ಬೆಂಗಳೂರು: ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರಿ ಕಂದಾಯ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಸಕ್ರಮಗೊಳಿಸುವ ಸಂಬಂಧ ಅರ್ಜಿ ಸಲ್ಲಿಸಲು ಫೆ.15 ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಗರ ಮತ್ತುಗ್ರಾಮೀಣ ಅಕ್ರಮ-ಸಕ್ರಮದಡಿ ಅರ್ಜಿ ಸಲ್ಲಿಸಲು ಇನ್ನೂ ಕಾಲಾವಕಾಶ ಬೇಕು ಎಂದು ಬಹುತೇಕ ಶಾಸಕರು ಅಭಿಪ್ರಾಯಪಟ್ಟಿದ್ದರಿಂದ ಫೆ.15 ರವರೆಗೂ ಗಡುವು ವಿಸ್ತರಿಸಲಾಗಿದೆ ಎಂದು ಹೇಳಿದರು.
ಫೆ.15 ರ ಗಡುವು ಮುಗಿದ ತಕ್ಷಣ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡ ಪ್ರಕರಣ ಸಕ್ರಮಗೊಳಿಸಲು ತ್ವರಿತ ಗತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು. ಅರ್ಜಿ ವಿಲೇವಾರಿ ನಂತರ ಹಕ್ಕುಪತ್ರ ಕೊಡುವ ಸಂಬಂಧ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಸಭೆ ನಡೆಸಿದ್ದು ಉಳಿದ ಜಿಲ್ಲೆಗಳಲ್ಲೂ ಸಭೆ ನಡೆಸಿ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲವು ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಕೆಯಲ್ಲೂ ಸಮಸ್ಯೆಯಾಗಿದೆ. ಆದರೆ, ನಾನು ಭೂ ರಹಿತರು, ವಸತಿ ರಹಿತರಿಗೆ ನ್ಯಾಯ ಒದಗಿಸುವವರೆಗೂ ಬಿಡುವುದಿಲ್ಲ ಎಂದು ಹೇಳಿದರು.
ಇನಾಂ ರದ್ಧತಿ ಕಾಯ್ದೆಯ 14 ನೇ ಸೆಕ್ಷನ್‌ಗೆ ತಿದ್ದುಪಡಿ ತಂದು ಅರ್ಜಿ ಸಲ್ಲಿಸದೇ ಇರುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡುವ ಬಗ್ಗೆಯೂ ಚರ್ಚೆಗಳು ನಡೆದಿವೆ. ಬೆಳಗಾವಿ, ಹಾವೇರಿ ಧಾರವಾಡ ಜಿಲ್ಲೆಗಳಲ್ಲಿ 2 ರಿಂದ 3 ಲಕ್ಷ ಮಂದಿ ಇನಾಂ ಭೂಮಿ ಪಡೆದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಹೊಸದಾಗಿ ಘೋಷಿಸಿರುವ 50 ತಾಲೂಕುಗಳು ಈ ಮಾಸಂತ್ಯಕ್ಕೆ ಕಾರ್ಯನಿರ್ವಹಿಸಲಿವೆ. ಸ್ವಂತ ಕಟ್ಟಡ ಇಲ್ಲದ ಕಡೆ ಬಾಡಿಗೆ ಕಟ್ಟಡ ಪಡೆಯಲು ಸೂಚಿಸಲಾಗಿದೆ. ಮೂಲಸೌಕರ್ಯಕ್ಕಾಗಿ ಪ್ರತಿ ತಾಲೂಕಿಗೆ 5 ಕೋಟಿ ರೂ. ನೆರವು ಒದಗಿಸಲಾಗಿದೆ. ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಆಯ್ಕೆಯಡಿ 169 ತಹಸೀಲ್ದಾರರು ನೇಮಕಗೊಂಡು ತರಬೇತಿ ಪಡೆಯುತ್ತಿರುವುದರಿಂದ ಹೊಸ ತಾಲೂಕುಗಳಿಗೆ ತಹಸೀಲ್ದಾರರ ಕೊರತೆಯೂ ಇರುವುದಿಲ್ಲ ಎಂದು ತಿಳಿಸಿದರು. ಮುಂದಿನ ತಿಂಗಳು ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನ ನಡೆಯಲಿದ್ದು ಸದ್ಯದಲ್ಲೇ ದಿನಾಂಕ ನಿಗದಿಗೊಳಿಸಲಾಗುವುದು ಎಂದು ಹೇಳಿದರು.