ಬೆಂಗಳೂರು: 2023 ಮಾರ್ಚ್/ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯು 2019ನೇ ಸಾಲಿನಲ್ಲಿ ನಡೆಸಿದ್ದ ಮಾದರಿಯಲ್ಲಿಯೇ ನಡೆಯಲಿದೆ. ಪ್ರಮುಖವಾಗಿ ವಿಸ್ತೃತ ಉತ್ತರ ಬರೆಯುವ ಪ್ರಶ್ನೆಪತ್ರಿಕೆ ಇರಲಿದೆ, ಶೇ.75 ಕಡ್ಡಾಯ ಹಾಜರಾತಿ ಪಾಲನೆ ಮತ್ತು ಪರಿಷ್ಕೃತಗೊಂಡಿರುವ ಪಠ್ಯಕ್ಕೆ ಪರೀಕ್ಷೆ ನಡೆಯಲಿದೆ.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮುಂಬರುವ 2023 ಮಾರ್ಚ್/ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ಪ್ರಕ್ರಿಯೆ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಈ ಬಾರಿ ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯುತ್ತಿರುವ ಕಾರಣ ಶೇ.75 ಹಾಜರಾತಿ ಕಡ್ಡಾಯಗೊಳಿಸಿದೆ. ಭೌತಿಕ ತರಗತಿಗಳು ನಡೆಯುತ್ತಿರುವ ಕಾರಣ 2019-20ರ ಮಾದರಿಯಲ್ಲಿ ಪ್ರಶ್ನೆಪತ್ರಿಕೆ ಇರಲಿದೆ. ಪ್ರಶ್ನೆಪತ್ರಿಕೆ ಮಾದರಿ ಮತ್ತು ಕಠಿಣತೆ ಮಟ್ಟದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೇ ಯಥಾವತ್ ಅಳವಡಿಸಿಕೊಳ್ಳಲಾಗಿದೆ. ಎಂಸಿಕ್ಯು ಬದಲಾಗಿ ವಿಸ್ತೃತವಾಗಿ ಉತ್ತರ ಬರೆಯುವ ಪ್ರಶ್ನೆಪತ್ರಿಕೆ ಇರಲಿದೆ.
ಪರೀಕ್ಷೆಗೆ ಪರಿಷ್ಕೃತ ಪಠ್ಯಕ್ರಮ: ಮುಖ್ಯ ಪರೀಕ್ಷೆಗೆ ಪರಿಷ್ಕೃತ ಪಠ್ಯವನ್ನು ಅಳವಡಿಸಿಕೊಳ್ಳಲಾಗಿದೆ. 2020-21ಕ್ಕಿಂತ ಹಿಂದಿನ ಸಾಲಿನಲ್ಲಿ ಅನುತ್ತೀರ್ಣರಾಗಿರುವ ಪುನರಾವರ್ತಿತ ಅಭ್ಯರ್ಥಿಗಳು ಮತ್ತು ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಪ್ರಸಕ್ತ ಸಾಲಿನಲ್ಲಿ ಪರಿಷ್ಕರಣೆಯಾಗಿರುವ ಪೂರ್ಣ ಪಠ್ಯಗಳನ್ನು ಅಭ್ಯಾಸ ಮಾಡಿ ಪರೀಕ್ಷೆಗೆ ಹಾಜರಾಗಬೇಕು. 2020-21 ಮತ್ತು 2021-22ನೇ ಸಾಲಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಶಾಲಾ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳಾಗಿದ್ದವರು ಪ್ರಥಮ ಪ್ರಯತ್ನದಲ್ಲಿ ಅನುತ್ತೀರ್ಣರಾಗಿದ್ದರೆ, ಈ ಬಾರಿಯೂ ಹಿಂದಿನ ವರ್ಷದ ಪಠ್ಯಕ್ರಮವನ್ನೇ ಪರೀಕ್ಷೆಗೆ ಅಭ್ಯಾಸ ಮಾಡಬೇಕು ಎಂದು ತಿಳಿಸಿದೆ.
ಸ್ಯಾಟ್ಸ್ ಮಾಹಿತಿ ಕಡ್ಡಾಯ: ಈ ಬಾರಿಯಿಂದ ಹೊಸದಾಗಿ ವಿದ್ಯಾರ್ಥಿಗಳ ನೋಂದಣಿಯಲ್ಲಿ ಸ್ಟೂಡೆಂಟ್ಸ್ ಅಚೀವ್‌ಮೆಂಟ್ಸ್ ಟ್ರ್ಯಾಕಿಂಗ್ ಸಿಸ್ಟಂ (ಸ್ಯಾಟ್ಸ್) ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವಂತೆ ಸೂಚಿಸಿದೆ. ಪರೀಕ್ಷೆ ಶುಲ್ಕವನ್ನು ಹಿಂದಿನ ವರ್ಷ ಪಡೆದಿದ್ದ 607 ರೂ. ಶುಲ್ಕವನ್ನೇ ಈ ವರ್ಷವೂ ಮುಂದುವರಿಸಿದೆ.
ಮುಂದಿನ ವಾರದಿಂದ ನೋಂದಣಿ: ಪರೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿಕೊಳ್ಳಲು ಅನುವಾಗಲಿ ಎಂಬ ಉದ್ದೇಶದಿಂದ ಪರೀಕ್ಷಾ ಅಧಿಸೂಚನೆ ಹೊರಡಿಸಲಾಗಿದೆ. ಮುಂದಿನ ವಾರದಿಂದ ಪರೀಕ್ಷಾ ನೋಂದಣಿ ಪ್ರಕ್ರಿಯೆ ಆರಂಭ ಮಾಡಲಾಗುತ್ತದೆ ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ.