Advertisement

ಬೆಳ್ತಂಗಡಿ ತಾಲೂಕಿನ ಬಂದಾರು, ಕಣಿಯೂರು ವ್ಯಾಪ್ತಿಯಲ್ಲಿ ವ್ಯಾಪಕ ಹಾನಿ

10:29 PM May 04, 2020 | Sriram |

ಉಪ್ಪಿನಂಗಡಿ: ರವಿವಾರ ಸಂಜೆ ಬೀಸಿದ ಭಾರೀ ಗಾಳಿಗೆ ಬೆಳ್ತಂಗಡಿ ತಾಲೂಕಿನ ಬಂದಾರು ಹಾಗೂ ಕಣಿಯೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ವ್ಯಾಪಕ ಹಾನಿ ಸಂಭವಿಸಿವೆ. ನೂರಾರು ಅಡಿಕೆ ಮರಗಳು ಧರೆಗುರುಳಿದಿದ್ದು, ಶಾಲೆ ಸಹಿತ ಹಲವು ಮನೆ, ಅಂಗಡಿಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

Advertisement

ಭಾನುವಾರ ಸಂಜೆ ಭಾಗದಲ್ಲಿ ಮಳೆಯೊಂದಿಗೆ ಸುಂಟರಗಾಳಿ ಬೀಸಿದ್ದು, ಇದರಿಂದಾಗಿ ಬಂದಾರು ಸರಕಾರಿ ಹಿ.ಪ್ರಾ. ಶಾಲೆಯ ಹಂಚುಗಳು ಹಾರಿ ಹೋಗಿವೆ. ಬಂದಾರು ಗ್ರಾ.ಪಂ. ಕಟ್ಟಡದ ಶೀಟ್‌ಗಳು ಹಾರಿಹೋಗಿದ್ದು, ಬಂದಾರು ಪರಿಸರದಲ್ಲಿರುವ ಚೇತನ್‌ ಅವರ ಅಂಗಡಿ ಕಟ್ಟಡದ ಸುಮಾರು 80ರಷ್ಟು ಸಿಮೆಂಟ್‌ ಶೀಟ್‌ಗಳು, ನೀಲಯ್ಯ ಗೌಡ, ಕರಿಯ ಗೌಡ ಅವರ ಅಂಗಡಿಗಳ ಶೀಟ್‌ಗಳು, ಮೋಹನ ಎಂಬವರ ಹೊಟೇಲ್‌ನ ಹಂಚು, ರಘು ಅವರ ಅಂಗಡಿಯ ಹಂಚುಗಳು, ಪ್ರಯಾಣಿಕರ ತಂಗುದಾಣದ ಶೀಟ್‌ಗಳು ಹಾರಿಹೋಗಿವೆ. ಬಂದಾರಿನ ಪೇರಲ್ತಪಲಿಕೆಯ ಈಸುಬು ಅವರ ಮನೆಯ ಮೇಲೆ ಮರ ಬಿದ್ದು ಹಂಚುಗಳು ಪುಡಿಯಾಗಿವೆ. ಹಮೀದ್‌ ಅವರ ಶೌಚಾಲಯದ ಸಿಮೆಂಟ್‌ ಶೀಟ್‌ಗಳು ಹಾನಿಗೊಂಡಿವೆ. ಕೆರೆಮಜಲು ಎಂಬಲ್ಲಿ ರವಿ ಪಾಂಗಣ್ಣಾಯ ಅವರ ತೋಟದಲ್ಲಿ ಹಲವು ಅಡಿಕೆ ಗಿಡಗಳು ಧರೆಗುರುಳಿವೆ. ಕೊಪ್ಪದ ಬೈಲು ಸಹಿತ ಮೊಗ್ರು ಗ್ರಾಮದ ಹಲವು ಕಡೆ ಕೃಷಿ ನಾಶ ಸಂಭವಿಸಿದೆ. ಅಂಡೆಕೇರಿ ಎಂಬಲ್ಲಿ ಆಟೋ ರಿಕ್ಷಾದ ಮೇಲೆ ಮರ ಉರುಳಿ ಬಿದ್ದಿದ್ದು, ಆಟೋ ಜಖಂಗೊಂಡಿದೆ. ಹಲವು ಕಡೆ ಮರಗಳು, ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ.

ಕಣಿಯೂರು ಗ್ರಾ.ಪಂ. ವ್ಯಾಪ್ತಿಯ ಕುದ್ದೊಟ್ಟು ಎಂಬಲ್ಲಿ ಯಮುನಾ ಅವರ ಮನೆಯ ಹಂಚುಗಳು ಹಾರಿ ಹೋಗಿದ್ದು, ಪೊಡಿಯ ಹಾಗೂ ಜಾನಕಿ ಅವರ ಮನೆಯ ಮೇಲ್ಚಾವಣಿಗೆ ಹಾನಿ ಸಂಭವಿಸಿದೆ. ಹಲವು ಕಡೆ ಕೃಷಿ ಹಾನಿಯೂ ಸಂಭವಿಸಿದೆ. ಕಣಿಯೂರು ಗ್ರಾಮಕರಣಿಕ ಸತೀಶ್‌ ಹಾಗೂ ಗ್ರಾಮ ಸಹಾಯಕ ಬಾಲಕೃಷ್ಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಕಣಿಯೂರು ಗ್ರಾ.ಪಂ. ಅಧ್ಯಕ್ಷ ಸುನೀಲ್‌ ಕಣಿಯೂರು, ಬಂದಾರು ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು. ಸ್ಥಳಕ್ಕೆ ಆಗಮಿಸಿದ ವಿಧಾನಪರಿಷತ್‌ ಸದಸ್ಯ ಹರೀಶ ಕುಮಾರ್‌ ಸಂತ್ರಸ್ತ 4 ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್‌ ವಿತರಿಸಿದರು.

ಶಾಸಕರ ಸಹಾಯಹಸ್ತ
ಕಣಿಯೂರು ಹಾಗೂ ಬಂದಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾನಿಗೊಂಡ ಪ್ರದೇಶಗಳಿಗೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆ ಹಾನಿಯಾದ ಕುಟುಂಬದವರಿಗೆ ಸ್ಥಳದಲ್ಲಿಯೇ ವೈಯಕ್ತಿಕವಾಗಿ ಸಹಾಯಧನ ನೀಡಿದರು ಹಾಗೂ ಸರಕಾರದಿಂದಲೂ ಪರಿಹಾರ ದೊರಕಿಸಿಕೊಡುವ ಭರವಸೆ ಇತ್ತರು.

Advertisement
Advertisement

Udayavani is now on Telegram. Click here to join our channel and stay updated with the latest news.

Next