ಇತ್ತೀಚೆಗೆ ಒಡಿಶಾದ ಸಂಭಲ್ಪುರದ ರ್ಯಾಲಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರನ್ನು ತಪಾಸಣೆ ಮಾಡಿದ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಮೊಹಮ್ಮದ್ ಮೌಸಿನ್ ಅವರನ್ನು ಅಮಾನತುಗೊಳಿಸಿರುವ ಚುನಾವಣಾ ಆಯೋಗದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, “ನೀತಿ ಸಂಹಿತೆಯು, ಜನಪ್ರತಿನಿಧಿಗಳು ಸರ್ಕಾರಿ ವಾಹನಗಳ ಉಪಯೋಗಿಸುವುದನ್ನು ನಿರ್ಬಂಧಿಸುತ್ತದೆ. ಅಂಥ ಸಂದರ್ಭದಲ್ಲಿ, ಪ್ರಧಾನಿಯಾದರೂ ಸರಿ, ಅವರ ವಾಹನವನ್ನು ತಪಾಸಣೆಗೊಳಿಸಲು ಅವಕಾಶವಿದೆ. ತಮ್ಮ ವಿಮಾನದಲ್ಲಿ ದೇಶಕ್ಕೆ ಕಾಣಬಾರದು ಎನ್ನುವಂಥ ಅದ್ಯಾವ ಸಾಮಗ್ರಿಯನ್ನು ಮೋದಿ ಕೊಂಡೊಯ್ದಿದ್ದರು’ ಎಂದು ಪ್ರಶ್ನಿಸಿದೆ.
ಇನ್ನು, ಆಮ್ ಆದ್ಮಿ ಪಾರ್ಟಿ (ಆಪ್) ಕೂಡ ಟ್ವಿಟರ್ ಮೂಲಕ ದಾಳಿ ಮಾಡಿದ್ದು, “ತಪಾಸಣೆ ನಡೆಸಿದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದರೆ, ದೇಶವನ್ನು ಕಾಯಬೇಕಾದ ಚೌಕಿದಾರ ಸ್ವತಃ ತಾನೇ ಪ್ರತ್ಯೇಕ ರಕ್ಷಣೆಯಲ್ಲಿದ್ದಾನೆ ಎಂದರ್ಥ’ ಎಂದು ಕುಟುಕಿದೆ.
ಅತ್ತ, “ಈ ಬೆಳವಣಿಗೆ ಬಗ್ಗೆ ಭುವನೇಶ್ವರದಲ್ಲಿ ಪ್ರತಿಕ್ರಿಯಿಸಿರುವ ಅಧಿಕಾರಿಯೊಬ್ಬರು, ಪ್ರಧಾನಿ ಹೆಲಿಕಾಪ್ಟರ್ ತಪಾಸಣೆಯು ಚುನಾವಣಾ ಆಯೋಗದ ನಿಯಮಗಳ ವ್ಯಾಪ್ತಿಗೊಳಪಡು ವುದಿಲ್ಲ. ಇತ್ತೀಚೆಗೆ, ಒಡಿಶಾದಲ್ಲಿ ಸಿಎಂ ನವೀನ್ ಪಟ್ನಾಯಕ್ ಹೆಲಿಕಾಪ್ಟರ್, ಸಂಭಲ್ಪುರದಲ್ಲಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೆಲಿಕಾಪ್ಟರ್‌ಗಳನ್ನೂ ತಪಾಸಣೆಗೊಳಪಡಿಸ ಲಾಗಿತ್ತು’ ಎಂದಿದ್ದಾರೆ.
ಧರ್ಮೇಂದ್ರ ರಗಳೆ
ಇತ್ತೀಚೆಗೆ ಸಂಬಲ್ಪುರದಲ್ಲಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ರವರ ಹೆಲಿಕಾಪ್ಟರ್ ತಪಾಸಣೆಗೊಳಪಡಿಸುವಾಗ ಸೀಲ್ ಮಾಡಿದ ಸೂಟ್‌ಕೇಸ್ ಪತ್ತೆಯಾಗಿ ರುವುದು ಹಾಗೂ ತಪಾಸಣೆ ವೇಳೆ ಭದ್ರತಾ ಪಡೆಗಳೊಂದಿಗೆ ಸಚಿವ ಪ್ರಧಾನ್ ಅನುಚಿತವಾಗಿ ವರ್ತಿಸಿದ್ದರ ವಿರುದ್ಧ ಬಿಜು ಜನತಾದಳ (ಜಿಜೆಡಿ) ಚುನಾವಣಾ ಆಯೋಗಕ್ಕೆ ದೂರು ನೀಡಿದೆ.