ಮಂಗಳೂರು: ಭೀಕರ ಬರಗಾಲದ ಹಿನ್ನೆಲೆಯಲ್ಲಿ ರೈತರ ರಕ್ಷಣೆಗಾಗಿ ಕೃಷಿ ಸಾಲಗಳ ಮರುಪಾವತಿ ಅವಧಿಯನ್ನು 2017ನೇ ಎಪ್ರಿಲ್ ತಿಂಗಳ ಅಂತ್ಯದ ವರೆಗೆ ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿ ಅವರಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮನವಿ ಮಾಡಿದ್ದಾರೆ.
ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಕಾರ್ಯಧಿವ್ಯಾಪ್ತಿಯಲ್ಲಿರುವ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಒಟ್ಟು 167 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 92,748 ರೈತ ಸದಸ್ಯರು ಅಲ್ಪಾವಧಿ ಬೆಳೆ ಸಾಲ ಮತ್ತು 49,689 ರೈತ ಸದಸ್ಯರು ಮಧ್ಯಮಾವಧಿ ಸಾಲ ಪಡೆದಿದ್ದಾರೆ. ಆ ಪೈಕಿ 5,117 ಮಂದಿ ರೈತ ಸದಸ್ಯರಿಂದ ಒಟ್ಟು 2037.18 ಲಕ್ಷ ರೂ. ಕೃಷಿ ಸಾಲ ವಸೂಧಿಲಾಗದೆ ಪ್ರಸ್ತುತ ಸುಸ್ತಿ ಬಾಕಿಯಾಗಿರುತ್ತದೆ.
ರಾಜ್ಯದಲ್ಲಿ 2016ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಮಳೆಯಾಗದೆ ಭೀಕರ ಬರಗಾಲ ಉಂಟಾಗಿದೆ. ಮಳೆಯ ಅಭಾವದಿಂದ ಕೃಷಿ ಚಟುವಟಿಕೆಗಳು ಸ್ಥಗಿತವಾಗಿ ಕೃಷಿ ಉತ್ಪನ್ನವಾಗದೆ ಬೆಳೆ ನಾಶವಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.
ರೈತರು ದಿನಾಂಕದೊಳಗೆ ಪಾವತಿಸಲು ಸಾಧ್ಯವಾಗದೆ ಅನಿವಾರ್ಯವಾಗಿ ಸುಸ್ತಿದಾರರಾಗುವುದರಿಂದ ರಾಜ್ಯ ಸರಕಾರ ನೀಡುತ್ತಿರುವ ಬಡ್ಡಿ ಸಹಾಯಧನದ ಪ್ರಯೋಜನ ದಿಂದ ವಂಚಿತರಾಗುತ್ತಿದ್ದಾರೆ.
ಸಕಾಲದಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗದೆ ರೈತ ಸದಸ್ಯರು ಸರಕಾರದ ಬಡ್ಡಿ ಸಹಾಯಧನದ ನೆರವು ಪಡೆಯಲು ಅವಕಾಶ ವಂಚಿತರಾಗಿ ಇದುವರೆಗೂ ಸುಸ್ತಿದಾರರಾಗದೇ ಇರುವಂತಹ ರೈತರು ಸಹ ಅನಿವಾರ್ಯವಾಗಿ ಪರಿಸ್ಥಿತಿ ಒತ್ತಡದಿಂದ ಸುಸ್ತಿದಾರರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಕೃಷಿ ಸಾಲಗಳ ಮರುಪಾವತಿ ಅವಧಿ ವಿಸ್ತರಣೆ ಮಾಡಿ ಬಡ್ಡಿ ರಿಯಾಯಿತಿ ಯೋಜನೆ ಫಲವನ್ನು ರೈತರಿಗೆ ನೀಡುವಂತೆ ಅವರು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದಾರೆ.