Advertisement

ಅವಧಿ ವಿಸ್ತರಣೆ ಇಂದು ನಿರ್ಣಯ?

07:49 AM Aug 04, 2020 | Suhan S |

ಬೆಂಗಳೂರು: ಬಿಬಿಎಂಪಿಯ ತಿಂಗಳ ಮಾಸಿಕ ಸಭೆ (ಆ.4)ಮಂಗಳವಾರ ನಡೆಯಲಿದ್ದು, ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಪಾಲಿಕೆ ಸದಸ್ಯರ ಅಧಿಕಾರ ಅವಧಿ ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಕೌನ್ಸಿಲ್‌ ನಿರ್ಣಯ ಹಾಗೂ ಕರಡು ಮಂಡನೆಗೆ ಆ.10ರವರೆಗೆ ಮಾತ್ರ ಅವಕಾಶ ಇದೆ. ಹೀಗಾಗಿ, ಇಂದು ನಡೆಯಲಿರುವ ಸಭೆ ಕುತೂಹಲ ಮೂಡಿಸಿದೆ.

Advertisement

ಕೌನ್ಸಿಲ್‌ ಸಭೆಯ ಅಜೆಂಡಾದಲ್ಲಿರುವ ಬಹುತೇಕ ವಿಷಯಗಳು ಈಗಾಗಲೇ ಚರ್ಚೆಯಾಗಿವೆ. ಬಿಬಿಎಂಪಿ ಕಟ್ಟಡಗಳ ಉಪವಿಧಿ -2019 (ಕರಡು), ಶೇ.2ರಷ್ಟು ನಗರ ಭೂಸಾರಿಗೆ ಉಪಕರ, ಒಎಫ್ಸಿ ದರ ನಿಗದಿ ಮಾಡುವ ವಿಷಯಗಳು ಈ ಬಾರಿಯ ಕೌನ್ಸಿಲ್‌ ಸಭೆಯ ಅಜೆಂಡಾದಲ್ಲೂ ಇವೆ.

ನಗರದಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವೈದ್ಯಕೀಯ ಹಾಗೂ ಸ್ಯಾನಿಟೈಸರ್‌ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಪ್ರಸ್ತಾವನೆ ಮತ್ತೆ ಮುನ್ನೆಲೆಗೆ ಬಂದಿದೆ. ನಗರದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ತ್ಯಾಜ್ಯ ಹೆಚ್ಚಾಗುತ್ತಿದ್ದು, ಇದನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಪಾಲಿಕೆ ಮುಂದಾಗಿದೆ. ಆದರೆ, ಪೂರ್ವ ವಲಯದಲ್ಲಿ ಮಾತ್ರ ಈ ಯೋಜನೆ ಪ್ರಕ್ರಿಯೆ ಅಂತಿಮವಾಗಿದೆ. ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಇನ್ನು ಆರು ತಿಂಗಳು ವಿಸ್ತರಿಸುವುದನ್ನು ಮತ್ತು 2005-2006ರಿಂದ 2015- 2016ರ ರವರೆಗಿನ ಲೆಕ್ಕಪರಿಶೋಧನಾ ವರದಿಗಳನ್ನು ಕೌನ್ಸಿಲ್‌ ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.

ಆರು ತಿಂಗಳ ವಿಸ್ತರಣೆಗೆ ನಿರ್ಣಯ?: ಮೇಯರ್‌ ಎಂ. ಗೌತಮ್‌ಕುಮಾರ್‌ ಸೇರಿದಂತೆ ಎಲ್ಲ ಪಾಲಿಕೆ ಸದಸ್ಯರ ಅಧಿಕಾರ ಅವಧಿ ಇದೇ ಸೆ.10ಕ್ಕೆ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಇನ್ನು ಆರು ತಿಂಗಳ ಅಧಿಕಾರ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಎಲ್ಲ ಪಕ್ಷದ ಸದಸ್ಯರೂ ಒಂದಾಗಿರುವ ಹಿನ್ನೆಲೆಯಲ್ಲಿ ಇಂದು ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಲೆಕ್ಕ ಪರಿಶೋಧನಾ ವರದಿ :  ಪಾಲಿಕೆಯ ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲಿ ವಲಯಗಳ ಕಚೇರಿಗಳಿಂದ ಲೆಕ್ಕಪರಿಶೋಧನಾ ವರದಿಗೆ ಅನುಪಾಲನಾ ವರದಿಯನ್ನು ಆಕ್ಷೇಪಣೆ ಮತ್ತು ವಸೂಲಾತಿ ಮೊತ್ತಗಳಿಗೆ ಸಂಬಂಧಿಸಿದ ವಿಷಯವೂ ಅಜೆಂಡಾದಲ್ಲಿದೆ. ಅನುಪಾಲನಾ ವರದಿಯನ್ನು ವಲಯದ ಅಧಿಕಾರಿಗಳ ಪಡೆದು, ಅವುಗಳನ್ನು ಪರಿಶೀಲಿಸಿ ಹಂತ , ಹಂತವಾಗಿ ವಿವಿಧ ಕಡತಗಳಲ್ಲಿ ಆಕ್ಷೇಪಣೆ ಮತ್ತು ವಸೂಲಾತಿ ಮೊತ್ತವನ್ನು ಮಂಡಿಸಲಾಗಿದೆ. ಇವುಗಳನ್ನು ಲೆಕ್ಕಪತ್ರ ಸ್ಥಾಯಿ ಸಮಿತಿಯಿಂದ ಅನುಮೋದನೆ ಪಡೆದುಕೊಳ್ಳಬೇಕಾಗಿರುತ್ತದೆ. ಅಲ್ಲದೆ, ಮುಖ್ಯ ಲೆಕ್ಕಪರಿಶೋಧಕರ ಮೂಲಕ ರಾಜ್ಯ ಲೆಕ್ಕಪತ್ರ ಇಲಾಖೆ ಪ್ರಧಾನ ನಿರ್ದೇಶಕರು, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಹಲವರಿಗೆ ಕಳುಹಿಸಬೇಕಾಗಿರುತ್ತದೆ. ಒಟ್ಟು 144 ಕಡತಗಳಲ್ಲಿನ ಆಕ್ಷೇಪಣೆ ಮೊತ್ತವು 411,95,83,606 ರೂ. ಮತ್ತು ವಸೂಲಾತಿ ಮೊತ್ತ 21,40,81,26 ರೂ. ಇದೆ. ಈ ವಿಷಯ ಸಹ ಅನುಮೋದನೆಗೊಳ್ಳುವ ಸಾಧ್ಯತೆ ಇದೆ. ಬಿಬಿಎಂಪಿ ವ್ಯಾಪ್ತಿಯ ವಿವಿಧ ವಿಭಾಗಗಳಲ್ಲಿ ಉದ್ದೇಶಕ್ಕಿಂತ ಹೆಚ್ಚು ಅನುದಾನ ಬಳಸಿರುವುದು ಹಾಗೂ ನಿಗದಿಗಿಂತ ಹೆಚ್ಚು ಮೊತ್ತ ಬಳಕೆಯಾಗಿರುವ ವ್ಯತ್ಯಾಸ ಮೊತ್ತದ ವರದಿ ಇದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next