಾಡಿದ ಅಪಚಾರವೆಂದು ಬಿ.ಆರ್‌.ಅಂಬೇಡ್ಕರ್‌ ಮತ್ತು ಲೋಹಿಯಾ ಅವರು ಸಂಸತ್ತಿನಲ್ಲಿ ಚರ್ಚಿಸಿದ್ದರು.

ಆದರೆ ಇಂದು ಮೌಡ್ಯವೆಂಬುದು ರಾಜಕಾರಣಿಗಳಲ್ಲಿ ವ್ಯಾಪಕವಾಗಿದ್ದು, ಕೆಂಗಲ್‌ ಹನುಮಂತಯ್ಯ ಸೇರಿದಂತೆ ಇಂದಿನ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಒಳಗೊಂಡಂತೆ ಎಲ್ಲರ ತಲೆಯೊಳಗೆ ಮಲವಿದ್ದು, ಧಾರ್ಮಿಕ ಆಚರಣೆಗಳನ್ನು ಖಾಸಗಿಯಾಗಿ ಮಾಡಿಕೊಳ್ಳುವ ಪರಿಜ್ಞಾನವೂ ಇಲ್ಲದಂತಾಗಿದೆ ಎಂದರು.

Advertisement

ಹತ್ತು ಕೃತಿಗಳ ಬಿಡುಗಡೆ: ಕಾರ್ಯಕ್ರಮದ ಅಂಗವಾಗಿ ದೈನ ಸಂಹಾರಕ ಡಾ.ಬಿ.ಆರ್‌. ಅಂಬೇಡ್ಕರ್‌, ತತ್ವಶಾಸ್ತ್ರದ ಬಡತನ, ಗಾಂಧಿ ಮತ್ತು ಅಸ್ಪಶ್ಯರ ವಿಮೋಚನೆ, ಜಾತಿ ಮತ್ತು ಪ್ರಜಾತಂತ್ರ, ದಮನಿತ ಹಿಂದೂಗಳು,

ಜಾಗತೀಕರಣ ಸಂದರ್ಭದಲ್ಲಿ ಅಭಿವೃದ್ಧಿ ಮತ್ತು ಅಧಿಕಾರ ರಾಜಕಾರಣ, ವೈಜ್ಞಾನಿಕ ಸಮಾಜವಾದ ಮತ್ತು ಕಾಲ್ಪನಿಕ ಸಮಾಜವಾದ, ಭಗತ್‌ಸಿಂಗ್‌ ವೀರ್‌ ಸಾವರ್ಕರ್‌, ನೋಟು ರದ್ಧತಿ ಮತ್ತು ನವ ಉದಾರವಾದಿ ಆರ್ಥಿಕ ನೀತಿ, ಸಮಾಜ ಬದಲಾವಣೆ ಮತ್ತು ಯುವಜನತೆ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಮಾರ್ಕ್ಸ್ವಾದಿ ಚಿಂತಕ ಪೊ›.ಕೆ.ಪಿ. ವಾಸುದೇವನ್‌, ಅನುವಾದಕ ಬಿ.ಆರ್‌.ಮಂಜುನಾಥ್‌, ವಕೀಲ ಜೀರಹಳ್ಳಿ ರಮೇಶಗೌಡ, ಬಾರುಕೋಲು ಪಾಕ್ಷಿಕ ಪತ್ರಿಕೆ ಸಂಪಾದಕ ವಿಪ್ಲವ ಹಾಜರಿದ್ದರು. 

ಧರ್ಮ ವೈಯಕ್ತಿಕ ವಿಚಾರ, ಅದನ್ನು ರಾಜಕೀಯ ಮತ್ತು ಸಾಮಾಜಿಕವಾಗಿ ಬೆರೆಸುವ ಪ್ರಯತ್ನಗಳು ನಡೆಯುತ್ತಿವೆ. ಧರ್ಮ ಮತ್ತು ರಾಜಕೀಯವನ್ನು ಬೆರೆಸಿದವರು ಸಾವರ್ಕರ್‌. ಅದನ್ನೇ ಎಲ್ಲರೂ ಪ್ರತಿಪಾದಿಸುತ್ತಿದ್ದಾರೆ. ಇದರ ವಿರುದ್ಧ ನಾವು ಹೋರಾಡಬೇಕಿದೆ.
-ವಿ.ಲಕ್ಷ್ಮಿನಾರಾಯಣ, ಅಖೀಲ ಭಾರತ ಪ್ರಜಾವೇದಿಕೆ ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next