Advertisement

ತಾಯಿ ಭಾಗ್ಯ ಯೋಜನೆ ವಿಸ್ತರಣೆ

10:20 AM Dec 06, 2017 | |

ಕಲಬುರಗಿ: ಆರೋಗ್ಯ ಸಂಸ್ಥೆಗಳಲ್ಲಿ ಸುರಕ್ಷಿತ ಹೆರಿಗೆ ಮಾಡಿಸುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ
ಜಾರಿಗೊಳಿಸಿರುವ ತಾಯಿ ಭಾಗ್ಯ ಯೋಜನೆಯನ್ನು ಇಎಸ್‌ಐ ಆಸ್ಪತ್ರೆಗೆ ವಿಸ್ತರಿಸಲಾಗುತ್ತಿದೆ ಎಂದು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ತಿಳಿಸಿದರು.

Advertisement

ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ತಾಯಿ ಭಾಗ್ಯ ಯೋಜನೆ ವಿಸ್ತರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆರಿಗೆಗಳಾಗುತ್ತಿದ್ದು, ಇ.ಎಸ್‌.ಐ. ಆಸ್ಪತ್ರೆಯಲ್ಲೂ ಹೆರಿಗೆ ಸೌಲಭ್ಯ ಪ್ರಾರಂಭವಾದಲ್ಲಿ ಬೇರೆ ಆಸ್ಪತ್ರೆಗಳ ಮೇಲಿನ
ಒತ್ತಡ ಕಡಿಮೆಯಾಗುತ್ತದೆ. ತಾಯಿ ಭಾಗ್ಯ ಯೋಜನೆಯಡಿ ಹೆರಿಗೆಯಾದಲ್ಲಿ ಪ್ರತಿ ಹೆರಿಗೆಗೆ ಸರ್ಕಾರದಿಂದ 3000ರೂ.
ನೀಡಲಾಗುವುದು ಎಂದರು.

ವಿಭಾಗದಲ್ಲಿ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡಲು ಎಲ್ಲ ಹೆರಿಗೆಗಳು ಆಸ್ಪತ್ರೆಗಳಲ್ಲಿ ಆಗುವ
ಹಾಗೆ ನೋಡಿಕೊಳ್ಳಬೇಕು. ತಾಲೂಕು ಆಸ್ಪತ್ರೆಗಳಲ್ಲಿಯೂ ಸಹ ಕ್ಲಿಷ್ಟಕರ ಹೆರಿಗೆ ಮಾಡಿಸುವಂತಹ ಸೌಲಭ್ಯ, ಸಿಜೇರಿಯನ್‌ ಶಸ್ತ್ರ ಚಿಕಿತ್ಸೆ ಪ್ರಾರಂಭಿಸಬೇಕು. ವಿಭಾಗದಲ್ಲಿ ತಜ್ಞ ವೈದ್ಯರ ಕೊರತೆಯಿದ್ದು, ಸರ್ಕಾರ ತಜ್ಞ ವೈದ್ಯರನ್ನು
ಭರ್ತಿ ಮಾಡುವವರೆಗೆ ಬೋಧನಾ ಆಸ್ಪತ್ರೆಗಳಲ್ಲಿನ ಪೋಸ್ಟ್‌ ಗ್ರಾಜ್ಯುಯೆಟ್‌ ವಿದ್ಯಾರ್ಥಿಗಳ ಸೇವೆ ಪಡೆಯಲು ಚಿಂತಿಸಲಾಗುವುದು ಎಂದರು.

ಜಿಲ್ಲೆಯ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಈಗಾಗಲೇ ಕೆಲವು ತಜ್ಞ ವೈದ್ಯರಿದ್ದು, ಖಾಲಿಯಿರುವ ತಜ್ಞ ವೈದ್ಯರ ಸೇವೆ
ನೀಡಲು ಎರಡು ದಿನಕ್ಕೊಂದು ಬಾರಿ ಬೋಧನಾ ಆಸ್ಪತ್ರೆಯ ತಜ್ಞ ವೈದ್ಯರ ಸೇವೆ ಪಡೆಯಲಾಗುವುದು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಾಲೂಕು ಆಸ್ಪತ್ರೆಗಳಲ್ಲಿ ಕೊರತೆಯಿರುವ ತಜ್ಞ ವೈದ್ಯರ ಹಾಗೂ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುವ ದಿನಾಂಕಗಳನ್ನು ಬೋಧನಾ ಆಸ್ಪತ್ರೆಗಳಿಗೆ ನೀಡಬೇಕು
ಎಂದು ಹೇಳಿದರು.

ಇಎಸ್‌ಐ, ಬಸವೇಶ್ವರ, ಕೆ.ಬಿ.ಎನ್‌., ಎಂ.ಆರ್‌.ಎಂ.ಸಿ. ಹಾಗೂ ಜಿಮ್ಸ್‌ ತಜ್ಞ ವೈದ್ಯರು ವಿಶೇಷ ಆರೋಗ್ಯ ತಪಾಸಣಾ
ಶಿಬಿರದಲ್ಲಿ ಭಾಗವಹಿಸಬೇಕು. ಇದಕ್ಕೆ ಎಚ್‌.ಕೆ.ಆರ್‌.ಡಿ.ಬಿ.ಯಿಂದ ಅವಶ್ಯಕ ಸಹಾಯ ನೀಡಲಾಗುವುದು
ಎಂದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಗೈನಾಕಾಲಾಜಿಸ್ಟ್‌ ಹಾಗೂ ಮಕ್ಕಳ ತಜ್ಞ (ಪೆಡಿಯಾಟ್ರಿಶಿಯನ್‌) ವೈದ್ಯರನ್ನು ನೇಮಿಸಲಾಗಿದೆ. ಜಿಲ್ಲೆಗೆ ಕೇವಲ ಮೂರು ಅರವಳಿಕೆ ತಜ್ಞ (ಅನಸ್ಥೇಶಿಯಾ) ವೈದ್ಯರಿದ್ದಾರೆ.

ಪ್ರತಿ ತಿಂಗಳು ಸೇಡಂ ತಾಲೂಕು ಆಸ್ಪತ್ರೆಯಲ್ಲಿ ಅಂದಾಜು 200 ಹೆರಿಗೆಗಳು ಹಾಗೂ ಉಳಿದ ತಾಲೂಕು ಆಸ್ಪತ್ರೆಗಳಲ್ಲಿ ಅಂದಾಜು 100 ಹೆರಿಗೆಗಳು ಆಗುತ್ತವೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಅವಶ್ಯಕ ರಕ್ತದ ಸಂಗ್ರಹ ಇರುತ್ತದೆ ಎಂದು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಇ.ಎಸ್‌ .ಐ. ಡೀನ್‌ ಡಾ| ನಾಗರಾಜ, ಜಿಮ್ಸ್‌ ಅಧಿಕಾರಿ ದೊಡಮನಿ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next