ಕಾಸರಗೋಡು: ಕಾಸರಗೋಡು ಜಿಲ್ಲೆಗೆ ಮಾದಕ ದ್ರವ್ಯ ಗಾಂಜಾ ಹರಿದು ಬರುತ್ತಿದ್ದು, ವ್ಯವಸ್ಥಿತ ಮಾಫಿಯಾ ತಂಡ ಗಾಂಜಾ ಸಾಗಾಟದಲ್ಲಿ ಸಕ್ರಿಯ ವಾಗಿದೆ. ಜಿಲ್ಲೆಯ ವಿವಿಧೆಡೆಗಳಿಂದ ವಶಪಡಿಸಿ ಕೊಂಡಿದ್ದರೂ, ಬಯಲಾಗುವ ಪ್ರಕರಣಕ್ಕಿಂತಲು ಹೆಚ್ಚಿನ ಪ್ರಕರಣಗಳು ಬಯಲಾಗುವುದೇ ಇಲ್ಲ. ಕಾಸರಗೋಡು ಜಿಲ್ಲೆಯಲ್ಲಿ 12 ವರ್ಷದ ಬಾಲಕ ಕೂಡ ಗಾಂಜಾ ಗುಲಾಮನಾಗಿದ್ದಾನೆಂದರೆ ಇದರ ಗಂಭೀರತೆಯನ್ನು ಅರ್ಥೈಸಿಕೊಳ್ಳಬಹುದು.
ಕಾಸರಗೋಡು ಜಿಲ್ಲೆಯಲ್ಲಿ 12 ವರ್ಷದ ಬಾಲಕನಿಗೆ ಕೂಡ ಮಾದಕ ದ್ರವ್ಯದ ಚಟ ಹಿಡಿದಿದೆ ಎಂದು ಇತ್ತೀಚೆಗೆ ನಡೆಸಿದ ಸರ್ವೆಯಲ್ಲಿ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 800 ಕಿಲೋ ಗಾಂಜಾ ವಶಕ್ಕೆ ತೆಗೆದುಕೊಳ್ಳಲಾಗಿದೆ.
ವಿದ್ಯಾರ್ಥಿಗಳಲ್ಲಿ ಮದ್ಯಗಿಂತಲೂ ಮಾದಕ ದ್ರವ್ಯ ಬಳಕೆ ಅಧಿಕವಾಗುತ್ತಿದೆ. ಸುಲಭವಾಗಿ ಸಾಗಾಟ, ಬಳಸಲು ಸುಲಭ ಮತ್ತು ಅಧಿಕ ಮಾದಕತೆ ಲಭಿಸುತ್ತದೆ ಎಂಬ ಕಾರಣದಿಂದ ಗಾಂಜಾ ಸಹಿತ ಮಾದಕ ದ್ರವ್ಯ ಬಳಕೆ ಹೆಚ್ಚುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಬೊಟ್ಟು ಮಾಡುತ್ತಿದ್ದಾರೆ. ಕಾಸರಗೋಡು ಜಿಲ್ಲೆಯಿಂದಲೂ ಭಾರೀ ಪ್ರಮಾಣದಲ್ಲಿ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ. ಅಂತಾರಾಜ್ಯ ಮಾದಕ ಸಾಗಾಟದಾರರನ್ನು ಬಂಧಿಸಿ ವಾಹನಗಳನ್ನು ವಶಪಡಿಸಲಾಗಿದೆ. ಶಿಕ್ಷಣ ಸಂಸ್ಥೆಗಳ ಪರಿಸರದಲ್ಲಿ ಮಾದಕ ದ್ರವ್ಯ ಮಾರಾಟ ಮಾಡುವವರನ್ನು ಬಂಧಿಸಲು ಶ್ಯಾಡೋ ಪೊಲೀಸ್ ವಿಭಾಗವನ್ನು ರಚಿಸಲಾಗಿದ್ದು, ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ.
ರಾಜ್ಯ ಯುವಜನ ಆಯೋಗ ಮದ್ಯ ಹಾಗೂ ಮಾದಕ ದ್ರವ್ಯ ಮೊದಲಾದವುಗಳ ಸೇವನೆಯಿಂದ ತಲೆದೋರುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಯುವಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಿ ಅಭಿಯಾನ ನಡೆಸುತ್ತಿದೆ.
ಇದರ ಅಂಗವಾಗಿ ಜಿಲ್ಲಾ ಮಟ್ಟದ ರ್ಯಾಲಿಗಳು, ಸಮಾವೇಶಗಳು, ತಿಳಿವಳಿಕೆ ಶಿಬಿರಗಳೂ ನಡೆದಿವೆ. ಮಾದಕ ದ್ರವ್ಯ ವಿರುದ್ಧ ಸಾಮೂಹಿಕ ಓಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು, ಯುವಜನ ಸಂಘಟನೆಗಳು, ಕುಟುಂಬಶ್ರೀ, ಎನ್.ಸಿ.ಸಿ, ಎನ್.ಎಸ್.ಎಸ್, ರೆಸಿಡೆನ್ಸ್ ಅಸೋಸಿಯೇಶನ್, ಸಮಾಜ ಸೇವಾ ಸಂಘಟನೆಗಳು, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮೊದಲಾದವುಗಳ ಸಹಕಾರದೊಂದಿಗೆ ಮಾದಕ ವಿರುದ್ಧ ಅಭಿಯಾನ ನಡೆಯುತ್ತಿದೆ.
ಕಾಲೇಜು ಕ್ಯಾಂಪಸ್‌ಗಳಲ್ಲಿ ಮದ್ಯ, ಮಾದಕ ಮುಕ್ತಗೊಳಿಸಲು ಸೇಪ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್ ಎಂಬ ಕಾರ್ಯಕ್ರಮವೊಂದನ್ನು ಆಯೋಜಿಸಲಾಗುತ್ತಿದೆ. ಶಾಲೆಗಳಲ್ಲೂ, ಕಾಲೇಜುಗಳಲ್ಲೂ ವಿಚಾರಗೋಷ್ಠಿಗಳು, ನಾಟಕ, ಕಿರು ಚಿತ್ರ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಚಿತ್ರ ರಚನೆ, ಪ್ರಬಂಧ, ಭಾಷಣ ಸ್ಪರ್ಧೆಗಳನ್ನು ನಡೆಸಲಾಗುತ್ತಿದ್ದರೂ, ಮಾದಕ ದ್ರವ್ಯ ಸೇವನೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ.
ಮಾದಕ ದ್ರವ್ಯ ಬೆರೆತ ಮಿಠಾಯಿ, ಚೂಯಿಂಗಂ, ಜ್ಯೂಸ್ ಮೊದಲಾದವು ಗಡಿ ದಾಟಿ ಕಾಸರಗೋಡು ಜಿಲ್ಲೆಗೆ ಹರಿದು ಬರುತ್ತಿವೆ. ಅನ್ಯ ರಾಜ್ಯಗಳ ಕಾರ್ಮಿಕರು ಗಾಂಜಾ, ಪಾನ್ ಮಸಾಲ ಮೊದಲಾದ ಮಾದಕ ವಸ್ತುಗಳನ್ನು ಜಿಲ್ಲೆಗೆ ಸಾಗಿಸುತ್ತಿದ್ದಾರೆ. ಜಿಲ್ಲೆಯ ಶಾಲಾ ವಿದ್ಯಾರ್ಥಿಗಳನ್ನು ಗುರಿಯಿರಿಸಿಕೊಂಡು ಮಾದಕ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಜಿಲ್ಲೆಯ ಶಾಲೆಗಳಲ್ಲಿ ಮಾದಕ ವಿರುದ್ಧ ಕ್ಲಬ್‌ಗಳನ್ನು ರೂಪೀಕರಿಸಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ನಡೆಸಲಾಗುತ್ತಿದೆ.